ಕೃಷ್ಣಮೃಗಗಳ ಮುಂದೆ ಬೆಲೆ ಕಳೆದುಕೊಳ್ಳುತ್ತಿರುವ ಮನುಷ್ಯ ಮೃಗ

Update: 2018-04-05 18:41 GMT

ಕಾನೂನಿನ ಕೈಗಳು ನೀಳವಾಗಿವೆ ಎನ್ನುವುದು ನಟ ಸಲ್ಮಾನ್ ಖಾನ್ ಪ್ರಕರಣದಲ್ಲಿ ನಿಜವಾಗಿದೆ. 1998ರಲ್ಲಿ ಚಿತ್ರೀಕರಣವೊಂದರ ವೇಳೆ ಮೋಜಿಗಾಗಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಲ್ಮಾನ್‌ಖಾನ್ ಸಿಲುಕಿಕೊಂಡಿದ್ದರು. ಇವರು ಮಾತ್ರವಲ್ಲದೆ, ಸೈಫ್ ಅಲಿಖಾನ್, ಸೋನಾಲಿ ಬೇಂದ್ರೆ, ನೀಲಂ ಹಾಗೂ ತಬು ಕೂಡ ಈ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದರು. ಸುಮಾರು 20 ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ಜೀಕಾಡುತಿದೆ. ಇದೀಗ ಸಲ್ಮಾನ್ ಖಾನ್ ಮೇಲಿನ ಆರೋಪಗಳು ಸಾಬೀತಾಗಿವೆ.

ಸಲ್ಮಾನ್ ಖಾನ್‌ಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಸಲ್ಮಾನ್ ಖಾನ್ ಸ್ಥಾನದಲ್ಲಿ ಬಡವನೊಬ್ಬ ಇದ್ದಿದ್ದರೆ ಶಿಕ್ಷೆ ಇನ್ನಷ್ಟು ಕಠಿಣವಾಗಿರುತ್ತಿತ್ತು ಮತ್ತು ವಿಚಾರಣಾ ಪ್ರಕ್ರಿಯೆ ಇದಕ್ಕಿಂತಲೂ ವೇಗವಾಗಿರುತ್ತಿತ್ತು. ಈ ಹಿಂದಿನ ನ್ಯಾಯಾಲಯಗಳಲ್ಲೂ ಸಲ್ಮಾನ್ ಖಾನ್ ಆರೋಪ ಸಾಬೀತಾಗಿ ಅವರಿಗೆ ಶಿಕ್ಷೆಯಾಗಿತ್ತು. ಆದರೆ ಮೇಲಿನ ನ್ಯಾಯಾಲಯಗಳ ಸಹಾಯದಿಂದ ಸಲ್ಮಾನ್ ಖಾನ್ ಶಿಕ್ಷೆಯಿಂದ ಪಾರಾಗುತ್ತಲೇ ಬಂದಿದ್ದರು. ಇದೀಗ ಜೋಧ್‌ಪುರ ನ್ಯಾಯಾಲಯ ಇವರಿಗೆ ಐದುವರ್ಷ ಜೈಲು ಶಿಕ್ಷೆ ವಿಧಿಸಿದೆಯಾದರೂ ಅವರು ಎಷ್ಟು ದಿನ ಜೈಲಲ್ಲಿರುತ್ತಾರೆ ಎಂದು ಊಹಿಸುವುದು ಕಷ್ಟ. ಯಾಕೆಂದರೆ, ಸಲ್ಮಾನ್ ಖಾನ್ ಎನ್ನುವ ಪ್ರತಿಷ್ಠಿತ ವ್ಯಕ್ತಿಗೆ ಮೇಲ್ಮನವಿ ಮತ್ತು ಈ ಶಿಕ್ಷೆಯಿಂದ ಪಾರಾಗುವ ಅಡ್ಡದಾರಿ ಹುಡುಕುವುದು ಕಷ್ಚವೇನೂ ಅಲ್ಲ.

