ಹಾಸನ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯಿಂದ ಸರ್ವಾಧಿಕಾರಿ ಧೋರಣೆ; ಜಿ.ಪಂ ಅಧ್ಯಕ್ಷೆ ಶ್ವೇತಾ ದೇವರಾಜು ಆರೋಪ

Update: 2018-04-07 13:17 GMT

ಹಾಸನ,ಎ.07: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಸರ್ವಾಧಿಕಾರಿಯಂತೆ ನಡೆದುಕೊಳ್ಳುತ್ತಿದ್ದು, ಇವರನ್ನು ಕೂಡಲೇ ಬದಲಾಯಿಸಿ, ಹಾಸನಕ್ಕೆ ಬೇರೆ ಚುನಾವಣಾಧಿಕಾರಿಯನ್ನು ನೇಮಕ ಮಾಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜು ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕರ್ನಾಟಕ ರಾಜ್ಯ ವಿದಾನಸಭಾ ಚುನಾವಣೆ ನಡೆಯುತ್ತಿದ್ದು, ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲಾಧಿಕಾರಿ ವರ್ಗಾವಣೆ ಕುರಿತು ಕಳೆದ 3 ತಿಂಗಳಿನಿಂದ ಚರ್ಚೆಗೆ ಒಳಪಟ್ಟಿದೆ. ಹಾಸನ ಜಿಲ್ಲಾಧಿಕಾರಿ ಸೇರಿ 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ಇಲ್ಲಿನ ಡಿಸಿ ಅವರು ಸರಕಾರದ ಆದೇಶಕ್ಕೆ ವಿರುದ್ಧವಾಗಿ ಸಿಎಟಿ ಮತ್ತು ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ದೂರಿದರು.

ವಿರೋಧ ಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಇದೇ ವಿಚಾರವಾಗಿ ಬಹಿರಂಗವಾಗಿ ಸರಕಾರದ ವಿರುದ್ಧ ಧರಣಿಗಳನ್ನು ಮಾಡಿ ಜಿಲ್ಲಾಧಿಕಾರಿ ಪರವಾಗಿ ಪ್ರಬಲವಾದ ವಕಾಲತು ವಹಿಸಿದೆ. ಜಿಲ್ಲಾಧಿಕಾರಿಗಳು ಮಾಡುತ್ತಿರುವ ತಾರತಮ್ಯಗಳಿಂದ ನ್ಯಾಯಸಮ್ಮತವಾಗಿ ಚುನಾವಣೆ ಮಾಡಲು ಸಾಧ್ಯವಿಲ್ಲ. ಜೆಡಿಎಸ್ ಕಚೇರಿಯು ರಾಜಕಾಲುವೆ ಮೇಲೆ ನಿರ್ಮಾಣಗೊಂಡಿದ್ದು, ಅದರ ಬಗ್ಗೆ ಇದುವರೆಗೂ ಯಾವ ಕ್ರಮಕೈಗೊಂಡಿರುವುದಿಲ್ಲ. ಜಿಲ್ಲೆಗೆ ರಾಜ್ಯಪಾಲರು ಭೇಟಿ ನೀಡದ ವೇಳೆ ಕಾಂಗ್ರೆಸ್ ಎಂಎಲ್‍ಸಿ ಅವರನ್ನು ವೇದಿಕೆಯಿಂದ ಕೆಳಗೆ ಕೂರಿಸಿ ನಂತರ ರೋಹಿಣಿ ಅವರು ವೇದಿಕೆ ಮೇಲೆ ಕುಳಿತು ಕಾಂಗ್ರೆಸ್ ಪ್ರತಿನಿಧಿಗಳನ್ನು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

ಜಿಲ್ಲಾಧಿಕಾರಿ ಅವರ ವರ್ಗಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹೆಚ್.ಡಿ. ದೇವೇಗೌಡ ಅವರು ಸರಕಾರವನ್ನು ಮತ್ತು ಜಿಲ್ಲಾ ಉಸ್ತುವಾರಿ ಸಚಿವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಬೇಲೂರು ತಾಲೂಕು ದನ್ನನಾಯಕನಹಳ್ಳಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಬಡ ಮುಗ್ದ ರೈತರನ್ನು ಒಕ್ಕಲೆಬ್ಬಿಸಿ ಜೈಲಿಗೆ ಹಾಕಿದ್ದಾರೆ ಮತ್ತು ಜಿಲ್ಲೆಯಲ್ಲಿ ರೋಹಿಣಿ ಸಿಂಧೂರಿ ಅವರು ಬಂದ ದಿನದಿಂದ ಯಾವುದೇ ದಲಿತ ಸಭೆ ನಡೆಸದೆ ದಲಿತ ವಿರೋಧಿಯಾಗಿ ತಾರತಮ್ಯ ಮಾಡಲಾಗುತ್ತಿದೆ ಎಂದ ಅವರು, ಮುಖ್ಯಮಂತ್ರಿ ಅವರು ಮಹಾಮಸ್ತಾಭಿಷೇಕ ವೇಳೆ ಜಿಲ್ಲೆಗೆ ಬಂದಾಗ ಮತ್ತು ಹೋಗುವಾಗ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇದ್ದು, ಸಿಎಂ ಅವರನ್ನು ಕಳುಹಿಸಿಕೊಡಲು ಹೋಗದೇ ಅಗೌರವ ಪ್ರದರ್ಶಿಸಿ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.

ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ನಮ್ಮ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಕಛೇರಿಯಲ್ಲಿ ಕಾರ್ಯನಿರ್ವಹಿಸದಿದ್ದರೂ ಅವರಿಗೆ ನೋಟಿಸ್ ಜಾರಿ ಮಾಡಿ ಕಚೇರಿಗೆ ಮತ್ತೊಂದು ಬೀಗ ಹಾಕಲಾಗಿದೆ. ಆದರೆ ನಗರಸಭೆ ಅಧ್ಯಕ್ಷರು ಅವರ ಕಚೇರಿಯನ್ನು ಬಳಸಿಕೊಂಡರೂ ಇದುವರೆಗೂ ಯಾವ ನೋಟಿಸ್ ನೀಡಿಲ್ಲ. ಹಾಗೆಯೇ ತಾಲೂಕು ಪಂಚಾಯತ್ ಕಚೇರಿಯ ಬಗ್ಗೆಯೂ ಗಮನ ನೀಡಿಲ್ಲ. ಹಾಸನ ಜಿಲ್ಲಾಧಿಕಾರಿ ದ್ವೇಷದ ಮನೋಭಾವದಲ್ಲಿ ಇರುವುದರಿಂದ ನಿಷ್ಪಕ್ಷಪಾತ ಚುನಾವಣೆ ನಡೆಯಲು ಸಾಧ್ಯವೇ ಎಂದ ಅವರು ಚುನಾವಣಾಧಿಕಾರಿಯನ್ನು ಕೂಡ ಕೂಡಲೇ ಬದಲಾಯಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದ್ದು, ಮತ್ತೊಂದು ದೂರನ್ನು ಕೊಡುವುದಾಗಿ ಎಚ್ಚರಿಸಿದರು.
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News