ಸಾಗರ ಕ್ಷೇತ್ರದಿಂದ ಮಾಜಿ ಸಚಿವ ಹರತಾಳು ಹಾಲಪ್ಪಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧಾರ ?

Update: 2018-04-03 15:11 GMT

ಶಿವಮೊಗ್ಗ, ಏ. 3: ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‍ಗೆ ಸಂಬಂಧಿಸಿದಂತೆ 'ಒಂದಾನೊಂದು ಕಾಲದ ಸ್ನೇಹಿತರಾದ' ಮಾಜಿ ಸಚಿವ ಹರತಾಳು ಹಾಲಪ್ಪ ಹಾಗೂ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ನಡುವೆ ನಡೆಯುತ್ತಿರುವ ಹಣಾಹಣಿ, ಅಕ್ಷರಶಃ 'ಟಿ-20 ಕ್ರಿಕೆಟ್' ಪಂದ್ಯದ ರೀತಿಯಲ್ಲಿ ರೋಚಕತೆ ಸೃಷ್ಟಿಸಿದೆ. ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಮ್ಯೂಸಿಕಲ್ ಚೇರ್ ಆಟದಂತಾಗಿ ಪರಿವರ್ತಿತವಾಗಿದೆ. 

ಪ್ರಸ್ತುತ ಲಭ್ಯವಾಗುತ್ತಿರುವ ಮಾಹಿತಿ ಅನುಸಾರ, ಬೇಳೂರು ಗೋಪಾಲಕೃಷ್ಣಗೆ ಟಿಕೆಟ್ ತಪ್ಪುವ ಸಾಧ್ಯತೆಗಳು ದಟ್ಟವಾಗುತ್ತಿದೆ. ಬಹುತೇಕ ಹರತಾಳು ಹಾಲಪ್ಪ ಅಭ್ಯರ್ಥಿಯಾಗುವ ಲಕ್ಷಣಗಳು ಗೋಚರವಾಗಲಾರಂಭಿಸಿದೆ. ಬಿಜೆಪಿಯಲ್ಲಿನ ಈ ದಿಢೀರ್ ಬೆಳವಣಿಗೆಯು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. 

ತಾವೇ ಬಿಜೆಪಿ ಅಭ್ಯರ್ಥಿ ಎಂದು ಸಾಗರ ಕ್ಷೇತ್ರದಾದ್ಯಂತ ಓಡಾಡುತ್ತಿರುವ ಬೇಳೂರು ಮತ್ತವರ ಬೆಂಬಲಿಗರಿಗೆ, ಟಿಕೆಟ್ ಕೈ ತಪ್ಪಲಿರುವ ವಿಚಾರವು ಸಾಕಷ್ಟು ಗೊಂದಲ-ಗಡಿಬಿಡಿ ಉಂಟು ಮಾಡಿದೆ. ಈ ಕುರಿತಂತೆ ಬೇಳೂರುರವರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಲು ಮುಂದಾಗಿದ್ದಾರೆಂಬ ಮಾಹಿತಿ ಕೂಡ ಕೇಳಿಬರುತ್ತಿದೆ. 

ಹೈಡ್ರಾಮಾ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಆಗಮಿಸುವುದಕ್ಕೂ ಮುನ್ನ, ಸಾಗರದಿಂದ ಬೇಳೂರು ಹಾಗೂ ಸೊರಬದಿಂದ ಹಾಲಪ್ಪ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತ ಎಂಬ ಮಾತುಗಳು ಕೇಳಿಬರುತ್ತಿದ್ದವು. ಯಾವಾಗ ಕುಮಾರ್ ಬಂಗಾರಪ್ಪ ಬಿಜೆಪಿ ಸೇರ್ಪಡೆಯಾದರೋ, ಅಂದಿನಿಂದ ಈ ಎರಡೂ ಕ್ಷೇತ್ರಗಳಲ್ಲಿ ಯಾರೂ ಅಭ್ಯರ್ಥಿಯಾಗಲಿದ್ದಾರೆಂಬ ಹೊಸ ಚರ್ಚೆ ಹುಟ್ಟಿಕೊಂಡಿತ್ತು. 

ಬಿಜೆಪಿ ವರಿಷ್ಠರು ಕುಮಾರ್ ಬಂಗಾರಪ್ಪಗೆ ಸೊರಬದಿಂದ ಟಿಕೆಟ್ ನೀಡಲು ನಿರ್ಧರಿಸಿದ್ದರು. ಆ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಹಾಲಪ್ಪರನ್ನು ಸಾಗರ ಕ್ಷೇತ್ರದಿಂದ ಕಣಕ್ಕಿಳಿಸುವ ಹಾಗೂ ಈ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರಿಗೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಲು ವರಿಷ್ಠರು ತೀರ್ಮಾನಿಸಿದ್ದರು. ಒಲ್ಲದ ಮನಸ್ಸಿನಿಂದಲೇ ವರಿಷ್ಠರ ಸಲಹೆಗೆ ಹಾಲಪ್ಪ ತಲೆಬಾಗಿದ್ದರು. ಸೊರಬದಿಂದ ಸಾಗರಕ್ಕೆ ತಮ್ಮ ರಾಜಕಾರಣ ಶಿಫ್ಟ್ ಮಾಡಿಕೊಂಡಿದ್ದರು. ಸಾಗರ ಪಟ್ಟಣದಲ್ಲಿಯೇ ಮನೆ ಮಾಡಿಕೊಂಡಿದ್ದರು. ಕ್ಷೇತ್ರದಾದ್ಯಂತ ಬಿರುಸಿನ ಸಂಚಾರ ನಡೆಸಲಾರಂಭಿಸಿದ್ದರು. 

