ಕುವೆಂಪು ಜೀವಂತವಾಗಿದ್ದರೆ ಅಮಿತ್ ಶಾಗೆ ಕಾಲಿಡಲು ಬಿಡುತ್ತಿರಲಿಲ್ಲ: ಸಿಎಂ ಸಿದ್ದರಾಮಯ್ಯ
ಶಿವಮೊಗ್ಗ, ಏ. 3: ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರವರು ರಾಷ್ಟ್ರಕವಿ ಕುವೆಂಪುರವರ ಕುಪ್ಪಳ್ಳಿಯಲ್ಲಿರುವ ಕವಿಶೈಲ ನಿವಾಸಕ್ಕೆ ಹಾಗೂ ಸಮಾಧಿಗೆ ಭೇಟಿ ನೀಡಿದ್ದರು. ಆದರೆ ಕುವೆಂಪುರವರೇನಾದರೂ ಜೀವಂತವಾಗಿದ್ದರೆ ಅಮಿತ್ ಶಾರವರನ್ನು ಅಲ್ಲಿಗೆ ಕಾಲಿಡಲು ಅವಕಾಶ ನೀಡುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆ ಚುನಾವಣೆಯ ಅಂಗವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಮಂಗಳವಾರ ಶಿವಮೊಗ್ಗ ನಗರದ ಗೋಪಿ ವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 'ಕುವೆಂಪುರವರು ಸರ್ವ ಜನಾಂಗದ ಶಾಂತಿಯ ತೋಟವೆಂದು ಈ ನಾಡು - ದೇಶವನ್ನು ಕರೆದರು. ಆದರೆ ನರೇಂದ್ರ ಮೋದಿ ಹಾಗೂ ಅಮಿತ್ ಶಾರವರು ಈ ದೇಶವನ್ನು ಅಶಾಂತಿಯ ಬೀಡಾಗಿ ಮಾಡಲು ಹೊರಟಿದ್ದಾರೆ. ಕೋಮು ಭಾವನೆ ಹರಡುತ್ತಿದ್ದಾರೆ. ಕುವೆಂಪುರವರ ಸಂದೇಶಗಳಿಗೆ ವಿರುದ್ದವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಲಜ್ಜೆಗೇಡಿತನ: ನರೇಂದ್ರ ಮೋದಿ ಹಾಗೂ ಅಮಿತ್ ಶಾರವರು, ಭ್ರಷ್ಟಾಚಾರ ಎಸಗಿ ಜೈಲಿಗೆ ಹೋಗಿ ಬಂದ ಬಿ.ಎಸ್.ಯಡಿಯೂರಪ್ಪರನ್ನು ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ನಮ್ಮ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡುತ್ತಾರೆ. ಇದು ಲಜ್ಜೆಗೇಡಿತನದ ಪರಮಾವಧಿಯಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಅವರಿಗೆ ಇಲ್ಲ ಎಂದು ಕಿಡಿಕಾರಿದರು.
ಶಿವಮೊಗ್ಗ ಜಿಲ್ಲೆಗೆ ತನ್ನದೆ ಆದ ಇತಿಹಾಸವಿದೆ. ಸಮಾಜವಾದಿ, ಕಾಗೋಡು ಚಳುವಳಿ ಸೇರಿದಂತೆ ಹಲವು ಜನಪರ ಹೋರಾಟಗಳ ನೆಲೆಬೀಡಾಗಿದೆ. ಹಲವು ಮಹನೀಯರು ಈ ಜಿಲ್ಲೆಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಈ ಜಿಲ್ಲೆಯವರಾದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಕಡಿದಾಳು ಮಂಜಪ್ಪ ಹಾಗೂ ಎಸ್.ಬಂಗಾರಪ್ಪರವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಹಾಗೆಯೇ ಇದೇ ಜಿಲ್ಲೆಯವರಾದ ಜೆ.ಹೆಚ್.ಪಟೇಲ್‍ರವರು ಕೂಡ ಸಿಎಂ ಆಗಿದ್ದರು.
ಈ ಮೂವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದ್ದರು. ಆದರೆ ಇದೇ ಜಿಲ್ಲೆಗೆ ಸೇರಿದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅಕ್ರಮ, ಭ್ರಷ್ಟಾಚಾರ ನಡೆಸುವ ಮೂಲಕ ಶಿವಮೊಗ್ಗಕ್ಕೆ ಅಪಖ್ಯಾತಿ ತರುವ ಕೆಲಸ ಮಾಡಿದರು ಎಂದು ಟೀಕಾಪ್ರಹಾರ ನಡೆಸಿದರು.
