ಎ.4 ರಂದು ತುಮಕೂರಿಗೆ ಆಗಮಿಸಲಿರುವ ರಾಹುಲ್‍ಗಾಂಧಿ: ಸಚಿವ ಟಿ.ಬಿ.ಜಯಚಂದ್ರ
ತುಮಕೂರು,ಎ.03: ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನಾಲ್ಕನೇ ಹಂತದ ಜನಾಶೀರ್ವಾದ ಯಾತ್ರೆಯ ಅಂಗವಾಗಿ ಎಪ್ರಿಲ್ 04 ರಂದು ಮದ್ಯಾಹ್ನ 2:30 ಗಂಟೆಗೆ ತುಮಕೂರಿಗೆ ಆಗಮಿಸುತ್ತಿದ್ದು, ಮೊದಲಿಗೆ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ, ಶ್ರೀಗಳ 111ನೇ ಜನ್ಮ ದಿನೋತ್ಸವದ ಶುಭಾಶಯ ಕೋರುವರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಂಗಳೂರು ವಿಭಾಗ ಮಟ್ಟದ ಜನಾಶೀರ್ವಾದ ಯಾತ್ರೆಗೆ ಆಗಮಿಸುತ್ತಿರುವ ರಾಹುಲ್‍ಗಾಂಧಿ ಎಪ್ರಿಲ್ 04 ರಂದು ಹೊಳಲ್ಕರೆಯ ಕಾರ್ಯಕ್ರಮ ಮುಗಿಸಿ, ಹೆಲಿಕಾಪ್ಟರ್ ಮೂಲಕ ತುಮಕೂರಿಗೆ ಆಗಮಿಸಲಿದ್ದು, ರಸ್ತೆಯ ಮೂಲಕ ಸಿದ್ದಗಂಗಾ ಮಠಕ್ಕೆ ತೆರಳಿ ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಮಠದಿಂದ ಹೊರಟು ಕ್ಯಾತ್ಸಂದ್ರದಲ್ಲಿ ಕೆಲ ನಿಮಿಷ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದು, ಕ್ಯಾತ್ಸಂದ್ರದಿಂದ ಭದ್ರಮ್ಮ ವೃತ್ತಕ್ಕೆ ಆಗಮಿಸಿ, ಪಾದಯಾತ್ರೆ ಮೂಲಕ ಟೌನ್‍ಹಾಲ್ ವೃತ್ತಕ್ಕೆ ಆಗಮಿಸುವರು. ಜಿ.ಜಿ.ಎಸ್ ವೃತ್ತದಲ್ಲಿ ಕೆಲ ಕಾಲ ಸಾರ್ವಜನಿಕರೊಂದಿಗೆ ಮಾತುಕತೆ ನಡೆಸಿ, ನಂತರ ಕುಣಿಗಲ್ ರಸ್ತೆಯ ಮೂಲಕ ಗೂಳೂರು, ನಾಗವಲ್ಲಿ, ಹೆಬ್ಬೂರು ಮೂಲಕ ಕುಣಿಗಲ್ ಮತ್ತು ಮಾಗಡಿಗೆ ತೆರಳುವರು ಎಂದು ವಿವರ ನೀಡಿದರು.
ಎಪ್ರಿಲ್ 08 ರಂದು ಬೆಂಗಳೂರಿನಲ್ಲಿ ಜನಾಶೀರ್ವಾದ ಯಾತ್ರೆಯ ಸಮಾರೋಪ ನಡೆಯಲಿದೆ. ನಂತರ ಟಿಕೇಟ್ ಹಂಚಿಕೆ ಸಮಿತಿ ದೆಹಲಿಯಲ್ಲಿ ಸಭೆ ಸೇರಿ, ಈಗಾಗಲೇ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ, ಟಿಕೇಟ್ ಹಂಚಿಕೆ ಮಾಡಲಿದ್ದಾರೆ. ಎಪ್ರಿಲ್ 15 ರೊಳಗೆ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂಬ ವಿಶ್ವಾಸವಿದೆ. ನನ್ನನ್ನು ಸೇರಿದಂತೆ ಯಾರಿಗೂ ಟಿಕೇಟ್ ನೀಡುವ ಬಗ್ಗೆ ಇದುವರೆಗೂ ಅಧಿಕೃತ ಆದೇಶ ಬಂದಿಲ್ಲ. ಇದರ ಸಂಪೂರ್ಣ ಜವಾಬ್ದಾರಿಯನ್ನು ಪಕ್ಷದ ಹೈಕಮಾಂಡ್‍ಗೆ ಬಿಡಲಾಗಿದೆ. ಯಾರಿಗೆ ಟಿಕೇಟ್ ನೀಡಿದರೂ ಅವರನ್ನು ಗೆಲ್ಲಿಸಿಕೊಂಡು ಬರುವುದಷ್ಟೇ ನಮ್ಮ ಗುರಿ. ಈ ಬಾರಿ ಜಿಲ್ಲೆಯಲ್ಲಿ ಕಾಂಗ್ರೆಸ್ ಕನಿಷ್ಠ ಪಕ್ಷ 9 ಸ್ಥಾನಗಳಲ್ಲಿ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಟಿ.