×
Ad

ಬಾಬಾಬುಡಾನ್‍ಗಿರಿ ವಿವಾದ: ಸುಪ್ರೀಂ ತೀರ್ಪಿಗೆ ಕೋಮುಸೌಹಾರ್ದ ವೇದಿಕೆ ಸ್ವಾಗತ

Update: 2018-04-07 19:14 IST

ಚಿಕ್ಕಮಗಳೂರು, ಎ.7: ಬಾಬಾಬುಡಾನ್ ಗಿರಿ ದರ್ಗಾದಲ್ಲಿನ ಧಾರ್ಮಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಉಚ್ಛನ್ಯಾಯಾಲಯ ನೀಡಿರುವ ತೀರ್ಪನ್ನು ಕೋಮು ಸೌಹಾರ್ದ ವೇದಿಕೆ ಸ್ವಾಗತಿಸಿದ್ದು, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು 1989ರಲ್ಲಿ ನೀಡಿದ್ದ ಆದೇಶದಂತೆ ಬಾಬಾ ಬುಡಾನ್‍ಗಿರಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳುವಂತೆ ಸರಕಾರಕ್ಕೆ ನ್ಯಾಯಾಲಯ ಆದೇಶ ನೀಡಿರುವುದು ದೇಶದ ಸಾಮರಸ್ಯ ಹಾಗೂ ಸೌಹಾರ್ದಕ್ಕೆ ಸಿಕ್ಕ ಜಯವಾಗಿದೆ. ಈ ನಿಟ್ಟಿನಲ್ಲಿ ಈ ತೀರ್ಪು ಐತಿಹಾಸಿಕ ತೀರ್ಪಾಗಿದೆ. ಈ ಸಂಬಂಧ ಜಿಲ್ಲಾಡಳಿತ ಕೂಡಲೇ 1989ರ ಹಿಂದಿನ ಧಾರ್ಮಿಕ ಆಚರಣೆಗಳಿಗೆ ಅವಕಾಶ ಒದಗಿಸಬೇಕೆಂದು ಒತ್ತಾಯಿಸಿದೆ.