ಇಲ್ಲಿ ಶಿಕ್ಷೆ ಮುಖ್ಯವಲ್ಲ. ಒಬ್ಬ ಪ್ರಸಿದ್ಧ ನಟನಾಗಿ ದುಡ್ಡಿನ ಮದದಿಂದ ತಾನು ಏನು ಮಾಡಿದರೂ ನಡೆಯುತ್ತದೆ ಮತ್ತು ಅದನ್ನು ಜೀರ್ಣಿಸಿಕೊಳ್ಳಬಲ್ಲೆ ಎಂಬ ದುರಹಂಕಾರದಿಂದ ಸಲ್ಮಾನ್ ಖಾನ್ ಕೃಷ್ಣಮೃಗಗಳ ಬೇಟೆಯಾಡಿದ್ದರು. ಅವರ ಆ ದುರಹಂಕಾರಕ್ಕೆ ನ್ಯಾಯಾಲಯ ಸರಿಯಾದ ಪಾಠ ಕಲಿಸಿದೆ. ಒಂದು ಕಾಲದಲ್ಲಿ ಬೇಟೆಯಾಡಿ ಜೀವಿಸುವ ಆದಿವಾಸಿಗಳು, ಬುಡಕಟ್ಟು ಜನರಿದ್ದರು. ಈಗಲೂ ಅರಣ್ಯ ಉತ್ಪನ್ನಗಳನ್ನೇ ಅವಲಂಬಿಸಿರುವ ಸಾವಿರಾರು ಬುಡಕಟ್ಟು ಜನರಿದ್ದಾರೆ. ಇವರ ಬದುಕು ಅರಣ್ಯ ನೀತಿಯಿಂದಾಗಿ ಅತಂತ್ರದಲ್ಲಿದೆ. ಕರಡಿ, ಕೋತಿಯಾಡಿಸುವವರನ್ನೂ ಈ ವನ್ಯಜೀವಿ ಕಾಯ್ದೆ ಶಿಕ್ಷಿಸುತ್ತದೆ. ಹೀಗಿರುವಾಗ, ಬರೇ ಮೋಜಿಗಾಗಿ, ಸಮಯ ಕಳೆಯುವುದಕ್ಕಾಗಿ ಅಪರೂಪದ ಕೃಷ್ಣಮೃಗಗಳನ್ನು ಬೇಟೆಯಾಡಿರುವ ಸಲ್ಮಾನ್ ಖಾನ್‌ನಂತಹವರಿಗೆ ವನ್ಯಜೀವಿಗಳ ಮಹತ್ವವನ್ನು ತಿಳಿಸಿಕೊಡಲು ಐದು ವರ್ಷ ಶಿಕ್ಷೆ ಕಡಿಮೆಯೇ ಆಯಿತು.

ಆ ಮೂಲಕ, ವನ್ಯಜೀವಿ ಕಾಯ್ದೆಯನ್ನು ಉಲ್ಲಂಘಿಸುವ ಜನರಿಗೆ ಎಚ್ಚರಿಕೆಯನ್ನು ನೀಡಿದಂತಾಗಿದೆ. ಅರಣ್ಯದಲ್ಲಿ ಬದುಕುತ್ತಿರುವ ಕಾಡುಪ್ರಾಣಿಗಳ ಜೀವವೂ ನ್ಯಾಯಾಲಯಕ್ಕೆ ಮಹತ್ವದ್ದೇ ಆಗಿದೆ. ಅದರ ಮುಂದೆ ಎಷ್ಟು ದೊಡ್ಡ ವ್ಯಕ್ತಿಯಾದರೂ ಆತ ಅಪರಾಧಿಯೇ ಆಗಿರುತ್ತಾನೆ ಎನ್ನುವುದನ್ನು ನ್ಯಾಯಾಲಯ ಘೋಷಿಸಿದೆ. ಆದರೆ ಇದೇ ಸಂದರ್ಭದಲ್ಲಿ ಸಲ್ಮಾನ್ ಖಾನ್‌ರ ಇನ್ನೊಂದು ಪ್ರಕರಣವನ್ನು ನೆನಪಿಸಿಕೊಳ್ಳಬೇಕಾಗಿದೆ. 2002ರಲ್ಲಿ ಅಂದರೆ ಕೃಷ್ಣ ಮೃಗ ಬೇಟೆಯಾಡಿದ ಪ್ರಕರಣದಲ್ಲಿ ಸಿಲುಕಿಕೊಂಡ ನಾಲ್ಕು ವರ್ಷದ ಬಳಿಕ ಇದೇ ಖಾನ್ ಮುಂಬೈಯ ಹೆದ್ದಾರಿಯಲ್ಲಿ ಪಾದಚಾರಿಯೊಬ್ಬನಿಗೆ ಕಾರನ್ನು ಗುದ್ದಿ ಪರಾರಿಯಾದ ಆರೋಪವನ್ನು ಹೊತ್ತುಕೊಂಡರು. ಇದರಲ್ಲಿ ಮೃತಪಟ್ಟಿದ್ದು ಒಬ್ಬ ಅಮಾಯಕ ಮನುಷ್ಯ. ವಿಶೇಷವೆಂದರೆ, ಮನುಷ್ಯನನ್ನು ಕೊಂದ ಆರೋಪದಲ್ಲಿ ಸಲ್ಮಾನ್ ನಿರಪರಾಧಿಯಾಗಿ ಘೋಷಿಸಲ್ಪಟ್ಟರು. ಇಂದಿಗೂ ಮಾಧ್ಯಮಗಳಲ್ಲಿ ಸತ್ತ ಕೃಷ್ಣಮೃಗ ಚರ್ಚೆಯಾದಷ್ಟು, ಇವರ ಕಾರಿಗೆ ಸಿಲುಕಿ ಮೃತಪಟ್ಟ ಅಮಾಯಕ ಚರ್ಚೆಯಾಗಿಲ್ಲ.

