ಶಿವಮೊಗ್ಗ: ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ
ಶಿವಮೊಗ್ಗ, ಎ. 7: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವಿಕಲ ಚೇತನರು ಗೌರವಯುತವಾಗಿ ಮತಗಟ್ಟೆಗಳಿಗೆ ಬಂದು ಮತವನ್ನು ಚಲಾಯಿಸಲು ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಲೋಕೇಶ್ ಅವರು ಹೇಳಿದರು.
ಅವರು ಶನಿವಾರ ನಗರದ ಅಂಬೇಡ್ಕರ್ ಭವನದ ಆವರಣದಲ್ಲಿ ವಿಕಲಚೇತನರಿಂದ ಮತದಾರರ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಒಟ್ಟು 12714 ವಿಕಲಚೇತನ ಮತದಾರರನ್ನು ಗುರುತಿಸಲಾಗಿದೆ. ಅವರ ಅಗತ್ಯಕ್ಕೆ ಅನುಸಾರವಾಗಿ ಆಯಾ ಮತಗಟ್ಟೆಗಳಲ್ಲಿ ಗಾಲಿಕುರ್ಚಿ, ಬ್ರೈಲ್ ಮಾರ್ಗಸೂಚಿಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ವಿಕಲಚೇತನರು ಮತಗಟ್ಟೆಗೆ ಬಂದು ಮತ ಚಲಾಯಿಸಬೇಕು. ಪ್ರತಿಯೊಬ್ಬರು ಗೌರವಯುತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಖಾತ್ರಿಪಡಿಸಬೇಕಾಗಿದೆ ಎಂದರು.
ಚುನಾವಣಾ ಆಯೋಗವು ಈ ಬಾರಿಯ ಚುನಾವಣೆಯನ್ನು 'ಸರ್ವರನ್ನೂ ಒಳಗೊಂಡ ಚುನಾವಣೆ’ ಎಂದು ಘೋಷವಾಕ್ಯದೊಂದಿಗೆ ನಡೆಸುತ್ತಿದ್ದು, ಇದನ್ನು ಅರ್ಥಪೂರ್ಣಗೊಳಿಸಬೇಕಾಗಿದೆ. ವಿಕಲಚೇತನ ಮತದಾರರಿಗೆ ಕಲ್ಪಿಸಲಾಗಿರುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಶೇ.100ರಷ್ಟು ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಅಂಬೇಡ್ಕರ್ ಭವನದಿಂದ ಹೊರಟ ಜಾಥಾ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಿಲ್ಲಾ ಪಂಚಾಯತ್ ಆವರಣದಲ್ಲಿ ಸಮಾಪನಗೊಂಡಿತು. ಮತದಾರರ ಜಾಗೃತಿ ಫಲಕಗಳನ್ನು ಹೊತ್ತು ವಿಕಲಚೇತನರು ಜಾಥಾದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಕಲಾವಿದ ಗಣೇಶ್ ಹಾಗೂ ತಂಡದ ಕಲಾವಿದರು ಮತದಾರರ ಜಾಗೃತಿ ಕುರಿತಾದ ಬೀದಿ ನಾಟಕವನ್ನು ಪ್ರದರ್ಶಿಸಿದರು. ಚಿತ್ರಕಲಾವಿದ ಏಕನಾಥ ಬೊಂಗಾಳೆ ಅವರು ಮತದಾರರ ಜಾಗೃತಿ ಕುರಿತಾಗಿ ರಚಿಸಿದ ವ್ಯಂಗ್ಯಚಿತ್ರಗಳನ್ನು ಜಿಲ್ಲಾಧಿಕಾರಿ ಅವರು ಈ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಶೇಷಪ್ಪ, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಚಾಡೊ ಮತ್ತಿತರರು ಉಪಸ್ಥಿತರಿದ್ದರು.