ಇಂದು ಆಂಧ್ರ, ಮುಂದೆ ಇಡೀ ದೇಶವೇ ಬಿಜೆಪಿಯನ್ನು ತಿರಸ್ಕರಿಸಲಿದೆ: ಚಂದ್ರಬಾಬು ನಾಯ್ಡು

Update: 2018-04-06 14:59 GMT

ಅಮರಾವತಿ, ಎ.6: ಆಂಧ್ರ ಪ್ರದೇಶದ ಜನರು ಈಗಾಗಲೇ ಬಿಜೆಪಿಯನ್ನು ಸ್ವೀಕರಿಸುತ್ತಿಲ್ಲ. ಮುಂದೆ ಇಡೀ ದೇಶವೇ ಬಿಜೆಪಿಯನ್ನು ತಿರಸ್ಕರಿಸುವ ದಿನವೊಂದು ಬರುತ್ತದೆ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಶುಕ್ರವಾರ ತಿಳಿಸಿದ್ದಾರೆ. ಸದನವನ್ನು ಮುಂದೂಡುವ ಮೂಲಕ ಬಿಜೆಪಿಯು ಇಷ್ಟು ದಿನಗಳ ಕಾಲ ವಾಸ್ತವ ವಿಷಯದಿಂದ ದೂರ ಓಡುತ್ತಿತ್ತು. ಕಲಾಪವನ್ನು ಹೀಗೆಯೇ ಅನಿರ್ದಿಷ್ಟಾವಧಿ ಮುಂದೂಡುವುದಾದರೆ ಎಲ್ಲ ಸಂಸದರು ರಾಷ್ಟ್ರಪತಿಯನ್ನು ಭೇಟಿ ಮಾಡಬೇಕಾಗುತ್ತದೆ. ಬಿಜೆಪಿಯು ವಿಭಜಿಸಿ ಆಳುವ ನೀತಿಯನ್ನು ಅನುಸರಿಸುತ್ತಿದೆ ಎಂದು ನಾಯ್ಡು ಆರೋಪಿಸಿದ್ದಾರೆ.

ಇದೇ ವೇಳೆ, ಆಂಧ್ರ ಪ್ರದೇಶಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಅವರು ತಮ್ಮ ಪಕ್ಷದ ಸಂಸದರಿಗೆ ಕರೆ ನೀಡಿದ್ದಾರೆ. ಶುಕ್ರವಾರದಂದು ನಾಯ್ಡು ಅಮರಾವತಿಯಲ್ಲಿ ಟಿಡಿಪಿ ಸಂಸದರು ಮತ್ತು ಶಾಸಕರು ಭಾಗಿಯಾಗಿದ್ದ ಸೈಕಲ್ ರ್ಯಾಲಿಯ ನೇತೃತ್ವವಹಿಸಿದ್ದರು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ಸೇರಿದಂತೆ ರಾಜ್ಯಸಭೆಯಲ್ಲಿ ನೀಡಿರುವ ಭರವಸೆಯನ್ನು ಈಡೇರಿಸದ ಹೊರತು ನಾವು ನಮ್ಮ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಈ ವೇಳೆ ತಿಳಿಸಿದ್ದಾರೆ. ವೈಎಸ್‌ಆರ್ ಕಾಂಗ್ರೆಸ್ ಕೇಂದ್ರದ ಜೊತೆ ಶಾಮೀಲಾಗಿದೆ. ಹಾಗಾಗಿ ಅದು ನಮ್ಮ ಜೊತೆ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿಲ್ಲ. ಹಿಂದಿನ ಕಾಲದಲ್ಲಿ ನಮ್ಮವರೇ ಕೆಲವರು ಬ್ರಿಟಿಷರ ಜೊತೆ ಶಾಮೀಲಾಗುತ್ತಿದ್ದರು. ಈಗ ರಾಜ್ಯದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಕೇಂದ್ರ ಸರಕಾರದ ಜೊತೆ ಶಾಮೀಲಾಗಿದೆ ಎಂದು ನಾಯ್ಡು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News