ಕಾಡಿನಲ್ಲಿರುವ ಕೃಷ್ಣಮೃಗಕ್ಕಿರುವ ಬೆಲೆ, ನಾಡಿನಲ್ಲಿರುವ ಮನುಷ್ಯನಿಗಿಲ್ಲ ಎಂದು ಮಾಧ್ಯಮಗಳು ಭಾವಿಸಿರಬಹುದೇ? ಒಂದು ವೇಳೆ ಅಂದು ಸಲ್ಮಾನ್ ಖಾನ್ ಕಾರು ಢಿಕ್ಕಿ ಹೊಡೆದು ಸಾಯಿಸಿರುವುದು ಮನುಷ್ಯನಾಗಿರದೆ ಅದೂ ಒಂದು ಕೃಷ್ಣ ಮೃಗವಾಗಿದ್ದಿದ್ದರೆ ಅದರಿಂದ ಇಷ್ಟು ಸುಲಭದಲ್ಲಿ ಸಲ್ಮಾನ್ ಖಾನ್ ಪಾರಾಗುವುದಕ್ಕೆ ಸಾಧ್ಯವಿತ್ತೇ? ಬೇಟೆಯಾಡಿ ಕೃಷ್ಣಮೃಗವನ್ನು ಕೊಂದ ಆರೋಪದಲ್ಲಿ ಸಲ್ಮಾನ್‌ಖಾನ್‌ಗೆ ಐದು ವರ್ಷ ಶಿಕ್ಷೆ ನೀಡಿದ ನ್ಯಾಯಾಲಯವನ್ನು ಅಭಿನಂದಿಸುತ್ತಲೇ, ಖಾನ್‌ರ ಕಾರಿನಡಿಗೆ ಬಿದ್ದ ಶ್ರೀಸಾಮಾನ್ಯನಿಗೆ ಯಾಕೆ ಸರಿಯಾದ ನ್ಯಾಯ ಸಿಗಲಿಲ್ಲ ಎನ್ನುವುದನ್ನೂ ಚರ್ಚಿಸಬೇಕಾಗಿದೆ. ಇಂದು ಕೃಷ್ಣ ಮೃಗವೊಂದರ ಸಾವಿಗೆ ಮರುಗುವಷ್ಟು ಮಾನವೀಯವಾಗಿದೆ ನಮ್ಮ ಸಮಾಜ ಅನ್ನಿಸುತ್ತದೆಯೇ? ಉಡುಪಿಯಲ್ಲಿ ದನದ ವ್ಯಾಪಾರಿ ಪ್ರವೀಣ್ ಪೂಜಾರಿ ಎಂಬವನನ್ನು ಅತ್ಯಂತ ಬರ್ಬರವಾಗಿ ಸಂಘಪರಿವಾರ ಕಾರ್ಯಕರ್ತರ ಗುಂಪು ಕೊಂದು ಹಾಕಿತು. ಅವರ ಕಾಳಜಿ ನಿಜಕ್ಕೂ ದನವಾತ್ತೇ? ಪ್ರಾಣಿಗಳಿಗಾಗಿ ಕರಗುವವರು ಮನುಷ್ಯರನ್ನು ಕೊಂದು ಹಾಕಲು ಸಾಧ್ಯವೇ? ಹಾಡಹಗಲೇ ಜನಸಂದಣಿಯ ನಡುವೆ ಈ ಕೊಲೆ ನಡೆಯಿತು. ಒಬ್ಬ ಮನುಷ್ಯನನ್ನು ಕಾರಣವೇ ಇಲ್ಲದೆ ಕೊಂದು ಹಾಕಿದ ಈ ಘಟನೆಗೆ ಎರಡು ವರ್ಷ ಸಂದಿದೆ. ಈಗಾಗಲೇ ಇವರಲ್ಲಿ ಪ್ರಮುಖ ಆರೋಪಿಗಳೆಂದು ಗುರುತಿಸಿಕೊಂಡವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಯಾಗಬೇಕಾಗಿತ್ತು. ಆದರೆ ಇವರನ್ನು ಶಿಕ್ಷಿಸುವಲ್ಲಿ ನಮ್ಮ ನ್ಯಾಯಾಲಯ ಸಂಪೂರ್ಣ ವಿಫಲವಾಗಿದೆ.