ಮತ್ತೊಂದೆಡೆ ಬೇಳೂರು ಮಾತ್ರ ವರಿಷ್ಠರ ಈ ನಿರ್ಧಾರಕ್ಕೆ ಸಹಮತ ವ್ಯಕ್ತಪಡಿಸಿರಲಿಲ್ಲ. ಎಂಎಲ್‍ಸಿ ಸ್ಥಾನ ಬೇಡ. ಎಂಎಲ್‍ಎ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದ್ದರು. ಸಾಗರದಿಂದ ಹಾಲಪ್ಪ ಅಭ್ಯರ್ಥಿಯಾಗುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿದ್ದರು. ಸ್ಥಳೀಯ ಬಿಜೆಪಿ ಘಟಕದಲ್ಲಿ ಹಾಲಪ್ಪ - ಬೇಳೂರು ಬಣಗಳು ಸೃಷ್ಟಿಯಾಗಿದ್ದವು. ಆಗಾಗ್ಗೆ ಎರಡೂ ಬಣಗಳ ನಡುವೆ ರಾಜಕೀಯ ಮೇಲಾಟವೂ ನಡೆಯುತ್ತಿತ್ತು. 

ಖಚಿತಪಡಿಸಿದ್ದರು: ಈ ಎಲ್ಲ ಗೊಂದಲಗಳ ನಡುವೆಯೇ ಇತ್ತೀಚೆಗೆ ಹಾಲಪ್ಪರವರು ಹೊಸನಗರದ ಗ್ರಾಮವೊಂದರಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಬೇಳೂರು ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಘಟನೆಯ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಾಗರದಿಂದ ಹರತಾಳು ಹಾಗೂ ಸೊರಬದಿಂದ ಕುಮಾರ್ ಬಂಗಾರಪ್ಪ ಪಕ್ಷದ ಅಭ್ಯರ್ಥಿಯಾಗಲಿದ್ದಾರೆ. ಬೇಳೂರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು. 

ಹಾಲಪ್ಪ ವಾಗ್ದಾಳಿ ಹಾಗೂ ಬಿ.ಎಸ್.ಯಡಿಯೂರಪ್ಪ ಘೋಷಣೆಯ ಬಗ್ಗೆ ಬೇಳೂರು ಬಹಿರಂಗ ಟೀಕಾ ಪ್ರಹಾರ ನಡೆಸಲಿದ್ದಾರೆಂಬ ನಿರೀಕ್ಷೆಗಳು ಹುಸಿಯಾಗಿದ್ದವು. ಬೇಳೂರು ಅತ್ಯಂತ ಸಂಯುಮದಿಂದಲೇ ಉತ್ತರ ನೀಡಿದ್ದರು. ಯಾವುದೇ ವ್ಯತಿರಿಕ್ತ ಹೇಳಿಕೆ ಕೊಟ್ಟಿರಲಿಲ್ಲ. 'ಆ್ಯಂಗ್ರಿ ಯಂಗ್‍ಮ್ಯಾನ್' ವ್ಯಕ್ತಿತ್ವದ ಬೇಳೂರುರವರ ಈ ನಡೆ ಬಿಜೆಪಿ ಪಾಳೇಯದಲ್ಲಿ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಬೇಳೂರು ಈ ಮೌನದ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದ್ದ ಮಾತುಗಳು ಕೇಳಿಬಂದಿದ್ದವು. 

ಹೊಸ ಬೆಳವಣಿಗೆ: ಈ ನಡುವೆ ಬೇಳೂರು ನಿರೀಕ್ಷಿಸಿದಂತೆ, ಬಿಜೆಪಿ ವರಿಷ್ಠರು ಸಾಗರದಿಂದ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಇದು ಹಾಲಪ್ಪ ಮತ್ತವರ ಬೆಂಬಲಿಗರಲ್ಲಿ ತೀವ್ರ ದಿಗ್ಭ್ರಮೆ ಉಂಟು ಮಾಡಿತ್ತು. ಬಂಡಾಯದ ಹಾದಿ ತುಳಿದಿದ್ದರು. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲು ಗಂಭೀರ ಚಿಂತನೆ ನಡೆಸಿದ್ದರು. ಮತ್ತೊಂದೆಡೆ ಕಾಂಗ್ರೆಸ್ ಕೂಡ ಹಾಲಪ್ಪಗೆ ಆಹ್ವಾನ ನೀಡಿ, ಸೊರಬ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ಕೂಡ ನೀಡಿತ್ತು. 

