ದಿಲ್ಲಿ ಚುನಾವಣಾ ಆಯೋಗದಲ್ಲಿ ಅಮಿತ್ ಶಾ ವಿರುದ್ಧ ದೂರು ದಾಖಲು
ಮೈಸೂರು,ಏ.3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೈಸೂರಿಗೆ ಆಗಮಿಸಿದ್ಧ ವೇಳೆ ಬಿಜೆಪಿ ಕಾರ್ಯಕರ್ತ ಮೃತ ರಾಜು ಕುಟುಂಬಕ್ಕೆ 5 ಲಕ್ಷ ಪರಿಹಾರ ಭರವಸೆ ಘೋಷಣೆ ಹಿನ್ನೆಲೆಯಲ್ಲಿ ದಿಲ್ಲಿ ಚುನಾವಣಾ ಆಯೋಗದಲ್ಲಿ ಅಮಿತ್ ಶಾ ಮೇಲೆ ದೂರು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೆಹಲಿಯ ಚುನಾವಣಾ ಆಯೋಗ ಬೆಂಗಳೂರಿನ ಚುನಾವಣಾ ಆಯೋಗಕ್ಕೆ ಕೇಸ್ ವರ್ಗಾಯಿಸಿದೆ. ಬೆಂಗಳೂರಿನ ಚುನಾವಣಾ ಆಯೋಗ ಈಗ ಕೇಸ್ ಸಂಬಂಧ ವರದಿ ಕೇಳಿದೆ. ಕುಟುಂಬದವರನ್ನು ಭೇಟಿ ಮಾಡಿ ವರದಿ ಕೊಡುವಂತೆ ಚುನಾವಣಾ ಆಯೋಗ ಸೂಚನೆ ನೀಡಿದೆ. ಈಗ ನಾವು ರಾಜು ಕುಟುಂಬವನ್ನು ಭೇಟಿ ಮಾಡಿ ವರದಿ ಕೊಡುತ್ತೇವೆ ಎಂದು ಹೇಳಿದರು.
ಮೈಸೂರಿನಲ್ಲಿ ಒಟ್ಟು 11 ವಿಧಾನ ಸಭಾ ಕ್ಷೇತ್ರಗಳಿದ್ದು, 11 ವಿಧಾನ ಸಭಾ ಕ್ಷೇತ್ರಗಳಿಗೆ 2687+173 ಮತಗಟ್ಟೆಗಳಿವೆ. 210 ಚುನಾವಣಾ ಪರಿಶೀಲನಾ ತಂಡಗಳು, ಒಟ್ಟಾರೆ 19327 ಚುನಾವಣಾಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. 93 ಪರಿವೀಕ್ಷಣಾ ಚುನಾವಣಾಧಿಕಾರಿಗಳು, 201 ಸೆಕ್ಟರ್ ಅಧಿಕಾರಿಗಳು, ಒಟ್ಟಾರೆ 49 ಚೆಕ್ ಪೋಸ್ಟ್ ಗಳ ನಿರ್ಮಾಣ ಮಾಡಲಾಗುವುದು. ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆಯ 26 ವಿವಿಧ ರೀತಿಯ ದೂರುಗಳು ಬಂದಿವೆ. ಈಗಾಗಲೇ ನಾಲ್ಕು ಎಫ್ ಐಆರ್ ದಾಖಲಾಗಿವೆ. 144 ರೈಡ್, ಅಕ್ರಮ ಮದ್ಯ ಸಾಗಣೆ ಆರೋಪದಡಿ 29 ಜನರನ್ನು ಬಂಧಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ವಿರುದ್ಧ ದೂರು ದಾಖಲಿಸುವುದು ಹಾಗೂ ಅನುಮತಿಗೆ ತಾಲೂಕು ಕಚೇರಿಗಳಲ್ಲಿಯೂ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಮತದಾರರನ್ನು ಸೆಳೆಯಲು ನಾಯಕರು ಚುನಾವಣಾಧಿಕಾರಿಗಳ ಅನುಮತಿ ಕೇಳಲು ಮುಂದಾಗುತ್ತಿದ್ದಾರೆ. ಮತದಾರರಿಗೆ ಊಟ ಹಾಕಲು ಅನುಮತಿ ಕೇಳುತ್ತಿದ್ದಾರೆ. ಗಣ್ಯ ವ್ಯಕ್ತಿಗಳು ನನಗೆ ಫೋನ್ ಮಾಡಿ ಅನುಮತಿ ನೀಡುವಂತೆ ಕೇಳಿಕೊಂಡಿದ್ದಾರೆ. ಆದರೆ ಅದ್ಯಾವುದಕ್ಕೂ ನಾವು ಅನುಮತಿ ಕೊಟ್ಟಿಲ್ಲ ಎಂದು ತಿಳಿಸಿದರು.