ಮಡಿಕೇರಿ: ಪೊಲೀಸ್ ಧ್ವಜ ದಿನಾಚರಣೆ; ಸಿ.ಡಿ.ಆನಂದ್ ರಿಗೆ ಫೀ.ಮಾ ಕೆ.ಎಂ.ಕಾರ್ಯಪ್ಪ ಟ್ರೋಫಿ ಪ್ರಧಾನ
ಮಡಿಕೇರಿ, ಎ.2: ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪೊಲೀಸ್ ಅಧಿಕಾರಿಗಳು ತಮ್ಮ ಆರೋಗ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಬೇಕೆಂದು ನಿವೃತ್ತ ಏರ್ ಮಾರ್ಷಲ್ ಕೆ.ಸಿ. ಕಾರ್ಯಪ್ಪ ಕಿವಿ ಮಾತು ಹೇಳಿದ್ದಾರೆ.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರಸಕ್ತ ಹವಾಮಾನ ವೈಪರೀತ್ಯದ ಸಮಯದಲ್ಲಿ ನೀರನ್ನು ಮಿತವಾಗಿ ಬಳಸುವ ಮೂಲಕ ಪ್ರತಿಯೊಬ್ಬರು ಪರಿಸರ ಕಾಳಜಿ ತೋರಬೇಕೆಂದು ಕರೆ ನೀಡಿದರು. ಮುಂಬರುವ ವಿಧಾನಸಭಾ ಚುನಾವಣೆಯ ಸಂದರ್ಭ ನಿಷ್ಪಕ್ಷಪಾತವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವಂತೆ ಪೊಲೀಸರಿಗೆ ಸಲಹೆ ನೀಡಿದರು.
ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಕೆ.ಎಸ್.ಕುಶಾಲಪ್ಪ ಕರ್ತವ್ಯನಿರತ ಪೊಲೀಸರು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಆಲಿಸಿ ಅರ್ಥೈಸಿಕೊಂಡು ಸೇವೆ ನೀಡುವಂತಾಗಬೇಕು ಎಂದು ತಿಳಿಸಿದರು.
ಸಿ.ಡಿ.ಆನಂದಗೆ ಕಾರ್ಯಪ್ಪ ಟ್ರೋಫಿ
ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಪ್ರತಿ ವರ್ಷ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಸ್ಮರಣಾರ್ಥ ಅವರ ಪುತ್ರ ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರು ನೀಡುತ್ತಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಟ್ರೋಫಿಯನ್ನು ಜಿಲ್ಲೆಯ ಗುಪ್ತದಳದ ಹೆಡ್ ಕಾನ್ಸ್‍ಟೇಬಲ್ ಸಿ.ಡಿ.ಆನಂದ ಅವರಿಗೆ ಇದೇ ಸಂದರ್ಭ ನೀಡಿ ಗೌರವಿಸಲಾಯಿತು.
ಜೊತೆಗೆ ಉತ್ತಮ ಕರ್ತವ್ಯ ನಿರ್ವಹಿಸಿದ ಸುಮಾರು 9 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.
ಕಳೆದ ವರ್ಷ ನಿವೃತ್ತರಾದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸುವುದರೊಂದಿಗೆ ವೈದ್ಯಕೀಯ ವೆಚ್ಚದ ಸಹಾಯಧನವನ್ನು ವಿತರಿಸಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಅವರು ಸ್ವಾಗತಿಸಿದರೆ, ನಿವೃತ್ತ ಪೊಲೀಸ್ ಅಧೀಕ್ಷಕ ಎಂ.ಎ. ಅಪ್ಪಯ್ಯ ವಂದಿಸಿದರು. ಸಮಾರಂಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು, ನಿವೃತ್ತ ಸೇನಾಧಿಕಾರಿಗಳು, ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.