ದತ್ತಪೀಠದ ಬಗ್ಗೆ ಮಾತನಾಡುತ್ತಲೇ 8 ಕೋಟಿ ರೂ. ಬೆಲೆಯ ಮನೆ ಕಟ್ಟಿಸಿದ ಸಿ.ಟಿ ರವಿ: ಪ್ರಮೋದ್ ಮುತಾಲಿಕ್ ಆರೋಪ

Update: 2018-04-03 13:23 GMT

ಚಿಕ್ಕಮಗಳೂರು, ಎ.3: ಬಿಜೆಪಿ ಅವರದ್ದು ಡೋಂಗಿ ಹಿಂದುತ್ವ. ಅವರಿಗೆ ಹಿಂದುತ್ವದ ಬಗ್ಗೆ ನೈಜ ಕಾಳಜಿಯೇ ಇಲ್ಲ. ಮತಗಳಿಕೆಯ ಉದ್ದೇಶದಿಂದ ಮಾತ್ರ ಬಿಜೆಪಿಯವರು ಹಿಂದುತ್ವದ ಬಗ್ಗೆ ಪುಂಗಿ ಊದುತ್ತಾರೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಟೀಕಿಸಿದರು..

ನಗರದಲ್ಲಿ ಮಂಗಳವಾರ ನಡೆದ ಮಧ್ಯ ಕರ್ನಾಟಕ ಭಾಗದ ಶಿವಸೇನೆ ಮುಖಂಡರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರದ್ದು ಡೋಂಗಿ ಹಿಂದುತ್ವ. ಅವರು ಮತಗಳಿಕೆಯ ಸಂದರ್ಭದಲ್ಲಿ ಮಾತ್ರ ಹಿಂದುಗಳನ್ನು ನೆನಪಿಸಿಕೊಳ್ಳುತ್ತಾರೆ. ಬಿಜೆಪಿ ಪಕ್ಷ ನಿಜವಾಗಿಯೂ ಹಿಂದೂಗಳ ಪರವಾಗಿಲ್ಲ ಎಂದು ಟೀಕಿಸಿದ ಅವರು, ಶ್ರೀರಾಮಸೇನೆ ಮಾತ್ರ ಹಿಂದುಗಳ ಪರವಾಗಿದೆ. ಹಿಂದುತ್ವವೇ ಶ್ರೀರಾಮ ಸೇನೆಯ ಪ್ರಮುಖ ಅಜೆಂಡವಾಗಿದೆ ಎಂದರು. 

ಬಿಜೆಪಿ ಆಡಳಿತದಲ್ಲಿದ್ದಾಗಲೇ ದತ್ತಪಾದುಕೆಗಳು 2 ವರ್ಷಗಳ ಕಾಲ ಜಿಲ್ಲಾಧಿಕಾರಿ ಕಚೇರಿಯಲ್ಲಿದ್ದವು. ಆಗ ಗುಹೆಯನ್ನು ದುರಸ್ತಿಪಡಿಸಲು ಈ ಶಾಸಕರಿಂದ ಆಗಲಿಲ್ಲ. ಆದರೆ 8 ಕೋಟಿ ರೂ. ಬೆಲೆಬಾಳುವ ಮನೆಯನ್ನು ಕಟ್ಟಿಸಿಕೊಂಡರು ಎಂದು ಟೀಕಿಸಿದ ಅವರು, ಗೋ ರಕ್ಷಣೆಯ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಕೇಂದ್ರದಲ್ಲಿ ಬಿಜೆಪಿಯೇ ಆಡಳಿತ ನಡೆಸುತ್ತಿದೆ. ಇಡೀ ವಿಶ್ವದಲ್ಲಿ ಅತೀ ಹೆಚ್ಚು ಗೋಮಾಂಸ ರಫ್ತು ಮಾಡುವ ದೇಶ ಭಾರತವಾಗಿದೆ. ಕೇಂದ್ರಕ್ಕೆ ತಾಕತ್ತಿದ್ದರೆ ಗೋಮಾಂಸ ರಫ್ತನ್ನು ರದ್ದುಪಡಿಸಲಿ. ಆಗ ಗೋಹತ್ಯೆ ತಾನಾಗಿಯೇ ನಿಂತು ಹೋಗುತ್ತದೆ ಎಂದು ಸವಾಲು ಹಾಕಿದರು.

