ಆದಿತ್ಯನಾಥ್ ಗೆ ‘ದಲಿತ ಮಿತ್ರ’ ಪ್ರಶಸ್ತಿ ಪ್ರದಾನಕ್ಕೆ ನಿರ್ಧಾರ: ಅಂಬೇಡ್ಕರ್ ಮಹಾ ಸಭಾದಲ್ಲಿ ಬಿರುಕು

Update: 2018-04-06 14:25 GMT

ಲಕ್ನೋ,ಎ.6: ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ‘ದಲಿತ ಮಿತ್ರ’ ಪ್ರಶಸ್ತಿಯನ್ನು ಪ್ರದಾನಿಸುವ ದಲಿತ ಸಂಘಟನೆ ಅಂಬೇಡ್ಕರ್ ಮಹಾಸಭಾದ ಅಧ್ಯಕ್ಷ ಲಾಲಜಿ ಪ್ರಸಾದ ನಿರ್ಮಲ್ ಅವರ ನಿರ್ಧಾರವನ್ನು ಮಹಾಸಭಾದ ಹಿರಿಯ ಸದಸ್ಯರು ಶುಕ್ರವಾರ ಪ್ರಶ್ನಿಸಿದ್ದಾರೆ. ನಿರ್ಮಲ್ ಅವರು ಆದಿತ್ಯನಾಥ್ ಗೆ ಪ್ರಶಸ್ತಿಯನ್ನು ಪ್ರದಾನಿಸುವ ನಿರ್ಧಾರವನ್ನು ಗುರುವಾರ ಪ್ರಕಟಿಸಿದ್ದರು.

 ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಮಹಾಸಭಾದ ಸ್ಥಾಪಕ ಸದಸ್ಯರಾಗಿರುವ ಹರೀಶ ಚಂದ್ರ ಮತ್ತು ಎಸ್.ಆರ್.ದಾರಾಪುರಿ ಅವರು ನಿರ್ಮಲ್ ವಿರುದ್ಧ ಶಿಸ್ತುಕ್ರಮ ವನ್ನು ಜರುಗಿಸಲು ಸಂಸ್ಥೆಯ ವಾರ್ಷಿಕ ಸರ್ವಸಾಧಾರಣ ಸಭೆಗೆ ಆಗ್ರಹಿಸಿದ್ದಾರೆ. ನಿರ್ಮಲ್ ತನ್ನ ಅಧಿಕಾರವನ್ನು ಅತಿಕ್ರಮಿಸಿ ದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಆದಿತ್ಯನಾಥ್ ರ ಆಡಳಿತದಲ್ಲಿ ತಮ್ಮ ಮೇಲಿನ ದೌರ್ಜನ್ಯ ಗಳಿಂದಾಗಿ ದಲಿತರು ಸಿಟ್ಟಾಗಿದ್ದಾರೆ. ಪ್ರಶಸ್ತಿಯೊಂದನ್ನು ಸ್ಥಾಪಿಸಿ ಅದನ್ನು ಆದಿತ್ಯನಾಥ್ ರಿಗೆ ಪ್ರದಾನಿಸುವುದರಿಂದ ದಲಿತರ ಗಾಯಗಳ ಮೇಲೆ ಉಪ್ಪನ್ನು ಸವರಿದಂತಾಗುತ್ತದೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ದಾರಾಪುರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪ್ರಶಸ್ತಿ ಪ್ರದಾನದ ನಿರ್ಧಾರವು ನಿರಂಕುಶವಾಗಿದೆ ಎಂದು ಬಣ್ಣಿಸಿದ ಮಾಜಿ ಐಎಎಸ್ ಅಧಿಕಾರಿ ಹರೀಶ ಚಂದ್ರ ಅವರು, ಸ್ಥಾಪಕ ಸದಸ್ಯರೊಂದಿಗೆ ಈ ವಿಷಯವನ್ನು ಚರ್ಚಿಸಲಾಗಿಲ್ಲ ಎಂದು ಆರೋಪಿಸಿದರು.

 ಆದರೆ ಈ ಆರೋಪಗಳನ್ನು ತಿರಸ್ಕರಿಸಿರುವ ನಿರ್ಮಲ್ ಆದಿತ್ಯನಾಥ್ ರಿಗೆ ಪ್ರಶಸ್ತಿಯನ್ನು ಪ್ರದಾನಿಸುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದಿತ್ಯನಾಥ್ ಅವರು ಉತ್ತರ ಪ್ರದೇಶದ ಎಲ್ಲ ಪ್ರಜೆಗಳ ಸ್ನೇಹಿತನಾಗಿದ್ದಾರೆ, ಹೀಗಾಗಿ ಅವರು ದಲಿತರ ಸ್ನೇಹಿತ ಕೂಡ ಆಗಿದ್ದಾರೆ ಎಂದು ಅವರು ಹೇಳಿದರು. ನಿರ್ಮಲ್ ಉತ್ತರ ಪ್ರದೇಶ ಸಚಿವಾಲಯ ಸೇವೆಯಿಂದ ನಿವೃತ್ತರಾದ ಬಳಿಕ 2013ರಲ್ಲಿ ಮಹಾಸಭಾದ ಅಧ್ಯಕ್ಷರಾಗಿದ್ದರು.

ಆದಿತ್ಯನಾಥ ಅವರ ದಲಿತ ಸ್ನೇಹಿ ನಿರ್ಧಾರಗಳನ್ನು ಗಮನಿಸಿ ಆಯ್ಕೆ ಸಮಿತಿಯು ಅವರಿಗ ‘ದಲಿತ ಮಿತ್ರ’ ಪ್ರಶಸ್ತಿಯನ್ನು ಪ್ರದಾನಿಸಲು ನಿರ್ಧರಿಸಿದೆ ಎಂದು ನಿರ್ಮಲ್ ಹೇಳಿದ್ದರು.

 ಡಾ.ಅಂಬೇಡ್ಕರ್ ಅವರ ಹೆಸರಿನ ಜೊತೆಗೆ ‘ರಾಮ್ ಜಿ’ಯನ್ನು ಸೇರಿಸುವ ಮೂಲಕ ಅದನ್ನು ಸರಿ ಮಾಡುವ ಮತ್ತು ಪೂರ್ಣಗೊಳಿಸುವ ಮುಖ್ಯಮಂತ್ರಿಗಳ ನಿರ್ಧಾರವನ್ನು ಉಲ್ಲೇಖಿಸಿದ ನಿರ್ಮಲ್, ಅವರ ಈ ಕ್ರಮದಿಂದ ಸಮಿತಿಯು ಪ್ರಭಾವಿತಗೊಂಡಿದೆ ಎಂದಿದ್ದರು.

ಎಲ್ಲ ಸರಕಾರಿ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಡ್ಡಾಯಗೊಳಿಸಿರುವ ಉತ್ತರ ಪ್ರದೇಶ ಸರಕಾರದ ಕ್ರಮವನ್ನು ಸಮಿತಿಯು ಪ್ರಶಂಸಿಸಿದೆ ಎಂದೂ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News