ಅಮೆರಿಕ ಜೊತೆಗಿನ ವ್ಯಾಪಾರ ತಾರತಮ್ಯ ಕಡಿಮೆ ಮಾಡಿದ ಭಾರತ

Update: 2018-04-04 16:15 GMT

ವಾಶಿಂಗ್ಟನ್, ಎ. 4: ಅಮೆರಿಕ ಮತ್ತು ಇತರ ದೇಶಗಳ ನಡುವಿನ ವ್ಯಾಪಾರ ಕೊರತೆ ಹೆಚ್ಚುತ್ತಿದೆ ಎಂಬುದಾಗಿ ಕಳೆದ ವರ್ಷ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೊಡ್ಡ ದನಿಯಲ್ಲಿ ಗದ್ದಲ ಎಬ್ಬಿಸಿದ್ದರು. ಹಿಂದಿನ ಆಡಳಿತದ ಇಂಥ ದೋಷಪೂರಿತ ನೀತಿಗಳಿಂದ ಅಮೆರಿಕಕ್ಕೆ ನಷ್ಟವಾಗುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ ಮತ್ತು ದಕ್ಷಿಣ ಕೊರಿಯಗಳು ಅಮೆರಿಕದೊಂದಿಗಿನ ದ್ವಿಪಕ್ಷೀಯ ವ್ಯಾಪಾರದಲ್ಲಿನ ಅಸಮಾನತೆಯನ್ನು ಸದ್ದಿಲ್ಲದೆ ಕಡಿತ ಮಾಡಿವೆ. ಆದರೆ, ಇದಕ್ಕೆ ಪ್ರತಿಯಾಗಿ ಅವುಗಳಿಗೆ ಏನು ಸಿಕ್ಕಿದೆ ಎನ್ನುವುದು ಸ್ಪಷ್ಟವಾಗಿಲ್ಲ.

2017ರಲ್ಲಿ ಭಾರತ ಮತ್ತು ಜಪಾನ್ ಸೇರಿದಂತೆ ಬೆರಳೆಣಿಕೆಯ ದೇಶಗಳು ಅಮೆರಿಕದ ವಸ್ತುಗಳ ಆಮದನ್ನು ಹೆಚ್ಚಿಸುವ ಮೂಲಕ ದ್ವಿಪಕ್ಷೀಯ ವ್ಯಾಪಾರ ಅಸಮಾನತೆಗಳನ್ನು ತಗ್ಗಿಸಿದವು. ಈ ಬೆಳವಣಿಗೆಯು, ಭಾಗೀದಾರರೊಂದಿಗಿನ ವ್ಯಾಪಾರ ಅಸಮಾನತೆಯನ್ನು ನಿವಾರಿಸುವುದಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಚ್ಚುವರಿ ತೆರಿಗೆಗಳನ್ನು ಘೋಷಿಸುವುದಕ್ಕೆ ತುಂಬಾ ಮುಂಚೆಯೇ ನಡೆದಿದೆ.

ವ್ಯಾಪಾರ ಅಂತರ 6.1 ಶೇ. ಕಡಿತ

ಅಮೆರಿಕದೊಂದಿಗಿನ ತನ್ನ ವ್ಯಾಪಾರ ಅಸಮಾನತೆಯನ್ನು ಭಾರತ 6.1 ಶೇಕಡದಷ್ಟು ಕಡಿತ ಮಾಡಿ 22.9 ಬಿಲಿಯ ಡಾಲರ್ (ಸುಮಾರು 1.5 ಲಕ್ಷ ಕೋಟಿ ರೂಪಾಯಿ)ಗೆ ತಂದು ನಿಲ್ಲಿಸಿತು. ಸೇನಾ ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಭಾರತ ಇದನ್ನು ಸಾಧಿಸಿತು.

ಭಾರತದ ಈಗಿನ ಸೇನಾ ಉಪಕರಣಗಳ 50 ಶೇಕಡಕ್ಕೂ ಅಧಿಕ ಉಪಕರಣಗಳನ್ನು ರಶ್ಯದಿಂದ ಆಮದು ಮಾಡಿಕೊಳ್ಳಲಾಗಿದೆ.

2017ರ ಆರ್ಥಿಕ ವರ್ಷದಲ್ಲಿ ಭಾರತ ಅಮೆರಿಕದಿಂದ ಮಾಡಿಕೊಂಡ ವಿಮಾನ ಮತ್ತು ಬಿಡಿಭಾಗಗಳ ಆಮದು ಅದರ ಹಿಂದಿನ ವರ್ಷಕ್ಕಿಂತ ದ್ವಿಗುಣಗೊಂಡಿದೆ. ಅಂದರೆ 2017ರಲ್ಲಿ ಅದು 4.24 ಬಿಲಿಯ ಡಾಲರ್ (ಸುಮಾರು 27,600 ಕೋಟಿ ರೂಪಾಯಿ)ಗೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News