ಬಿಜೆಪಿ ರಾಜಕೀಯ ಸ್ವಾರ್ಥಕ್ಕಾಗಿ ಹಿಂದುತ್ವವನ್ನು ಬಳಕೆಮಾಡಿಕೊಂಡು ಹಿಂದುಗಳಿಗೆ ಅನ್ಯಾಯ ಮಾಡುತ್ತಿದೆ. ಆದರೆ ಶ್ರೀರಾಮ ಸೇನೆ ಹಿಂದುತ್ವಕ್ಕಾಗಿ ಯಾವುದೇ ಹೋರಾಟ ಮಾಡಲು ಸಿದ್ದವಾಗಿದೆ ಎಂದ ಅವರು, ದತ್ತಪೀಠದ ಹೆಸರಿನಲ್ಲಿ ರಾಜಕೀಯ ಸ್ಥಾನಮಾನ ಪಡೆದ ಸ್ಥಳೀಯ ಶಾಸಕರು ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ದತ್ತಪೀಠ ವಿವಾದವನ್ನು ಬಗೆಹರಿಸುವುದಾಗಿ ಹೇಳುತ್ತಿದ್ದಾರೆ. ಈ ಹಿಂದೆ ರಾಜ್ಯದಲ್ಲಿ 5 ವರ್ಷ ಬಿಜೆಪಿ ಸರಕಾರ ಆಡಳಿತ ನಡೆಸಿತ್ತು. ಆಗ ಅವರು ಸಚಿವರೂ ಆಗಿದ್ದರು. ಆಗ ಏನೂ ಮಾಡದ ಈ ಶಾಸಕರು ಈಗ ಚುನಾವಣೆಯ ಸಂದರ್ಭದಲ್ಲಿ ದತ್ತಪೀಠದ ವಿಚಾರ ಪ್ರಸ್ತಾಪಿಸಿ ಮತ್ತೊಮ್ಮೆ ಜನರಿಗೆ ಮಂಕುಬೂದಿ ಎರಚಲು ಹೊರಟಿದ್ದಾರೆ ಎಂದು ಚಿಕ್ಕಮಗಳೂರು ಕ್ಷೇತ್ರದ ಹಾಲಿ ಶಾಸಕ ಸಿ.ಟಿ.ರವಿ ವಿರುದ್ಧ ಗುಡುಗಿದರು.

ಶಿವಸೇನೆ ಅಸ್ತಿತ್ವಕ್ಕೆ: ರಾಜ್ಯದಲ್ಲಿ ಶಿವಸೇನೆ ಅಸ್ತಿತ್ವಕ್ಕೆ ಬಂದಿದೆ. ಜೀವರ್ಗಿಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ 60 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಶಿವಸೇನೆ ಕಣಕ್ಕಿಳಿಸಲಿದೆ ಎಂದ ಅವರು, ಸಿದ್ದಲಿಂಗ ಸ್ವಾಮೀಜಿ ಜೀವರ್ಗಿಯಲ್ಲಿ ಕಣಕ್ಕಿಳಿಯಲಿದ್ದಾರೆ. ತಾನು ತೆರದಾಳ ಅಥವಾ ಶೃಂಗೇರಿ ಕ್ಷೇತ್ರದಲ್ಲಿ ಕಣಕ್ಕಿಳಿಯುವ ಇಚ್ಛೆ ಹೊಂದಿದ್ದೇನೆ. ಶೃಂಗೇರಿಯಿಂದಲೇ ಕಣಕ್ಕಿಳಿಯುವಂತೆ ಒತ್ತಡ ಬರುತ್ತಿದೆ. 2 ದಿನಗಳಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಮುತಾಲಿಕ್ ಈ ವೇಳೆ ತಿಳಿಸಿದರು.

ಕನ್ನಡ ನಾಡು, ನುಡಿ, ಜಲ ವಿಚಾರ ಬಂದಾಗ ಕರ್ನಾಟಕ ಶಿವಸೇನೆ ರಾಜ್ಯದ ಪರವಾಗಿಯೇ ಇರುತ್ತದೆ. ಈ ವಿಚಾರದಲ್ಲಿ ಯಾವುದೇ ರೀತಿಯ ಹೊಂದಾಣಿಕೆ ಇಲ್ಲ. ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು. ಈ ವಿಚಾರ ನ್ಯಾಯಾಲಯದಲ್ಲಿದೆ. ಮರಾಠಿಗರಿಗೆ ಯಾವ ರೀತಿ ಅವರ ಭಾಷೆಯ ಬಗ್ಗೆ ಅಭಿಮಾನವಿದೆಯೋ ಅದೇ ರೀತಿಯ ಅಭಿಮಾನ ನಮಗೂ ಕನ್ನಡದ ಬಗ್ಗೆ ಇದೆ ಎಂದು ಮತಾಲಿಕ್ ತಿಳಿಸಿದರು.

ಸೇನೆಯ ಮುಖಂಡರಾದ ಮಹೇಶ್ ಕುಮಾರ್ ಕಟ್ಟಿನಮನೆ, ಗಂಗಾಧರ್ ಕುಲಕರ್ಣಿ, ರಂಜಿತ್ ಶೆಟ್ಟಿ, ಶಿವಕುಮಾರ್ ಶೆಟ್ಟಿ, ಆನಂದ ಶೆಟ್ಟಿ, ಅರ್ಜುನ್, ಶಾರದಮ್ಮ ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News