ಪೆಹ್ಲೂಖಾನ್ ಎಂಬ ವೃದ್ಧ ದನದ ವ್ಯಾಪಾರಿಯೊಬ್ಬನನ್ನು ರಾಜಸ್ಥಾನದಲ್ಲಿ ಗುಂಪು ಬರ್ಬರವಾಗಿ ಥಳಿಸಿ ಕೊಂದು ಹಾಕಿತು. ಈತನ ಹೈನುಗಾರಿಕೆ ಉದ್ಯಮ ಈಗ ಮುಚ್ಚಿದೆ. ಕುಟುಂಬ ಅತ್ಯಂತ ಸಂಕಷ್ಟದಲ್ಲಿದೆ. ಆದರೆ ಈ ಪ್ರಕರಣದ ಆರೋಪಿಗಳಿಗೆ ಶಿಕ್ಷೆಯಾಗುವ ಭರವಸೆ ಯಾರಲ್ಲೂ ಇಲ್ಲ. ಅಪರಾಧಿಗಳನ್ನು ರಕ್ಷಿಸಲು ಪೊಲೀಸರೇ ನೆರವು ನೀಡುತ್ತಿದ್ದಾರೆ ಎಂಬ ಆರೋಪವಿದೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಓರ್ವ ವೌಲಾನರ ಮಗನನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿ ಕೊಂದು ಹಾಕಿತು. ಅದರ ವೀಡಿಯೊ ಎಷ್ಟು ಬರ್ಬರವಾಗಿತ್ತು ಎಂದರೆ ಸೇರಿದ ಆ ಗುಂಪು ಮನರಂಜನೆಗಾಗಿಯೇ ಆ ಕೊಲೆಯನ್ನು ಮಾಡಿತ್ತು. ಆತನಿಗೆ ಥಳಿಸುವ ಮೂಲಕ ಅವರು ವಿಕೃತ ಆನಂದವನ್ನು ತನ್ನದಾಗಿಸಿಕೊಳ್ಳುತ್ತಿದ್ದರು.

