ತುಮಕೂರು: ಜಿಲ್ಲಾ ಪೊಲೀಸ್ ವತಿಯಿಂದ 'ಪೊಲೀಸ್ ಧ್ವಜ ದಿನಾಚರಣೆ' ಸಮಾರಂಭ
ತುಮಕೂರು,ಎ.02: ಕಾನೂನು ಸುವ್ಯವಸ್ಥೆ ಕಾಪಾಡಲು ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪೊಲೀಸರು ಧರಿಸುವ ಖಾಕಿ ಸಮಾಜ ಮತ್ತು ಆರಕ್ಷಕರಿಗೆ ರಕ್ಷಣಾ ಕವಚವಿದ್ದಂತೆ ಎಂದು ನಿವೃತ್ತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಬಿ. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆ ಸಮಾರಂಭದಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಖಾಕಿ ಎಂದಾಕ್ಷಣ ಜನರಲ್ಲಿ ಭಯ ಮೂಡುವ ವಾತಾವರಣದ ಬದಲು, ಜನಸ್ನೇಹಿ ವಾತಾವರಣವನ್ನು ಪೊಲೀಸರು ನಿರ್ಮಾಣ ಮಾಡಬೇಕು. ಕರ್ತವ್ಯದಲ್ಲಿದ್ದಾಗ ದಕ್ಷತೆ, ಪ್ರಾಮಾಣಿಕತೆ, ಮಾನವೀಯತೆಯಿಂದ ನಡೆದುಕೊಂಡರೆ, ನಿವೃತ್ತಿಯ ನಂತರವೂ ಜನರು ನಮ್ಮನ್ನು ಗುರುತಿಸುತ್ತಾರೆ. ದರ್ಪ, ದೌರ್ಜನ್ಯದಿಂದ ನಡೆದುಕೊಂಡರೆ, ನಿವೃತ್ತಿ ನಂತರ ನಾವು ಜನರಿಗೆ ಪರಿಚಯ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಿವಿ ಮಾತು ಹೇಳಿದರು.
ಸಮಾಜದಲ್ಲಿ ಯಾವುದೇ ರೀತಿಯ ಅನಾಹುತಗಳು ನಡೆದರೂ ಮೊದಲು ಸಾರ್ವಜನಿಕರು ಸಹಾಯ ಕೇಳಿ ಮೊದಲು ಕರೆ ಮಾಡುವುದು ಪೊಲೀಸರಿಗೆ. ನಂತರ ಅಗ್ನಿಶಾಮಕ ದಳ, ಇನ್ನಿತರರಿಗೆ ತಿಳಿಸುತ್ತಾರೆ. ಸಮಾಜದಲ್ಲಿ ಎಂತದ್ದೇ ಕ್ಲಿಷ್ಟಕರ ಪರಿಸ್ಥಿತಿ ನಿರ್ಮಾಣವಾದರೂ, ಅದನ್ನು ತಮ್ಮ ಬುದ್ದಿಮತ್ತೆ ಮತ್ತು ಚಾಣಾಕ್ಷತನದಿಂದ ತಿಳಿಗೊಳಿಸುವ ಪ್ರಯತ್ನವನ್ನು ಪೊಲೀಸರು ಮಾಡುತ್ತಾರೆ. ಕೆಲವೊಮ್ಮೆ ಪೊಲೀಸರು ಕರ್ತವ್ಯಕ್ಕಾಗಿ ಕುಟುಂಬನ್ನು ಮರೆಯುತ್ತಾರೆ. ಹಾಗಾಗಿ ಪೊಲೀಸರು ಕರ್ತವ್ಯದ ಜೊತೆಗೆ ಕುಟುಂಬದ ಆರೋಗ್ಯ ಮತ್ತು ತಮ್ಮ ಆರೋಗ್ಯ ಎರಡನ್ನು ಗಮನಿಸಬೇಕೆಂಬುದು ನಮ್ಮ ಸಲಹೆ ಎಂದು ಜಿ.ಬಿ ಮಂಜುನಾಥ್ ನುಡಿದರು.
