×
Ad

ದ್ವೇಷ ತುಂಬಿರುವ ಖಾಕಿ ಚಡ್ಡಿ, ದೊಣ್ಣೆಯಿಂದ ದೇಶ ನಡೆಸಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

Update: 2018-04-03 20:50 IST

ದಾವಣಗೆರೆ,ಎ.03: ದ್ವೇಷ, ಕೋಪ, ಅಸೂಯೆ ತುಂಬಿರುವ ಖಾಕಿ ಚಡ್ಡಿ, ದೊಣ್ಣೆಯಿಂದ ದೇಶ ನಡೆಸಲು, ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಕಾಂಗ್ರೆಸ್‍ನಿಂದ ಹಮ್ಮಿಕೊಂಡಿದ್ದ ಜನಾಶೀರ್ವಾದ ಯಾತ್ರೆ ಹಾಗೂ ಕಾರ್ಯಕರ್ತರ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಆರೆಸ್ಸೆಸ್ ಹಾಗೂ ಬಿಜೆಪಿಗೆ ಖಾಕಿ ಬಟ್ಟೆ ಹಾಕಿ ಸುಳ್ಳು ಹೇಳುವ ತರಬೇತಿ ನೀಡಲಾಗುತ್ತದೆ. ಲೆಫ್ಟ್ ರೈಟ್ ಎಂದು ನೋಡಿಕೊಂಡು ಹೋಗಿ ಎಂದು ಹೇಳಲಾಗುತ್ತಿದೆ. ಎಲ್ಲ ನಿರ್ಣಯವನ್ನು ಮೋಹನ್ ಭಾಗವಾತ್, ನರೇಂದ್ರ ಮೋದಿಯವರೇ ತೆಗೆದುಕೊಳ್ಳುತ್ತಾರೆ. ಮನ್ ಕೀ ಬಾತ್...ಮನ್ ಕೀ ಬಾತ್ ಎಂದು ಭಾಷಣ ಮಾಡುತ್ತಾರೆ. ಆದರೆ, ದೇಶದ ಜನರ ಮಾತನ್ನು ಎಂದಿಗೂ ಅವರು ಕೇಳಲ್ಲ ಎಂದು ಹೇಳಿದರು.

ನಮ್ಮ ಮುಂದೆ ಚುನಾವಣೆ ಇದೆ. ಬಿಜೆಪಿ ಮತ್ತು ಆರೆಸ್ಸೆಸ್ ಕೋಮುವಾದ, ಅಸೂಯೆ, ಕೋಪ, ಹಿಂಸೆಯ ವಿಚಾರಧಾರೆ ಹಾಗೂ ಕಾಂಗ್ರೆಸ್‍ನ ಪ್ರೀತಿ, ಅಭಿವೃದ್ಧಿ, ಭ್ರಾತೃತ್ವ ಅಹಿಂಸಾ ವಿಚಾರಧಾರೆಗಳ ನಡುವೆ ಚುನಾವಣೆ ನಡೆಯಲಿದೆ. ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ನಮ್ಮ ಕಾರ್ಯಕರ್ತರು ಜನರ ಬಳಿ ಹೋಗಿ ಸರ್ಕಾರದ ಸಾಧನೆ ತಿಳಿಸಬೇಕು ಎಂದರು.

ಬಸವಣ್ಣ ಜನಿಸಿದ ನಾಡು ಇದು. ಅವರ ವಚನದಂತೆ ನಾವು ನುಡಿದಂತೆ ನಡೆದಿದ್ದೇವೆ. ಆದರೆ, ಪ್ರಧಾನಿ ಮೋದಿ ದೊಡ್ಡ ದೊಡ್ಡ ಭರವಸೆ ನೀಡಿ ಯಾವೊಂದು ಭರವಸೆಯನ್ನೂ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಕಾರ್ಮಿಕರ, ಬಡವರ, ರೈತರ, ಮಹಿಳೆಯರ ಹಣವನ್ನು ನೋಟು ನಿಷೇಧದ ಮೂಲಕ ಬ್ಯಾಂಕ್ ಗೆ ಜಮಾ ಮಾಡಿಸಿಕೊಂಡು ಅದನ್ನು ದೊಡ್ಡ ದೊಡ್ಡ ಉದ್ಯಮಿಗಳಿಗೆ ನೀಡಿ, ಅವರ ರಕ್ಷಣೆ ಮಾಡಿದ್ದಾರೆ. ಆದರೆ, ರೈತರ ಸಾಲ ಮಾನ್ನದ ವಿಚಾರ ಮಾತ್ರ ಮಾತನಾಡುತ್ತಿಲ್ಲ ಎಂದರು.

ದೇಶದಲ್ಲಿ ದಲಿತರ ಮೇಲೆ ನಿರಂತರ ಹಲ್ಲೆ ಹೆಚ್ಚಾಗುತ್ತಿವೆ. ಈ ಬಗ್ಗೆ ಪ್ರಧಾನಿ ಮೋದಿ ಚಕಾರವೆತ್ತುತ್ತಿಲ್ಲ. ಎಸ್ಸಿ-ಎಸ್ಟಿ ಹಿತರಕ್ಷಣಾ ಕಾಯ್ದೆಗೆ ಸಂಚಾಕಾರ ಬಂದಿದೆ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳೇ ಬೀದಿಗಿಳಿದು ಜನರ ಮುಂದೆ ಬಂದು ನ್ಯಾಯ ಕೇಳುತ್ತಿದ್ದಾರೆ. ಆದರೂ ಮೋದಿ ಮೌನ ತಾಳಿದ್ದಾರೆ. ಮೋದಿಯವರ ಯಾವುದೇ ಕಾರ್ಯಕ್ರಮ ಸಫಲವಾಗಿಲ್ಲ. ದೇಶದಲ್ಲಿ ಕಚ್ಚಾ ತೈಲ ಬೆಲೆ ನಿರಂತರ ಏರಿಕೆಯಾಗುತ್ತಲೇ ಇವೆ. ಆದರೆ, ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಳೆ ಇಳಿಕೆಯಾಗುತ್ತಿದೆ. ಈ ಹಣ ಎಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.

ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್, ರಾಜ್ಯ ಉಸ್ತುವಾರಿ ಸಿ. ವೇಣಯಗೋಪಾಲ್, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಾ.ಜಿ ಪರಮೇಶ್ವರ್, ಮುನಿಯಪ್ಪ, ಸತೀಶ್ ಜಾರಕಿಹೊಳಿ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಶಾಂತನಗೌಡ, ವಡ್ನಾಳ್ ರಾಜಣ್ಣ, ರಾಜೇಶ್ ಎಚ್,ಪಿ., ಶಿವಮೂರ್ತಿ ನಾಯ್ಕ, ಅಬ್ದುಲ್ ಜಬ್ಬಾರ್, ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಮೇಯರ್ ಅನಿತಾಬಾಯಿ ಮತ್ತಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News