ಮೋಜಿಗಾಗಿ ಸಲ್ಮಾನ್ ಖಾನ್ ಆಡಿದ ಬೇಟೆಗೆ ಇದನ್ನು ಯಾವ ಕಾರಣಕ್ಕೂ ಹೋಲಿಸುವಂತಿಲ್ಲ. ಅಷ್ಟೇ ಏಕೆ, ರಾಜಸ್ಥಾನದಲ್ಲಿ ವಿಕೃತ ಕೊಲೆಗಾರನೊಬ್ಬ ‘ಲವ್‌ಜಿಹಾದ್’ನ ನೆಪವನ್ನು ಮುಂದಿಟ್ಟು ಅಮಾಯಕ ಮನುಷ್ಯನನ್ನು ಪಿಕ್ಕಾಸಿನಲ್ಲಿ ಇರಿದು ಕೊಂದು ಬೆಂಕಿ ಹಚ್ಚುತ್ತಾನೆ ಮತ್ತು ಇದನ್ನೆಲ್ಲ ಚಿತ್ರೀಕರಿಸಿ ತನ್ನ ಕೃತ್ಯವನ್ನು ಸಮರ್ಥಿಸಿಕೊಳ್ಳುತ್ತಾನೆ. ಇದಕ್ಕಿಂತಲೂ ಭಯಾನಕ ವಿಷಯವೆಂದರೆ, ನಾಗರಿಕರೆಂದು, ಸಭ್ಯರೆಂದು ಸಮಾಜದಲ್ಲಿ ಗುರುತಿಸಿಕೊಂಡವರು ಈತನಿಗೆ ಹಣಸಂಗ್ರಹಿಸಿ ಅದನ್ನು ಉಡುಗೊರೆಯಾಗಿ ನೀಡುತ್ತಾರೆ. ಆತನನ್ನು ಶೂರ, ವೀರ ಎಂದೆಲ್ಲ ಬಣ್ಣಿಸುತ್ತಾರೆ.

ಸಂಸ್ಕೃತಿ ರಕ್ಷಕನ ಬಿರುದು ನೀಡುತ್ತಾರೆ. ಕಳೆದ ರಾಮನವಮಿಯ ಮೆರವಣಿಗೆಯಲ್ಲಿ ಈತನ ಸ್ತಬ್ಧಚಿತ್ರವೊಂದನ್ನು ಇಡಲಾಯಿತು. ಇವೆಲ್ಲವುಗಳಿಗೆ ಹೋಲಿಸಿದಾಗ ಈ ದೇಶದಲ್ಲಿ ಮನುಷ್ಯನ ಪ್ರಾಣ, ಪ್ರಾಣಿಗಳ ಪ್ರಾಣಕ್ಕಿಂತ ಅಗ್ಗವಾಗಿದೆ ಎಂದೆನಿಸುವುದಿಲ್ಲವೇ? ಇಂದು ಈ ದೇಶದ ಬೀದಿ ಬೀದಿಗಳಲ್ಲಿ ಗಾಂಜಾದಂತಹ ಮಾದಕ ದ್ರವ್ಯಗಳನ್ನೂ, ಕೋಮು ದ್ವೇಷದ ಅಮಲನ್ನು ತಲೆಗೇರಿಸಿಕೊಂಡ ಜನರು ಮೋಜಿಗಾಗಿಯೇ ಒಬ್ಬಂಟಿ ಮನುಷ್ಯನನ್ನು ಕೊಲ್ಲುವಂತಹ, ಬೇಟೆಯಾಡುವಂತಹ ಸನ್ನಿವೇಶ ನಿರ್ಮಾಣಗೊಂಡಿದೆ. ಇದರ ವಿರುದ್ಧ ನಮ್ಮ ನ್ಯಾಯ ವ್ಯವಸ್ಥೆ ಅಸಹಾಯಕವಾಗಿದೆ. ಇಂತಹ ಸಂದರ್ಭದಲ್ಲಿ ಸಲ್ಮಾನ್‌ಖಾನ್‌ಗೆ ವಿಧಿಸಲ್ಪಟ್ಟ ಐದು ವರ್ಷ ಜೈಲು ಶಿಕ್ಷೆ, ನ್ಯಾಯವ್ಯವಸ್ಥೆ ಈ ಮೂಲಕ ತನ್ನನ್ನು ತಾನೇ ಅಣಕಿಸಿಕೊಂಡಿದೆ ಎಂದು ಶ್ರೀಸಾಮಾನ್ಯನಿಗೆ ಅನ್ನಿಸಿದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆಯೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News