ಜಿಲ್ಲೆಗೆ ಅಪಖ್ಯಾತಿ ತರುವ ಕೆಲಸ ಮಾಡಿದ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಈ ರಾಜ್ಯದ ಮುಖ್ಯಮಂತ್ರಿಯಾಗಬಾರದು. ಈ ಕಾರಣದಿಂದ ಬಿಜೆಪಿಗೆ ತಕ್ಕ ಪಾಠ ಕಲಿಸುವ ಕೆಲಸವನ್ನು ಜಿಲ್ಲೆಯ ಮತದಾರರು ಮಾಡಬೇಕು. ಈ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಜನಪರ ಕೆಲಸ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಕಾಂಗ್ರೆಸ್ ಸರ್ಕಾರ ಸ್ವಚ್ಚ, ದಕ್ಷ, ಪಾರದರ್ಶಕ ಆಡಳಿತ ನಡೆಸಿದೆ. ಯಾವುದೇ ಗೊಂದಲ, ಗಡಿಬಿಡಿಗೆ ಆಸ್ಪದವಾಗದಂತೆ ಪೂರ್ಣಾವಧಿ ಆಳ್ವಿಕೆ ನಡೆಸಿದೆ. ಹತ್ತು ಹಲವು ಜನಪರ ಕಾರ್ಯಕ್ರಮ, ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಈ ಬಾರಿಯ ಚುನಾವಣೆಯಲ್ಲಿಯೂ ಕಾಂಗ್ರೆಸ್ ಸರ್ಕಾರಕ್ಕೆ ಮತದಾರರು ಆಶೀರ್ವಾದ ಮಾಡಬೇಕು. ಈ ಮೂಲಕ ಉತ್ತಮ ಆಡಳಿತಕ್ಕೆ ಬೆಂಬಲ ವ್ಯಕ್ತಪಡಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಅವಕಾಶ ನೀಡಬೇಡಿ: ರಾಹುಲ್ ಗಾಂಧಿ ಹಾಗೂ ಸಿಎಂ ಭಾಷಣಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. '2013 ಕ್ಕೂ ಹಿಂದೆ ಬಿಜೆಪಿ ಸರ್ಕಾರದ ಆಡಳಿತ ಹೇಗಿತ್ತು ಎಂಬುವುದನ್ನು ಗಮನಿಸಿದ್ದೀರಿ. ಶಿವಮೊಗ್ಗ ಜಿಲ್ಲೆಯವರೇ ಸಿಎಂ, ಡಿಸಿಎಂ ಆಗಿದ್ದರು. ಅವರ ಕಾರ್ಯವೈಖರಿ ಹೇಗಿತ್ತು ಎಂಬುವುದನ್ನು ನೋಡಿದ್ದಿರಿ. ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳಾಗಿದ್ದರು. ಭ್ರಷ್ಟಾಚಾರ, ಅವ್ಯವಹಾರಗಳು ತುಂಬಿ ತುಳುಕುತ್ತಿತ್ತು. ಇಂತಹ ಸರ್ಕಾರಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಆಡಳಿತ ನಡೆಸಲು ಅವಕಾಶ ಕಲ್ಪಿಸಬೇಡಿ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಿ' ಎಂದು ಮತದಾರರಿಗೆ ಕರೆ ನೀಡಿದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಉತ್ತಮ, ಸ್ವಚ್ಚ, ಪಾರದರ್ಶಕ ಆಡಳಿತ ನೀಡಿದೆ. ಮತದಾರರಿಗೆ ನೀಡಿದ್ದ ಭರವಸೆಯಂತೆ ನಡೆದುಕೊಂಡಿದೆ. ಈ ಕಾರಣದಿಂದ ಈ ಬಾರಿಯ ಚುನಾವಣೆಯಲ್ಲಿಯೂ ಮತದಾರರು ಕಾಂಗ್ರೆಸ್ ಬೆಂಬಲಿಸಬೇಕು. ಅತ್ಯದಿಕ ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಜಯ ಗಳಿಸಿಕೊಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ವೇಣುಗೋಪಾಲ್, ಇಂಧನ ಸಚಿವ ಡಿ.ಕೆ.ಶಿವಕುಮಾರ್, ಲೋಕಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭಾ ಸದಸ್ಯ ಕೆ.ಹೆಚ್.ಮುನಿಯಪ್ಪ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.
ಹಿಂದೂ-ಮುಸ್ಲಿಮರ ನಡುವೆ ಬೆಂಕಿ ಹಚ್ಚುವ ಕೆಲಸ
ಶಿವಮೊಗ್ಗದಲ್ಲಿ ಹಿಂದೂ - ಮುಸ್ಲಿಮರ ನಡುವೆ ಬೆಂಕಿ ಹಚ್ಚಿಕೊಂಡು ಬಂದದ್ದೇ ಬಿಜೆಪಿ ಪಕ್ಷದ ಸಾಧನೆಯಾಗಿದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರಪ್ಪರ ಆಣೆಗೂ ಈ ರಾಜ್ಯದ ಮುಖ್ಯಮಂತ್ರಿಯಾಗುವುದಿಲ್ಲ. ಸಿಎಂ ಆಗುವ ಕನಸು ಕಾಣಬೇಕಷ್ಟೆ. ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡಿವೆ. ಜೆಡಿಎಸ್‍ಗೆ ಮತ ಹಾಕಿದರೆ ಅದು ಕೋಮುವಾದಿ ಬಿಜೆಪಿಗೆ ಮತ ಹಾಕಿದಂತೆ ಎಂಬುವುದನ್ನು ಮತದಾರರು ಗಮನದಲ್ಲಿಟ್ಟುಕೊಳ್ಳಬೇಕು. ಜೆಡಿಎಸ್‍ಗೆ ಮತ ಹಾಕುವ ಮುನ್ನ ಯೋಚಿಸಬೇಕು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.