ಸಿ.ಎಂ ಸಿದ್ದರಾಮಯ್ಯರ ಋಣ ಲಿಂಗಾಯತರ ಮೇಲಿದೆ: ಸಚಿವ ವಿನಯ್‌ ಕುಲಕರ್ಣಿ

Update: 2018-04-03 14:54 GMT

ಹುಬ್ಬಳ್ಳಿ, ಎ.3: ಲಿಂಗಾಯತ ಸ್ವತಂತ್ರ ಧರ್ಮ ಸ್ಥಾನಮಾನ ನೀಡುವ ಧೈರ್ಯವನ್ನು ಯಾರೊಬ್ಬರೂ ಮಾಡಿರಲಿಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಧೈರ್ಯ ಮಾಡಿ ಕೇಂದ್ರ ಸರಕಾರಕ್ಕೆ ಈ ಸಂಬಂಧ ಶಿಫಾರಸ್ಸು ಕಳುಹಿಸಿದ್ದಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ್‌ಕುಲಕರ್ಣಿ ಹೇಳಿದ್ದಾರೆ.

ಮಂಗಳವಾರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯನ್ನು ಬರ ಮಾಡಿಕೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯ ಋಣ ಲಿಂಗಾಯತರ ಮೇಲಿದ್ದು, ಈ ಚುನಾವಣೆಯಲ್ಲಿ ಲಿಂಗಾಯತ ಸಮಾಜವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ಸುಳ್ಳಿನ ಸರದಾರರು. ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನು ಸತ್ಯ ಎಂದು ನಂಬಿಸಲು ಪ್ರಯತ್ನಿಸುತ್ತಾರೆ. ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಅವರಿಗೆ ನಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸುತ್ತೇವೆ ಎಂದು ವಿನಯ್‌ಕುಲಕರ್ಣಿ ಸವಾಲು ಹಾಕಿದರು.

ಮಾದಿಗ ಸಮಾಜ, ದಲಿತ ಸಮುದಾಯಗಳು 12ನೆ ಶತಮಾನದಿಂದಲೂ ಲಿಂಗಾಯತರ ಜೊತೆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ನೀಡಿರುವ ಯೋಜನೆಗಳು, ಕಾರ್ಯಕ್ರಮ ಆಧಾರದ ಮೇಲೆ ನಾವು ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.

ನಮ್ಮ ಸರಕಾರದ ಸಾಧನೆಗಳನ್ನು ಬಿಜೆಪಿಯವರು ತಮ್ಮದೆಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಮತದಾರರು ಪ್ರಬುದ್ಧರಾಗಿದ್ದು, ಅವರ ಮುಂದೆ ಬಿಜೆಪಿಯವರು ಸುಳ್ಳು ಹಾಗೂ ನಾಟಕಗಳು ನಡೆಯುವುದಿಲ್ಲ ಎಂದು ವಿನಯ್‌ಕುಲಕರ್ಣಿ ತಿಳಿಸಿದರು.

ಲಿಂಗಾಯತರಿಗೆ ಕನಿಷ್ಟ 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್‌ಗೆ ಮನವಿ ಮಾಡುತ್ತೇವೆ. ಹೆಚ್ಚಿನ ಸ್ಥಾನಗಳನ್ನು ಗೆದ್ದು ನಮ್ಮ ಸಾಮರ್ಥ್ಯವನ್ನು ವಿರೋಧಿಗಳಿಗೆ ಪರಿಚಯಿಸುತ್ತೇವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News