ಶಾಸಕ ಸ್ಥಾನಕ್ಕೆ ಮಾಲೀಕಯ್ಯ ಗುತ್ತೇದಾರ್ ರಾಜೀನಾಮೆ: ಎ.8 ರಂದು ಬಿಜೆಪಿ ಸೇರ್ಪಡೆ

Update: 2018-04-05 13:12 GMT

ಹಾವೇರಿ, ಎ. 5: ಕಲಬುರ್ಗಿ ಜಿಲ್ಲೆಯ ಅಫ್ಜಲ್‌ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಾಲೀಕಯ್ಯ ಗುತ್ತೇದಾರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಗುರುವಾರ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿರುವ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರ ನಿವಾಸಕ್ಕೆ ಭೇಟಿ ನೀಡಿದ ಮಾಲೀಕಯ್ಯ ಗುತ್ತೇದಾರ್ ಅವರು, ಸ್ಪೀಕರ್ ಕೋಳಿವಾಡ ಅವರಿಗೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ ಎಂದು ಗೊತ್ತಾಗಿದೆ.

ಇತ್ತೀಚೆಗಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದ ಮಾಲೀಕಯ್ಯ ಗುತ್ತೇದಾರ್, ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಣೆ ಮಾಡಿದ್ದರು. ಈ ಮಧ್ಯೆಯೇ ಅಫ್ಜಲ್‌ಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ವೈ.ಪಾಟೀಲ್ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಎ.8ರಂದು ಶಾಸಕ ಮಾಲೀಕಯ್ಯ ಗುತ್ತೇದಾರ್ ತಮ್ಮ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದು, ಮುಂದಿನ ಚುನಾವಣೆಯಲ್ಲಿ ಅಫ್ಜಲ್‌ಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸುವ ಸಾಧ್ಯತೆಗಳಿಗೆ ಎಂದು ತಿಳಿದು ಬಂದಿದೆ.

‘ಕಾಂಗ್ರೆಸ್ ಪಕ್ಷ ಈಗಾಗಲೇ ತಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಿದೆ. ಹೀಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿರಲಿಲ್ಲ. ಆದರೆ, ಕಾಂಗ್ರೆಸ್ ಋಣ ಬೇಡವೆಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ತನ್ನ ನಡುವೆ ಉತ್ತಮ ಸಂಬಂಧವಿದೆ. ಆದರೆ, ರಾಷ್ಟ್ರೀಯ ಪಕ್ಷ ಸೇರಬೇಕೆಂಬ ಬೆಂಬಲಿಗರ ಒತ್ತಡದಿಂದ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ’
-ಮಾಲೀಕಯ್ಯ ಗುತ್ತೇದಾರ್ ಅಫ್ಜಲ್‌ಪುರ ಕ್ಷೇತ್ರದ ಮಾಜಿ ಶಾಸಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News