ಕೇವಲ ಭಾಷಣ, ಸುಳ್ಳು ಭರವಸೆ ಮೂಲಕ ದೇಶ ಮುನ್ನಡೆಸಲು ಆರೆಸ್ಸೆಸ್ ಮೋದಿಗೆ ಹೇಳಿಕೊಟ್ಟಿದೆ: ರಾಹುಲ್ ಗಾಂಧಿ

Update: 2018-04-03 13:49 GMT

ಶಿವಮೊಗ್ಗ, ಏ. 3: ಆರೆಸ್ಸೆಸ್ ಸಂಸ್ಥೆಯು ಪ್ರಧಾನಿ ನರೇಂದ್ರ ಮೋದಿಯವರಿಗೆ ಕೇವಲ ಭಾಷಣ, ಸುಳ್ಳು ಭರವಸೆ ಮೂಲಕ ದೇಶ ಮುನ್ನಡೆಸುವಂತೆ ಹೇಳಿಕೊಟ್ಟಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದರು.

ಶಿವಮೊಗ್ಗದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ ನಂತರ ಗೋಪಿ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ವಿಜಯ್ ಮಲ್ಯ, ನೀರವ್ ಮೋದಿ, ಲಲಿತ್ ಮೋದಿಯವರು ಬ್ಯಾಂಕ್‍ಗಳಿಗೆ ವಂಚಿಸಿ ದೇಶ ತೊರೆದಿದ್ದಾರೆ. ಇದರಿಂದ ದೇಶದ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದು ಬೀಳುವ ಸ್ಥಿತಿಗೆ ಬಂದಿದೆ. ಇಷ್ಟೆಲ್ಲದರ ಹೊರತಾಗಿಯೂ ಮೋದಿ ಮಾತನಾಡುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಅಧಿಕಾರಕ್ಕೆ ಬಂದರೆ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ರೈತರ ಬೆಳೆಗೆ ಸೂಕ್ತ ಬೆಲೆ ನಿಗದಿ, ಹೊರದೇಶದಲ್ಲಿರುವ ಕಪ್ಪುಹಣ ತಂದು ದೇಶದ ಪ್ರತಿಯೋಬ್ಬರ ಖಾತೆಗೂ 15 ಲಕ್ಷ ರೂ. ಜಮಾ ಮಾಡುವುದಾಗಿ ಹೇಳಿದ್ದರು. ಆದರೆ ಚುನಾವಣೆಯಲ್ಲಿ ಅವರು ನೀಡಿದ್ದ ಯಾವೊಂದು ಭರವಸೆಗಳೂ ಈಡೇರಿಸಿಲ್ಲ. ಅವರು ಜಾಣ ಮೌನಕ್ಕೆ ಶರಣಾಗಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಆಡಳಿತದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೊಳಿಸುವುದಾಗಿ ಮೋದಿ ಘೋಷಿಸಿದ್ದರು. ಆದರೆ ಇದೀಗ ಅವರು ಭಾಗವಹಿಸುವ ಸಮಾರಂಭದ ಎಡ - ಬಲಗಳಲ್ಲಿ ಭ್ರಷ್ಟಾಚಾರಿಗಳೇ ಕಾಣ ಸಿಗುತ್ತಿದ್ದಾರೆ. ಬಲಗಡೆ ಜೈಲಿಗೆ ಹೋಗಿ ಬಂದ ಬಿ.ಎಸ್.ಯಡಿಯೂರಪ್ಪ ಇದ್ದರೆ, ಎಡಗಡೆ ನಾನಾ ಭ್ರಷ್ಟಾಚಾರ ಆರೋಪ ಹೊತ್ತ ಮುಖಂಡರೇ ಕಾಣ ಸಿಗುತ್ತಾರೆ ಎಂದು ಲೇವಡಿ ಮಾಡಿದರು. 

