ಬಾಬಾಬುಡಾನ್ ಗಿರಿ ವಿವಾದ: ಸುಪ್ರೀಂ ತೀರ್ಪಿಗೆ ಎಸ್‍ಡಿಪಿಐ ಸ್ವಾಗತ
ಚಿಕ್ಕಮಗಳೂರು, ಎ.7: ಬಾಬಾಬುಡನ್ ಗಿರಿ ವಿವಾದದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿ ನೀಡಿದ ವರದಿಯನ್ನು ಅನುಮೋದಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಎಸ್.ಡಿ.ಪಿ.ಐ ಸಮಿತಿ ಸ್ವಾಗತಿಸುತ್ತದೆ ಎಂದು ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ಅಝ್ಮತ್ ಪಾಷಾ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಹಿಂದೆ ಶಾಖಾದ್ರಿ ನೇತೃತ್ವದಲ್ಲಿ ಬಾಬಾಬುಡನ್‍ಗಿರಿ ದರ್ಗಾದಲ್ಲಿ ಉರೂಸ್ ಇನ್ನಿತರ ಧಾರ್ಮಿಕ ವಿಧಿಗಳು ನಡೆಯುತ್ತಿತ್ತು. ಅಲ್ಲಿ ಇದರ ಹೊರತಾಗಿ ಯಾವುದೇ ರೀತಿಯ ಹೋಮಹವನ ನಡೆಯುತ್ತಿರಲಿಲ್ಲ ಎಂದು ನಾಗಮೋಹನ್‍ದಾಸ್ ವರದಿ ನೀಡಿದ್ದಾರೆ. ಬಿಜೆಪಿ ಹಾಗೂ ಸಂಘ ಪರಿವಾರ ದತ್ತಪೀಠವೇ ಬೇರೆ, ಬಾಬಾಬುಡಾನ್ ದರ್ಗಾವೇ ಬೇರೆ ಎಂಬ ಹೊಸ ವಾದವನ್ನು ಹುಟ್ಟು ಹಾಕಿ, ಅದನ್ನೇ ಸತ್ಯ ಎಂಬಂತೆ ಎಲ್ಲೆಡೆ ಮಂಡಿಸುತ್ತ ಬಂದಿದೆ.
ಕೆಲ ದಿನಗಳ ಹಿಂದೆ ಪ್ರಮೋದ್ ಮುತಾಲಿಕ್ ಹೇಳಿರುವಂತೆ ಬಾಬಾಬುಡಾನ್ ಗಿರಿ, ದತ್ತ ಪೀಠದ ಹೆಸರಿನಲ್ಲಿ ಇಲ್ಲಿನ ಶಾಸಕ ಸಿ.ಟಿ.ರವಿ ಕೋಟ್ಯಾದೀಶರಾಗಿದ್ದಾರೆ. ಇದು ಇಡೀ ಜಿಲ್ಲೆಯ ಜನರಿಗೆ ತಿಳಿದ ವಿಷಯವಾಗಿದೆ. ಬಾಬರಿ ಮಸೀದಿಯನ್ನು ಕೆಡವಿ ರಾಜಕೀಯ ಮಾಡಿ, ಭಾವನ್ಮಾತಕ ವಿಷಯವನ್ನು ಹಿಡಿದು ಕೋಮುದ್ರುವೀಕರಣದಿಂದ ಚುನಾವಣಾ ಲಾಭ ನಡೆಯುವುದು ಬಿಜೆಪಿ ಹಾಗೂ ಆರೆಸ್ಸೆಸ್‍ನ ತಂತ್ರವಾಗಿದೆ. ಇದನ್ನು ದೇಶದ ಜನರು ಅರಿತಿದ್ದು, ಇವರಿಗೆ ಮುಂಬರುವ ಚುನಾವಣೆಗಳಲ್ಲಿ ಮತದಾರರು ಸರಿಯಾದ ಪಾಠವನ್ನು ಕಲಿಸಲಿದ್ದಾರೆ. ಬಿಜೆಪಿ ಹಾಗೂ ಸಂಘಪರಿವಾರದವರಿಗೆ ನಿಜವಾಗಿಯೂ ಜಿಲ್ಲೆಯ ಹಿಂದೂ-ಮುಸ್ಲಿಮರ ಸೌಹಾರ್ದ ಸಾಮಾರಸ್ಯ ಬೇಕಿದ್ದರೆ ಇನ್ನಾದರೂ ಈ ಬಗ್ಗೆ ವಿವಾದವನ್ನು ಹುಟ್ಟು ಹಾಕುವುದನ್ನು ಬಿಟ್ಟು ಬಾಬಾಬುಡಾನ್‍ಗಿರಿಯ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಅವರು ಹೇಳಿಕೆಯಲ್ಲಿ ಮನವಿಮಾಡಿದ್ದಾರೆ.