ಇದು ಬಿಜೆಪಿ ಪಾಳೇಯದ ನಿದ್ದೆಗೆಡುವಂತೆ ಮಾಡಿತ್ತು. ಒಂದು ವೇಳೆ ಹಾಲಪ್ಪರೇನಾದರು ಬಿಜೆಪಿ ತೊರೆದು, ಸೊರಬ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದರೆ ಸಾಗರ - ಸೊರಬ - ತೀರ್ಥಹಳ್ಳಿ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದ ಮತಗಳಿಕೆಯ ಮೇಲೆ ಗಂಭೀರ ಪರಿಣಾಮ ಉಂಟಾಗುವುದು ಖಚಿತವಾಗಿತ್ತು. ಈ ಕಾರಣದಿಂದಲೇ ಬಿಜೆಪಿ ವರಿಷ್ಠರು ಹಾಲಪ್ಪರವರು ಪಕ್ಷ ತೊರೆಯದಂತೆ, ಮನವೊಲಿಸುವ ಕಸರತ್ತು ನಡೆಸಿಕೊಂಡು ಬಂದಿದ್ದರು. 

ಸ್ವತಃ ಬಿ.ಎಸ್.ಯಡಿಯೂರಪ್ಪರವರು ಹಾಲಪ್ಪರನ್ನು ಸಂಪರ್ಕಿಸಿ, ಆತುರದ ನಿರ್ಧಾರ ಕೈಗೊಳ್ಳದಂತೆ ಸಲಹೆ ನೀಡಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯದಂತೆ ಮನವಿ ಮಾಡಿಕೊಂಡಿದ್ದರು. ಮತ್ತೊಂದೆಡೆ ಬಿಜೆಪಿಯ ಸಂಧಾನಕಾರರ ತಂಡಗಳು ಕೂಡ ಹಾಲಪ್ಪರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದವು. ಅಂತಿಮವಾಗಿ ಬಿಜೆಪಿ ವರಿಷ್ಠರು ಸಾಗರ ಕ್ಷೇತ್ರದಿಂದ ಟಿಕೆಟ್ ನೀಡುವ ಖಚಿತ ಭರವಸೆ ನೀಡಿದ್ದಾರೆ. ಈ ಭರವಸೆಯ ಹಿನ್ನೆಲೆಯಲ್ಲಿ ಹಾಲಪ್ಪರವರು ಪಕ್ಷ ತೊರೆಯುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ ಎಂದು ಬಿಜೆಪಿಯ ಮೂಲಗಳು ಮಾಹಿತಿ ನೀಡಿವೆ. 

'ಬಿಜೆಪಿ ತೊರೆಯುವುದಿಲ್ಲ' : ಹರತಾಳು ಹಾಲಪ್ಪ 
ತಾವು ಬಿಜೆಪಿ ಪಕ್ಷ ತೊರೆಯುತ್ತೇನೆ ಎಂಬುವುದರಲ್ಲಿ ಯಾವುದೇ ಹುರುಳಿಲ್ಲ. ಕೆಲ ಬೆಳವಣಿಗೆಗಳಿಂದ ಬೇಸರಗೊಂಡಿದ್ದೆ. ಪಕ್ಷದ ವರಿಷ್ಠರು ಸಮಾಲೋಚನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ' ಎಂದು ಮಾಜಿ ಸಚಿವ ಹರತಾಳು ಹಾಲಪ್ಪರವರು ಸ್ಪಷ್ಟಪಡಿಸಿದ್ದಾರೆ. ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಸಾಗರ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಅವರು, 'ಈ ಕುರಿತಂತೆ ಪಕ್ಷದ ಮುಖಂಡರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. 

ಬೇಳೂರು ಮುಂದಿನ ನಡೆಯೇನು?
ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಹರತಾಳು ಹಾಲಪ್ಪರವರು ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಒಂದು ವೇಳೆ ಇದು ಖಚಿತವಾದರೆ, ಆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಬೇಳೂರು ಗೋಪಾಲಕೃಷ್ಣರವರ ಮುಂದಿನ ನಡೆಯೇನಾಗಲಿದೆ ಎಂಬುವುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. ಇನ್ನೊಂದೆಡೆ ಜಿಲ್ಲೆಯ ಏಳರಲ್ಲಿ ಆರು ಕ್ಷೇತ್ರಗಳ ಅಭ್ಯರ್ಥಿ ಹೆಸರು ಘೋಷಣೆ ಮಾಡಿ, ಸಾಗರ ಕ್ಷೇತ್ರಕ್ಕೆ ಮಾತ್ರ ಇಲ್ಲಿಯವರೆಗೂ ಅಭ್ಯರ್ಥಿ ಘೋಷಿಸದ ಜೆಡಿಎಸ್ ಪಕ್ಷದ ನಡೆಯೂ ಗಮನ ಸೆಳೆಯುತ್ತಿದೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News