ಭ್ರಷ್ಟಾಚಾರ ನಿಮೂರ್ಲನೆ ಮಾಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ, ಇದೀಗ ಭ್ರಷ್ಟಾಚಾರಿಗಳನ್ನೇ ತಮ್ಮ ಅಕ್ಕಪಕ್ಕ ಇಟ್ಟುಕೊಂಡು ಆಡಳಿತ ನಡೆಸುತ್ತಿದ್ದಾರೆ. ಒಂದರ ನಂತರ ಒಂದು ಹಗರಣಗಳು ಹೊರಬರಲಾರಂಭಿಸಿವೆ. ಅಮಿತ್ ಶಾ ಪುತ್ರ ಜೈಶಾ ಕಂಪೆನಿಯ ಅವ್ಯವಹಾರದ ಬಗ್ಗೆ ಮೋದಿ ಒಂದೇ ಒಂದು ಮಾತನಾಡುತ್ತಿಲ್ಲ. ಕರ್ನಾಟಕ ರಾಜ್ಯದ ಹೆಚ್‍ಎಎಲ್‍ನೊಂದಿಗೆ ಒಪ್ಪಂದು ರದ್ದುಗೊಳಿಸಿ, ಫ್ರಾನ್ಸ್ ದೇಶದಿಂದ ರಫೇಲ್ ಯುದ್ದ ವಿಮಾನ ಖರೀದಿ ಮಾಡಲಾಗಿದೆ. ಇದರಲ್ಲಿಯೂ ಭಾರೀ ಅಕ್ರಮ ನಡೆದಿದೆ. ಈ ಬಗ್ಗೆಯೂ ಮೋದಿ ಮಾತನಾಡುತ್ತಿಲ್ಲ. ಹಣಕಾಸು ಸಚಿವ ಅರುಣ್ ಜೇಟ್ಲಿಯವರ ಪುತ್ರಿಯು ನೀರವ್ ಮೋದಿಗೆ ಸೇರಿದ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಕುರಿತಂತೆಯೂ ಮೋದಿ ಬಾಯ್ಬಿಡುತ್ತಿಲ್ಲ. ದೇಶದ ಬಡ ರೈತರ ಸಾಲ ಮನ್ನಾ ಮಾಡಿ ಎಂದರೆ ಇದರ ಬಗ್ಗೆ ಕೂಡ ಮಾತನಾಡುವುದಿಲ್ಲ. ಲಕ್ಷಾಂತರ ಕೋಟಿ ರೂ.ಗಳು ದೇಶದ ಕೆಲವೇ ಕೆಲ ಬಂಡವಾಳಶಾಹಿಗಳ ಕೈ ಸೇರಿದ ಬಗ್ಗೆಯೂ ಮೌನವಾಗಿದ್ದಾರೆ ಎಂದು ಪ್ರಧಾನಿ ವಿರುದ್ದ ಹರಿಹಾಯ್ದರು. 

ಸ್ನಾತಕೋತ್ತರ ವಿದ್ಯಾರ್ಥಿ ರೋಹಿತ್ ವೇಮುಲ ಹತ್ಯೆಯಾದರು, ಗುಜರಾತ್ ರಾಜ್ಯದಲ್ಲಿ ದಲಿತರ ಕಗ್ಗೊಲೆಗಳಾದರೂ ಮೋದಿ ಮಾತನಾಡುವುದಿಲ್ಲ. ದೇಶದಲ್ಲಿ ದಲಿತರು, ಆದಿವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟಿ, ದಲಿತರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಪ್ರಧಾನಮಂತ್ರಿ ವಿಫಲರಾಗಿದ್ದಾರೆ ಎಂದು ದೂರಿದರು. 

ಚೀನಾವು ದೇಶದ ಭೂ ಪ್ರದೇಶದ ಅತಿಕ್ರಮಣ ನಡೆಸುತ್ತಿದೆ. ಡೋಕ್ಲಾಂನಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಆದರೆ ಪ್ರಧಾನಮಂತ್ರಿಯೂ ದೇಶದ ಹಿತಾಸಕ್ತಿ ರಕ್ಷಣೆಯತ್ತ ಗಮನಹರಿಸಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಕೇವಲ ಪೊಳ್ಳು ಆಶ್ವಾಸನೆ, ಭರವಸೆ ನೀಡುವಲ್ಲಿ ತಲ್ಲೀನವಾಗಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಉತ್ತಮ ಸರ್ಕಾರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದೆ. ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ದೀನದಲಿತರು, ಶೋಷಿತರು ಸೇರಿದಂತೆ ಎಲ್ಲ ವರ್ಗಗಳ ಶ್ರೇಯೋಭಿವೃದ್ದಿಗೆ ಪ್ರಾಮಾಣಿಕ ಗಮನಹರಿಸಿದೆ. ದೇಶದ ದಲಿತರ ಅಭಿವೃದ್ದಿಗೆ ಕೇಂದ್ರ ಸರ್ಕಾರ ಖರ್ಚು ಮಾಡುತ್ತಿರುವ ಅನುದಾನದಲ್ಲಿ ಅರ್ಧದಷ್ಟು ಅನುದಾನವನ್ನು ಕರ್ನಾಟಕ ರಾಜ್ಯ ಸರ್ಕಾರವು ದಲಿತರ ಅಭಿವೃದ್ದಿಗೆ ಮೀಸಲಿಟ್ಟಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 

ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಲೋಕಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು. 

'ಅಮಿತ್ ಶಾ ಸತ್ಯ ಹೇಳಿದ್ದಾರೆ...'
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ದೇಶದಲ್ಲಿ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ ಎಂದು ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಮಿತ್ ಶಾರವರ ಹೇಳಿಕೆ ಸರಿಯಾಗಿದೆ. ಕೊನೆಗೂ ಅವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿಯಂತಹ ಭ್ರಷ್ಟ ಸರ್ಕಾರ ಅಧಿಕಾರಕ್ಕೆ ಬರಬಾರದು ಎಂದು ರಾಹುಲ್ ಗಾಂಧಿ ತಿಳಿಸಿದರು. 