ಬಿ.ಜಯಚಂದ್ರ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ರೀತಿ ನಾವು ಸುಳ್ಳು ಹೇಳಿ ರಾಜಕಾರಣ ಮಾಡುತ್ತಿಲ್ಲ. ಸರಕಾರದ ವಿರುದ್ದ ಯಾವುದೇ ಆಡಳಿತ ವಿರೋಧಿ ಅಲೆಯಿಲ್ಲ. ಎಲ್ಲರನ್ನು ಸಮಾನವಾಗಿ ಕಾಣಲಾಗಿದೆ. ಐದು ವರ್ಷಗಳ ಹಿಂದೆ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಹಾಗಾಗಿ ಜನರು ನಮ್ಮನ್ನು ಕೈಹಿಡಿಯುವ ವಿಶ್ವಾಸವಿದೆ. ರಾಹುಲ್‍ಗಾಂಧಿ ಹೋದಡೆ ಕಾಂಗ್ರೆಸ್‍ಗೆ ಸೋಲು ಎಂಬುದು ಬಿಜೆಪಿ ರಾಷ್ಟ್ರಾಧ್ಯಕ್ಷರ ಭ್ರಮೆ. ಜನರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದ ಇವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಒಂದೇ ಕುಟುಂಬದ ತಂದೆ, ಮಗ ಟಿಕೇಟ್ ಕೇಳುತ್ತಿರುವುದು ಕೇವಲ 7-8 ಜನರು ಮಾತ್ರ. ಪಕ್ಷಕ್ಕೆ ಬರುವವರು, ಹೋಗುವವರು ಇದ್ದೇ ಇರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಪಕ್ಷಾಂತರ ಸರ್ವೆಸಾಮಾನ್ಯ. ಆದರೆ ಈ ಬಾರಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದ ಅವರು, ಲಿಂಗಾಯತ, ವೀರಶೈವ ಅಲ್ಪಸಂಖ್ಯಾತ ಸ್ಥಾನಮಾನಕ್ಕೂ ಸರಕಾರಕ್ಕೆ ಸಂಬಂಧಿವಿಲ್ಲ. ಸರಕಾರಕ್ಕೆ ನೀಡಿದ ಸುಮಾರು 500ಕ್ಕೂ ಹೆಚ್ಚು ಮನವಿಗಳ ಆಧಾರದಲ್ಲಿ ಅವುಗಳನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡಿ, ಕ್ರಮವಹಿಸುವಂತೆ ಕೋರಲಾಗಿದೆ. ಅವರು ರಚಿಸಿದ ಸಮಿತಿ ನೀಡಿದ ವರದಿ ಆಧರಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಪರಿಶಿಷ್ಟ ಜಾತಿಯ ಒಳಮೀಸಲಾತಿ, ಪರಿಶಿಷ್ಟರ ಬಡ್ತಿ ಮೀಸಲಾತಿ ಸಂಬಂಧ ಸರಕಾರ ತನ್ನ ಪಾಲಿನ ಕ್ರಮ ಕೈಗೊಂಡಿದೆ. ಈಗಾಗಲೇ ಭಡ್ತಿ ಮೀಸಲಾತಿ ಮಸೂದೆಯನ್ನು ಅಂಗೀಕಾರಕ್ಕೆ ಕೇಂದ್ರಕ್ಕೆ ಕಳುಹಿಸಲಾಗಿದೆ. ಆದರೆ ಕೇಂದ್ರ ಸರಕಾರ ಇದುವರೆಗೂ ಅಂಗಿಕಾರ ನೀಡಿಲ್ಲ. ಸುಪ್ರಿಂಕೋರ್ಟಿನ ನಿಯಮದನ್ವಯ ಹಿಂಬಡ್ತಿ ಪ್ರಕ್ರಿಯೆ ಜಾರಿಯಲ್ಲಿದೆ. ಒಳಮೀಸಲಾತಿಗಾಗಿ ಸಚಿವ ಸಂಪುಟದ ಉಪಸಮಿತಿಗೆ ನೀಡಲಾಗಿದೆ. ಶೀಘ್ರದಲ್ಲಿಯೇ ಕೇಂದ್ರಕ್ಕೆ ಕಳುಹಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಕೆಂಚಮಾರಯ್ಯ, ಶಾಸಕ ಡಾ.ರಫೀಕ್ ಅಹಮದ್, ಮಾಜಿ ಶಾಸಕ ಡಾ.ಎಸ್.ಷಪಿ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್, ಜಿ.ಎಸ್.ಸೋಮಣ್ಣ, ಆರ್.ರಾಜೇಂದ್ರ ಮತ್ತಿತರರಿದ್ದರು.