ಮೈಸೂರು: ದಲಿತರ ಮೇಲಿನ ಗೋಲಿಬಾರ್ ಖಂಡಿಸಿ ದಸಂಸ ಪಂಜಿನ ಮೆರವಣಿಗೆ
ಮೈಸೂರು,ಏ.3: ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ದಲಿತರ ಮೇಲೆ ಉದ್ದೇಶಪೂರ್ವಕವಾಗಿ ಗೋಲಿಬಾರ್ ಮಾಡಿ ಹತ್ಯೆ ಮಾಡಲಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಒಕ್ಕೂಟಗಳು ಪಂಜಿನ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಿದರು.
ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ದೇವರಾಜ ಅರಸು ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದರು.
ದಲಿತರ ಮೇಲೆ ಗೋಲಿಬಾರ್ ನಡೆಸಿದ ಸರಕಾರಗಳಿಗೆ ಧಿಕ್ಕಾರ. ದಲಿತ ದೌರ್ಜನ್ಯ ಕಾಯ್ದೆ ಹಿಂದೆ ಬಿಜೆಪಿ ಆರೆಸ್ಸೆಸ್ ಕೈವಾಡಕ್ಕೆ ಧಿಕ್ಕಾರ, ಎಂಬ ಘೋಷಣೆಗಳನ್ನು ಕೂಗಿದರು.
ಕೇಂದ್ರದಲ್ಲಿ ಎನ್.ಡಿ.ಎ. ನೇತೃತ್ವದ ಸರಕಾರ ಆಡಳಿಕ್ಕೆ ಬಂದ ಮೇಲೆ ಬಿಜೆಪಿ ಆಡಳಿತ ವಿರುವ ರಾಜ್ಯಗಳಲ್ಲಿ ಕ್ಷುಲ್ಲಕ ಕಾರಣಗಳಿಗಾಗಿ ದಲಿತರ ಮೇಲೆ ನಿರಂತರ ದೌರ್ಜನ್ಯ, ಕೊಲೆ, ಸುಲಿಗೆ ಅತ್ಯಾಚರ ಪ್ರಕರಣಗಳು ಹೆಚ್ಚಾಗಿದ್ದು, ಕುದುರೆ ಮೇಲೆ ಕುಲಿತುಕೊಂಡು ಸವಾರಿ ಮಾಡಿದ ಎಂಬ ಕಾರಣಕ್ಕೆ ದಲಿತ ಯುವಕನನ್ನು ಬರ್ಬರವಾಗಿ ಕೊಂದಿರುವುದು ಅಮಾನವೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂವಿಧಾನ ವಿರೋದಿ ಆಡಳಿತ ನಡೆಸುತ್ತಿರುವ ರಾಜ್ಯ ಸರಕಾರಗಳನ್ನು ಕೂಡಲೇ ವಜಾಗೊಳಿಸಬೇಕು. ಘಟನೆ ಸಂಬಂಧ ಮೃತ ದಲಿತ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ, ಭೂಮಿ ನೀಡಿ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಚೋರನಹಳ್ಳಿ ಶಿವಣ್ಣ, ಎಡದೊರೆ ಮಹದೇವಯ್ಯ, ಹುಲ್ಲಹಳ್ಳಿ ನಾರಾಯಣ, ಕಿರಂಗೂರು ಸ್ವಾಮಿ, ಕೆ.ವಿ.ದೇವೇಂದ್ರ, ಕುಮಾರ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.