ಇತ್ತೀಚೆಗೆ ಸಿಬಿಎಸ್‍ಇ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ, ಲಕ್ಷಾಂತರ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಯಿತು. ಹಾಗೆಯೇ ಕರ್ನಾಟಕ ರಾಜ್ಯದ ವಿಧಾನಸಭೆ ಚುನಾವಣೆ ದಿನಾಂಕ ಕೂಡ ಚುನಾವಣಾ ಆಯೋಗ ಪ್ರಕಟಣೆಗೂ ಮುನ್ನವೇ ಸೋರಿಕೆಯಾಯಿತು. ಪ್ರಸ್ತುತ ದೇಶದಲ್ಲಿ ಏನು ನಡೆಯುತ್ತಿದೆ ಎಂಬುವುದೇ ಗೊತ್ತಾಗುತ್ತಿಲ್ಲ. ಕೇಂದ್ರ ಸರ್ಕಾರದ ದುರಾಡಳಿತ ಹೆಚ್ಚಾಗಿದೆ ಎಂದು ಟೀಕಿಸಿದರು. 

'ದೇಶದಲ್ಲಿ ದ್ವೇಷ ಹರಡುತ್ತಿರುವ ಪ್ರಧಾನಿ'
ವಿಶ್ವದಲ್ಲಿ ವಿವಿಧತೆಯಲ್ಲಿ ಏಕತೆಯಿರುವ ದೇಶ ಭಾರತವಾಗಿದೆ. ಅಮೆರಿಕಾದ ಅಧ್ಯಕ್ಷರೂ ಕೂಡ ವಿಶ್ವದಲ್ಲಿ ಭಾರತ ಹಾಗೂ ಚೀನಾ ದೇಶಗಳು ಅಮೆರಿಕಾಕ್ಕೆ ಪ್ರತಿಸ್ಪರ್ಧಿಗಳಾಗಿವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ದ್ವೇಷ, ಕ್ರೋಧ ಹರಡುವ ಕೆಲಸ ಮಾಡುತ್ತಿದ್ದಾರೆ. ಏಕತೆ ಒಡೆಯಲು ಯತ್ನಿಸುತ್ತಿದ್ದಾರೆ. ದ್ವೇಷ, ಕ್ರೋಧ, ಅಸೂಯೆಯ ಮೂಲಕ ಆಡಳಿತ ನಡೆಸಿದವರ ಸ್ಥಿತಿ ಏನಾಗಿದೆ ಎಂಬುವುದು ಇತಿಹಾಸದ ಪುಟಗಳನ್ನು ತಿರುವಿ ನೋಡಿದಾಗ ನಮಗೆ ಗೊತ್ತಾಗುತ್ತದೆ. ಅದೇ ಸ್ಥಿತಿ ಮೋದಿಗೂ ಬರಲಿದೆ' ಎಂದು ತಿಳಿಸಿದರು. 

ಅಮಿತ್ ಶಾ ಭಾಷಣ ಮಾಡಿದ್ದ ಸ್ಥಳದಲ್ಲಿಯೇ ಶಕ್ತಿ ಪ್ರದರ್ಶನ!
ಇತ್ತೀಚೆಗೆ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ನಗರದಲ್ಲಿ ರೋಡ್ ಶೋ ನಡೆಸಿ, ಗೋಪಿ ವೃತ್ತದಲ್ಲಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಕಾಂಗ್ರೆಸ್ ಪಕ್ಷ ಕೂಡ ಅದೇ ಸ್ಥಳದಲ್ಲಿಯೇ ತನ್ನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಮೂಲಕ ಭಾಷಣ ಮಾಡಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿತು. 

ಆದರೆ ರೋಡ್ ಶೋ ಮಾರ್ಗಗಳು ಮಾತ್ರ ಬೇರೆಯಾಗಿದ್ದವು. ಅಮಿತ್ ಶಾರವರ ರೋಡ್ ಶೋ ರಾಮಣ್ಣ ಶ್ರೇಷ್ಠಿ ಪಾರ್ಕ್ ಆವರಣದಿಂದ ಗಾಂಧಿ ಬಜಾರ್, ಶಿವಪ್ಪನಾಯಕ ವೃತ್ತ, ಎಎ ವೃತ್ತ, ನೆಹರೂ ರಸ್ತೆಯ ಮೂಲಕ ಗೋಪಿ ವೃತ್ತಕ್ಕೆ ಆಗಮಿಸಿತ್ತು. ರಾಹುಲ್ ಗಾಂಧಿಯವರ ರೋಡ್ ಶೋ ಹೆಲಿಪ್ಯಾಡ್ ವೃತ್ತದಿಂದ ಆರಂಭವಾಗಿ ಸಾಗರ ರಸ್ತೆ, ಅಶೋಕ ವೃತ್ತ, ಬಿ.ಹೆಚ್.ರಸ್ತೆ, ಎ.ಎ. ವೃತ್ತ, ನೆಹರೂ ರಸ್ತೆ ಮೂಲಕ ಗೋಪಿ ವೃತ್ತದಲ್ಲಿ ಅಂತ್ಯಗೊಂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News