×
Ad

ಮುಂದಿನ ಚುನಾವಣೆ ರಾಷ್ಟ್ರವಾದಿಗಳು-ರಾಷ್ಟ್ರದ್ರೋಹಿಗಳ ನಡುವಿನ ಯುದ್ಧ: ಸಿ.ಟಿ.ರವಿ

Update: 2018-04-03 20:16 IST

ಚಿಕ್ಕಮಗಳೂರು, ಎ.3: ಈ ಬಾರಿಯ ಚುನಾವಣೆಯು ರಾಷ್ಟ್ರವಾದಿಗಳು ಹಾಗೂ ರಾಷ್ಟ್ರದ್ರೋಹಿ ಸಂಘಟನೆಗಳಿಗೆ ಬೆಂಬಲ ನೀಡುತ್ತಿರುವವರ ನಡುವೆ ನಡೆಯುತ್ತಿದ್ದು, ರಾಷ್ಟ್ರವಾದಿಗಳು ಚುನಾವಣೆ ಗೆಲ್ಲುವಂತಾಗಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ಮಂಗಳವಾರ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡ ಉಪ್ಪಳ್ಳಿ ಪ್ರಕಾಶ್ ಮತ್ತು ಇತರರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಮೆಚ್ಚಿ ಇಡೀ ದೇಶದ ಜನರು ಎಲ್ಲ ರಾಜ್ಯಗಳಲ್ಲೂ ಬಿಜೆಪಿಗೆ ಅಧಿಕಾರ ನೀಡುತ್ತಿದ್ದಾರೆ. 70 ವರ್ಷಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‍ನ ದುರಾಡಳಿತಕ್ಕೆ ಮತದಾರರು ಎಲ್ಲೆಡೆ ತಕ್ಕ ಪಾಠ ಕಲಿಸುತ್ತಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಿಂದ ಕಾಂಗ್ರೆಸ್ ಅನ್ನು ಮುಕ್ತ ಮಾಡಲು ಮತದಾರರು ಪಣತೊಟ್ಟಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಜನತೆ ಅಭಿವೃದ್ಧಿ ಪರವಾಗಿ ಮತ ಚಲಾಯಿಸಲಿದ್ದು, ಬಿಜೆಪಿ ಗೆಲುವು ನಿಶ್ಚಿತ ಎಂದರು.

ವಿಧಾನಸಭೆ ಚುನಾವಣೆ ಎದುರಾಗಿರುವ ಈ ಹೊತ್ತಿನಲ್ಲಿ ಬಿಜೆಪಿಗೆ ಎದುರಾಳಿ ಕಾಂಗ್ರೆಸ್ ಆಗಿದೆ. ಬಿಜೆಪಿ ಪಕ್ಷದ ಮೊದಲ ಆದ್ಯತೆ ದೇಶದ ಗೌರವ, ರಕ್ಷಣೆಯಾಗಿದ್ದರೆ, ದೇಶ ಒಡೆಯುತ್ತಾ ತುಕಡಿ ಗ್ಯಾಂಗ್‍ಗಳೊಂದಿಗೆ ಸಂಬಂಧವಿಟ್ಟುಕೊಂಡಿರುವ ಕಾಂಗ್ರೆಸ್ ಪಕ್ಷ ಜಾತಿ ಜಾತಿಗಳನ್ನು ಒಡೆದು ದೇಶವನ್ನು ರಾಷ್ಟ್ರದ್ರೋಹಿಗಳ ಕೈಗಿಡಲು ಮುಂದಾಗಿದೆ. ದೇಶ, ಧರ್ಮದ ಬಗ್ಗೆ ಗೌರವ ಇರುವವರು ಬಿಜೆಪಿಗೆ ಬರಬೇಕು. ಸಜ್ಜನರು ಸುಮ್ಮನಿರುವ ಕಾಲ ಇದಲ್ಲ. ಇಂತಹ ಧರ್ಮ ಯುದ್ದದ ಸಂದರ್ಭದಲ್ಲಿ ಸಜ್ಜನರು ಎಚ್ಚೆತ್ತುಕೊಳ್ಳಬೇಕು ಎಂದ ಅವರು, ಈ ಚುನಾವಣೆಯಲ್ಲಿ ಮತದಾರರು ರಾಷ್ಟ್ರವಾದಿಗಳಿಗೆ ಅಧಿಕಾರ ನೀಡಿ ರಾಷ್ಟ್ರೋದ್ರೋಹಿಗಳನ್ನು ಮೂಲೆ ಗುಂಪು ಮಾಡಬೇಕೆಂದರು.

ಯಾವ ಕಾರಣಕ್ಕಾಗಿ ಬಿಜೆಪಿಗೆ ಮತ ನೀಡಬೇಕು, ಕಾಂಗ್ರೆಸ್ ಪಕ್ಷವನ್ನು ಏಕೆ ತಿರಸ್ಕರಿಸಬೇಕೆಂಬ ಬಗ್ಗೆ ಪ್ರತಿಯೊಬ್ಬ ಕಾರ್ಯಕರ್ತರು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡಬೇಕು. ಈ ಚುನಾವಣೆಯನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕೆಂದ ಸಿ.ಟಿ.ರವಿ, ಈ ಹಿಂದೆ ಬಿಜೆಪಿಯ ಚುನಾವಣಾ ಏಜೆಂಟ್ ಆಗಿದ್ದರು ಎಂಬ ಕಾರಣದಿಂದ ಅಬ್ದುಲ್ ರೆಹಮಾನ್ ಖುರೇಶಿ ಅವರನ್ನು ಮತಗಟ್ಟೆಯಿಂದ ಕಾಂಗ್ರೆಸ್‍ನವರು ಹೊರಗೆ ಓಡಿಸಿದ್ದರು. ಆಗಲೇ ಅಂಡೆಛತ್ರ ವಾರ್ಡ್‍ನಲ್ಲಿ ಇವರನ್ನು ಗೆಲ್ಲಿಸುವುದಾಗಿ ಹೇಳಿ ಬಂದಿದ್ದೆವು. ಈಗ ಖುರೇಶಿಯೇ ಆ ವಾರ್ಡಿನಲ್ಲಿ ಗೆದ್ದಿದ್ದಾರೆ. ಇದೇ ಕೆಲಸ ಉಪ್ಪಳ್ಳಿಯಲ್ಲಿಯೂ ಆಗಬೇಕಿದೆ ಎಂದರು.

ಪಕ್ಷಕ್ಕೆ ಸೇರ್ಪಡೆಗೊಂಡ ಉಪ್ಪಳ್ಳಿ ಪ್ರಸನ್ನ ಹಾಗೂ ನಗರ ಬಿಜೆಪಿ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿದರು. ಪ್ರಸನ್ನ ಅವರೊಂದಿಗೆ ರವಿಕುಮಾರ್, ಮೀನಾ, ಕುಮಾರ್, ಓಂಕಾರಮ್ಮ ಹಾಗೂ ಇತರರು ಬಿಜೆಪಿಗೆ ಸೇರ್ಪಡೆಗೊಂಡರು. ಕಾರ್ಯಕ್ರಮದಲ್ಲಿ ಮುಖಂಡರಾದ ಸಿ.ಎಚ್.ಲೋಕೇಶ್, ಸಿ.ಆರ್.ಪ್ರೇಮ್‍ಕುಮಾರ್, ಬಿ.ರಾಜಪ್ಪ, ಮಧುಕುಮಾರ್ ರಾಜ್ ಅರಸ್, ಅನ್ವರ್, ಅಫ್ಸರ್ ಅಹ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News