ಈ ಸಂಬಂಧ ಕೋಮುಸೌಹಾರ್ದ ವೇದಿಕೆಯ ರಾಜ್ಯ ಕಾಯದರ್ಶಿ ಗೌಸ್‍ಮೊಹಿದ್ದೀನ್, ಸಂಚಾಲಕರಾದ ಮಹೇಶ್ ಹಾಗೂ ಹಸನಬ್ಬ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈ ವಿಚಾರವಾಗಿ ಕಳೆದ 35 ವರ್ಷಗಳಿಂದ ಕೆಲ ರಾಜಕೀಯ ಪಕ್ಷಗಳು, ಕೋಮುವಾದಿ ಸಂಘಟನೆಗಳು ವಿವಾದ ಹುಟ್ಟು ಹಾಕುತ್ತ ರಾಜಕೀಯ ಲಾಭ ಪಡೆಯುವಲ್ಲಿ ಯಶ ಕಂಡಿದ್ದವು. ಇದಕ್ಕಾಗಿ ಈ ಸಂಘಟನೆಗಳು ಕಾನೂನು ಹೋರಾಟ ಆರಂಭಿಸಿದ್ದರಿಂದ 2007ರಲ್ಲಿ ಉಚ್ಚ ನ್ಯಾಯಾಲಯವು ಬಾಬಾಬುಡಾನ್‍ಗಿರಿಯಲ್ಲಿ ಹಿಂದೂ ಅರ್ಚಕರ ಅಗತ್ಯವಿದ್ದಲ್ಲಿ ಜನ ಬಯಸಿದಲ್ಲಿ ನೇಮಿಸಬಹುದೆಂದು ಆದೇಶ ನೀಡಿತ್ತು. ಇದರ ವಿರುದ್ಧ ಸಮಾನ ಮನಸ್ಕರ ವೇದಿಕೆಯಾದ ಕೋಮುಸೌಹಾರ್ದ ವೇದಿಕೆ 2008ರಲ್ಲಿ ಕಾನೂನು ಹೋರಾಟ ಆರಂಭಿಸಿ ಈ ಆದೇಶಕ್ಕೆ ತಡೆಯಾಜ್ಞೆ ತರುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ 1989ಕ್ಕೂ ಹಿಂದಿನ ಆಚರಣೆಗಳ ಬಗ್ಗೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶ ಪಾಲನೆಗೆ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಈ ನಿಟ್ಟಿನಲ್ಲಿ 2015ರಲ್ಲಿ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಈ ಸಂಬಂಧ ಸ್ಪಷ್ಟ ವರದಿ ನೀಡಲು ಆದೇಶ ನೀಡಿತ್ತು. ಅದರಂತೆ ರಾಜ್ಯ ಸರಕಾರ ನ್ಯಾ.ನಾಗಮೋಹನ್‍ದಾಸ್ ಸಮಿತಿ ನೇಮಿಸಿತ್ತು. ಈ ಸಮಿತಿ ದಾಖಲೆಗಳನ್ನು ಪರಿಶೀಲಿಸಿ ಸೂಕ್ತ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿತ್ತು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ನಾಗಮೋಹನ್‍ದಾಸ್ ವರದಿಯನ್ನು ರಾಜ್ಯ ಸರಕಾರ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರಿಂದ ಶುಕ್ರವಾರ ನ್ಯಾಯಾಲಯ ಈ ವರದಿಯನ್ನು ಮಾನ್ಯಮಾಡಿದ್ದು, ಬಾಬಾಬುಡಾನ್ ಗಿರಿ ದರ್ಗಾದಲ್ಲಿ ಶಾಖಾದ್ರಿ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ನಡೆಯಬೇಕು. ಶಾಖಾದ್ರಿ ನೇಮಿಸಿದ ಮುಜಾವರ್ ಅಲ್ಲಿ ಧಾರ್ಮಿಕ ಆಚರಣೆಗಳನ್ನು ಮಾಡಬೇಕೆಂದು ತೀರ್ಪು ನೀಡಿದೆ ಎಂದು ತಿಳಿಸಿರುವ ಅವರು, ಈ ವಿವಾದವನ್ನು ಕಳೆದ 35 ವರ್ಷಗಳಿಂದ ಬಿಜೆಪಿ ಮತ್ತು ಸಂಘಪರಿವಾರ ರಾಜಕೀಯ ಲಾಭಕ್ಕೆ ಬಳಸಿಕೊಂಡಿದೆ. ಅಲ್ಲದೇ ಜಿಲ್ಲೆಯಲ್ಲಿನ ಸೌಹಾರ್ದ ವಾತಾವರಣಕ್ಕೆ ಭಂಗ ತರುವ ಕೆಲಸ ಮಾಡಿವೆ. ಇಂತಹ ಸಂಘಟನೆಗಳಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಎಚ್ಚರಿಕೆಯ ಕರೆಗಂಟೆಯಾಗಿದ್ದು, ತೀರ್ಪಿನಿಂದ ವಿವಾದಕ್ಕೆ ತೆರೆ ಎಳೆದಂತಾಗಿದೆ. ತೀರ್ಪಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೂಡಲೇ ಬಾಬಾಬುಡಾನ್ ಗಿರಿ ದರ್ಗಾದಲ್ಲಿ 1989ರ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಆದೇಶದಂತೆ ಧಾರ್ಮಿಕ ಆಚರಣೆಗಳನ್ನು ಶಾಖಾದ್ರಿ ನೇತೃತ್ವದಲ್ಲಿ ನಡೆಯಲು ಅವಕಾಶ ಕಲ್ಪಿಸಬೇಕು. ಗಿರಿಯಲ್ಲಿರುವ ಗೋರಿಗಳಿಗೆ ಹಸಿರು ಹೊದಿಕೆ ಹೊದಿಸಬೇಕು ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಾಕಲಾಗಿರುವ ದತ್ತಪೀಠ ಎಂದು ಹೆಸರಿರುವ ನಾಮ ಫಲಕವನ್ನು ಬದಲಾಯಿಸಿ ಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂದು ನಾಮಫಲಕ ಹಾಕಬೇಕೆಂದು ಕೋಸೌವೇ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News