ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಕುರಿತ ತನ್ನ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ

Update: 2018-04-03 14:35 GMT

ಹೊಸದಿಲ್ಲಿ,ಎ.3: ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ(ದೌರ್ಜನ್ಯ ತಡೆ)ಕಾಯ್ದೆ ಕುರಿತು ತನ್ನ ಹಿಂದಿನ ಆದೇಶವನ್ನು ತಡೆ ಹಿಡಿಯಲು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ. ನ್ಯಾಯಾಲಯದ ಆದೇಶವು ಕಾಯ್ದೆಯನ್ನು ದುರ್ಬಲಗೊಳಿಸಿದೆ ಎಂದು ಆರೋಪಿಸಿರುವ ದಲಿತ ಗುಂಪುಗಳು ಸೋಮವಾರ ಕರೆ ನೀಡಿದ್ದ ಭಾರತ ಬಂದ್ ಸಂದರ್ಭದಲ್ಲಿ ತೀವ್ರ ಹಿಂಸಾಚಾರಗಳು ಭುಗಿಲೆದ್ದು, 10 ಜನರು ಮೃತಪಟ್ಟಿದ್ದರು.

ಬೀದಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಮ್ಮ ತೀರ್ಪನ್ನು ಓದಿರದಿರಬಹುದು. ಕೆಲವೊಮ್ಮೆ ಪಟ್ಟಭದ್ರ ಹಿತಾಸಕ್ತಿಗಳೂ ಭಾಗಿಯಾಗಿರುತ್ತವೆ. ಅಮಾಯಕ ಜನರನ್ನು ಬಂಧಿಸಲಾಗುತ್ತಿ ರುವ ಬಗ್ಗೆ ಮಾತ್ರ ನಾವು ಕಳವಳಗೊಂಡಿದ್ದೇವೆ. ನಾವು ಕಾಯ್ದೆಯ ವಿರುದ್ಧವಾಗಿಲ್ಲ. ಆದರೆ ಏಕಪಕ್ಷೀಯವಾಗಿ ಅಮಾಯಕರನ್ನು ದಂಡಿಸುವಂತಿಲ್ಲ. ಆರೋಪದ ಸತ್ಯಾಸತ್ಯತೆ ಖಚಿತಗೊಳ್ಳುವ ಮೊದಲೇ ಜನರನ್ನು ಬಂಧಿಸಬೇಕೆಂದು ಸರಕಾರವೇಕೆ ಬಯಸುತ್ತಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಪ್ರಶ್ನಿಸಿತು.

ಬಲಿಪಶುಗಳಿಗೆ ಪರಿಹಾರ ನೀಡಲು ಎಫ್‌ಐಆರ್ ದಾಖಲಾಗುವವರೆಗೆ ಕಾಯಬೇಕಾಗಿಲ್ಲ ಮತ್ತು ಅಮಾಯಕರ ರಕ್ಷಣೆಯ ಉದ್ದೇಶದಿಂದ ಮಾತ್ರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ ಎಂದು ಅದು ಸ್ಪಷ್ಟಪಡಿಸಿತು.

ಸೋಮವಾರ ಹಲವು ರಾಜ್ಯಗಳಲ್ಲಿ ಜನಜೀವನವನ್ನು ಸ್ತಬ್ಧಗೊಳಿಸಿದ್ದ ವ್ಯಾಪಕ ಹಿಂಸಾಚಾರಗಳನ್ನು ಪ್ರಸ್ತಾಪಿಸಿದ ನ್ಯಾಯಮೂರ್ತಿಗಳಾದ ಎ.ಕೆ.ಗೋಯೆಲ್ ಮತ್ತು ಯು.ಯ. ಲಲಿತ್ ಅವರ ಪೀಠವು, ನ್ಯಾಯಾಲಯವು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರ್ಬಲಗೊಳಿಸಿಲ್ಲ ಮತ್ತು ಕೇಂದ್ರದ ಮರುಪರಿಶೀಲನೆ ಅರ್ಜಿಯ ವಿಚಾರಣೆ ಸಂದರ್ಭ ವಿವರವಾಗಿ ಪರಿಶೀಲಿಸುವುದಾಗಿ ತಿಳಿಸಿತು.

 ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಮುಕ್ತ ವಿಚಾರಣೆಗಾಗಿ ಮರು ಪರಿಶೀಲನೆ ಅರ್ಜಿಯನ್ನು ಉಲ್ಲೇಖಿಸಿ ದಾಗ ಅದನ್ನು ಒಪ್ಪಿಕೊಂಡ ನ್ಯಾಯಾಲಯವು 10 ದಿನಗಳ ಬಳಿಕ ವಿಚಾರಣೆಯನ್ನು ನಿಗದಿಗೊಳಿಸಿತು. ಅಷ್ಟರೊಳಗೆ ಲಿಖಿತ ಹೇಳಿಕೆಗಳನ್ನು ಸಲ್ಲಿಸುವಂತೆ ಅದು ಮಹಾರಾಷ್ಟ್ರ ಸರಕಾರ ಮತ್ತು ಇತರ ಇಬ್ಬರು ಕಕ್ಷಿದಾರರಿಗೆ ಸೂಚಿಸಿತು.

  ಸರ್ವೋಚ್ಚ ನ್ಯಾಯಾಲಯದ ಮಾ.20ರ ತೀರ್ಪು ವ್ಯಾಪಕ ಪರಿಣಾಮಗಳನ್ನು ಹೊಂದಿದ್ದು, ಎಸ್‌ಸಿ/ಎಸ್‌ಟಿ ಕಾಯ್ದೆಯಲ್ಲಿನ ಕಠಿಣ ನಿಬಂಧನೆಗಳನ್ನು ದುರ್ಬಲಗೊಳಿಸಿದೆ. ಭಾರತದ ಜನಸಂಖ್ಯೆಯಲ್ಲಿ ಎಸ್‌ಸಿ/ಎಸ್‌ಟಿ ಸಮುದಾಯ ದವರು ಗಣನೀಯ ಪ್ರಮಾಣದಲ್ಲಿರುವುದರಿಂದ ಈ ತೀರ್ಪು ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡಲಿದೆ. ಅಲ್ಲದೆ ಅದು 1989ರ ದೌರ್ಜನ್ಯ ತಡೆ ಕಾಯ್ದೆಯಲ್ಲಿ ಪ್ರತಿಬಿಂಬಿಸಿರುವಂತೆ ಸಂಸತ್ತಿನ ಶಾಸಕಾಂಗ ನೀತಿಗೂ ವಿರುದ್ಧವಾಗಿದೆ ಎಂದು ಕೇಂದ್ರ ಸರಕಾರವು ಮರುಪರಿಶೀಲನೆ ಅರ್ಜಿಯಲ್ಲಿ ಹೇಳಿದೆ.

 ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣಗಳಲ್ಲಿ ಬಂಧನದ ವೇಳೆ ಕಾನೂನಿನ ದುರುಪಯೋಗವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕಾಯ್ದೆಯಡಿ ಆರೋಪಿ ಸರಕಾರಿ ನೌಕರರನ್ನು ನೇಮಕಾಧಿಕಾರಿಯ ಅನುಮತಿಯನ್ನು ಮತ್ತು ಸರಕಾರಿ ನೌಕರರಲ್ಲದವರನ್ನು ಎಸ್‌ಎಸ್‌ಪಿ ಅನುಮತಿಯನ್ನು ಪಡೆದುಕೊಂಡ ನಂತರವೇ ಬಂಧಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ಮಾ.20ರಂದು ಆದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News