ಮುಂಡಗೋಡ: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮುಖಂಡರಿಂದ ಪ್ರಧಾನ ಮಂತ್ರಿಗೆ ಮನವಿ

Update: 2018-04-02 16:46 GMT

ಮುಂಡಗೋಡ,ಎ.02: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ದುರ್ಬಲಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಪುನರ್ ಪರಿಶೀಲಿಸಿ ಅರ್ಜಿ ಸಲ್ಲಿಸುವಂತೆ ತಾಲೂಕಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮುಖಂಡರು ಪ್ರಧಾನಿಮಂತ್ರಿಗಳಿಗೆ ತಹಶೀಲ್ದಾರ್ ಮುಖಾಂತರ ಮನವಿ ಸೋಮವಾರ ಅರ್ಪಿಸಿದರು.

ಮನವಿಯಲ್ಲಿ ಕಳೆದ ಮಾರ್ಚ್‍ನಲ್ಲಿ ಸುಪ್ರೀಂ ಕೊರ್ಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವ್ಯಕ್ತಿಗಳು ದೌರ್ಜನ್ಯ ಕಾಯ್ದೆಯಡಿ ಯಾವುದೇ ಸರ್ಕಾರಿ ನೌಕರರ ವಿರುದ್ದ ದೂರು ದಾಖಲಾದರೆ ತಕ್ಷಣಕ್ಕೆ ಅವರನ್ನು ಬಂಧಿಸಕೂಡದು ಎಂದು ತೀರ್ಪು ನೀಡಿದ್ದು, ಇದರಲ್ಲಿ ಉದ್ದೇಶ ಪೂರಕವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯನ್ನು ದುರ್ಬಲಗೊಳಸುವ ವ್ಯವಸ್ಥಿತ ಹುನ್ನಾರ ನಡೆದಿದೆ. ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಜನರ ಮೇಲೆ ದಿನದಿಂದ ದಿನಕ್ಕೆ ದೌರ್ಜನ್ಯಗಳು ಹೆಚ್ಚಾಗುತ್ತಾ ಇದ್ದರೂ ಸಹ ಈ ರೀತಿ ಸುಪ್ರೀಂ ಕೋರ್ಟ್ ತೀರ್ಪು ನೀಡಿರುವುದು ನಮ್ಮ ಸಮುದಾಯದಲ್ಲಿ ನಡುಕು ಹುಟ್ಟಿಸಿದೆ. ದಯವಿಟ್ಟು ತಾವು ಈ ಸುಪ್ರೀಂ ಕೋರ್ಟ್ ತೀರ್ಪನ್ನು ಪುನರ್ ಪರಿಶೀಲನೆ ಮಾಡಲು ಅರ್ಜಿ ಸಲ್ಲಿಸಿ ಈ ಹಿಂದೆ ಇದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಕಾಯ್ದೆಯನ್ನು ಮುಂದವರಿಸಿಕೊಂಡು ಹೋಗಬೇಕೆಂದು ಹಾಗೂ ಯಾವುದೇ ಕಾರಣಕ್ಕೂ ಸದರಿ ಕಾನೂನನ್ನು ದುರ್ಬಲಗೊಳಿಸಬಾರದೆಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಎಸ್‍ಸಿ ಎಸ್ಟಿ ಸಂಘಟನೆಗಳ ಪ್ರಮುಖರಾದ ಚಿದಾನಂದ ಹರಿಜನ, ಎಸ್.ಫಕೀರಪ್ಪ, ಅಶೋಕ ಚಲವಾದಿ, ಶರೀಫ ಮುಗಳಕಟ್ಟಿ,ಕೃಷ್ಣ ಹಿರಳ್ಳಿ, ಬಸವರಾಜ ಹಳ್ಳೆಮ್ಮನವರ, ದುರ್ಗಪ್ಪ ಭೋವಿ, ಬಸಂತ ಮಡ್ಲಿ, ಹನಮಂತ ಭಜಂತ್ರಿ ಗುಡ್ಡಪ್ಪ ವಾಸನ್, ಬಸವರಾಜ ಹರಿಜನ, ರಾಮಣ್ಣ ಮಳಗನಕೊಪ್ಪ, ಸೇರಿದಂತೆ ಮುಂತಾದವರು ಇದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News