ದಿನದ 24 ಗಂಟೆಯೂ ಕಾನೂನು ಸುವ್ಯವಸ್ಥೆ, ಸಮಾಜದ ರಕ್ಷಣೆಗಾಗಿ ಶ್ರಮಿಸುವ ಪೊಲೀಸರು ತಮ್ಮ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಬೇಕು. ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಯಾವುದೇ ರೀತಿಯ ಕಿರಿಕಿರಿ ಉಂಟಾಗದಂತೆ ಕಾನೂನು ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ವೈಯಕ್ತಿಕ ಪ್ರತಿಷ್ಠೆಗಾಗಿ ಹೆಸರು ಗಳಿಸುವ ಮನೋಭಾವದಿಂದ ಖಾಕಿಯನ್ನು ದುಬರ್ಳಕೆ ಮಾಡಿಕೊಳ್ಳಬಾರದು. ನನ್ನ ಸೇವಾವಧಿಯ ಬಹುತೇಕ ವರ್ಷ ತುಮಕೂರು ಜಿಲ್ಲೆಯಲ್ಲಿಯೇ ಕಳೆದಿದ್ದೇನೆ. ಜಿಲ್ಲೆಯಲ್ಲಿ ತುಂಬ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ತಂಡವಿದೆ. ಹಲವು ಕ್ಷಿಷ್ಟಕರ ಸನ್ನಿವೇಶಗಳಲ್ಲಿ ಅತ್ಯಂತ ಜಾಣ್ಮೆಯಿಂದ ನಡೆದುಕೊಂಡು ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಚರ್ಚ್ ಮೇಲಿನ ಹಲ್ಲೆ, ರೈತರ ಹೋರಾಟ, ಸಿದ್ದಗಂಗಾ ಮಠದ ಅಂತರಿಕ ವಿವಾದ ಇನ್ನೂ ಹಲವು ವಿವಾದಗಳನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ಜಿಲ್ಲೆಯ ಪೊಲೀಸರಿಗಿದೆ ಎಂದು ಜಿ.ಬಿ.ಮಂಜುನಾಥ್ ಪ್ರಶಂಸಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್, 1949 ರಲ್ಲಿ ಧ್ವಜ ದಿನಾಚರಣೆ ಸೇನೆಯಲ್ಲಿ ಆರಂಭಿಸಲಾಯಿತು. ದೇಶದಲ್ಲಿ ಪೊಲೀಸ್ ಆಕ್ಟ್ ಜಾರಿಗೆ ಬಂದ ನಂತರ 1965 ಏ.2 ರಿಂದ ಪೊಲೀಸ್ ಧ್ವಜ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗುತ್ತಿದೆ. ಪೊಲೀಸರು ಮತ್ತು ಅವರ ಕುಟುಂಬದವರ ಹಿತ ಕಾಪಾಡುವುದು ಈ ಪೊಲೀಸ್ ಧ್ವಜ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.
ಜಿಲ್ಲೆಯ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಲ್ಯಾಣ ನಿಧಿಯ ನಿಶ್ಚಿತ ಠೇವಣಿ ಖಾತೆಯಲ್ಲಿ 21,82,922 ರೂ.,ಉಳಿತಾಯ ಖಾತೆಯಲ್ಲಿ 1,55,763 ರೂ. ಹಣ ಇದೆ. 2017ನೇ ಸಾಲಿನಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಧ್ವಜ ಮಾರಾಟದಿಂದ 4,13,261 ರೂ. ಸಂಗ್ರಹವಾಗಿದೆ.ಈ ಹಣದಲ್ಲಿ ಸುಮಾರು 1000 ನಿವೃತ್ತ ಪೊಲೀಸರ ವೈದ್ಯಕೀಯ ವೆಚ್ಚಕ್ಕೆ 4,80,180 ರೂ. ಹಾಗೂ ಶವ ಸಂಸ್ಕಾರಕ್ಕಾಗಿ 1.30 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ 2017ನೇ ಸಾಲಿನಲ್ಲಿ ನಿವೃತ್ತರಾಗಿರುವ ಅಡಿಷನಲ್ ಎಸ್ಪಿ ಜಿ.ಬಿ. ಮಂಜುನಾಥ್ ಸೇರಿದಂತೆ 45 ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಇದೇ ವೇಳೆ ಮಹಿಳಾ ಪೊಲೀಸ್, ಪೊಲೀಸ್ ತರಬೇತಿ ತಂಡ ಹಾಗೂ ಜಿಲ್ಲೆಯ 6 ಉಪವಿಭಾಗಗಳ ಪೊಲೀಸ್ ತಂಡಗಳಿಂದ ಆಕರ್ಷಕ ಪಥಸಂಚಲನೆ ನಡೆಯಿತು.
ಸಮಾರಂಭದಲ್ಲಿ ಅಡಿಷನಲ್ ಎಸ್ಪಿ ಡಾ.ಶೋಭರಾಣಿ, ಡಿವೈಎಸ್ಪಿಗಳಾದ ನಾಗರಾಜು, ಕಲ್ಲೇಶಪ್ಪ, ವೆಂಕಟೇಶನಾಯ್ಡು ಸೇರಿದಂತೆ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ನಿವೃತ್ತ ಪೊಲೀಸರು ಉಪಸ್ಥಿತರಿದ್ದರು.