×
Ad

ನಾರ್ವೆ ಸೋಮಶೇಖರ್ ರ ಏಳಿಗೆ ಸಹಿಸದವರಿಂದ ಅಪಪ್ರಚಾರ: ಎಪಿಎಂಸಿ ಸದಸ್ಯ ಕ್ಯಾನಹಳ್ಳಿ ಸುರೇಶ್

Update: 2018-04-07 22:39 IST

ಸಕಲೇಶಪುರ,ಎ.07: ಕ್ಷೇತ್ರದ ಬಿಜೆಪಿ ಸಂಭವನಿಯ ಅಭ್ಯರ್ಥಿ ನಾರ್ವೆ ಸೋಮಶೇಖರ್ ವಿರುದ್ಧ ಯಾವುದಾದರು ಪ್ರಕರಣಗಳಿದ್ದರೆ ಸೋಮಶೇಖರ್ ಸೇರಿದಂತೆ ನಾವೆಲ್ಲಾ ರಾಜಕೀಯದಿಂದ ನಿವೃತ್ತಿ ಹೊಂದುತ್ತೇವೆ ಎಂದು ಎಪಿಎಂಸಿ ಸದಸ್ಯ ಕ್ಯಾನಹಳ್ಳಿ ಸುರೇಶ್ ಹೇಳಿದರು.

ಪಟ್ಟಣದಲ್ಲಿ ಶನಿವಾರ ಪತ್ರಿಕಾಗೋಷ್ಟಿ ನಡೆಸಿದ ಅವರು, ಸೋಮಶೇಖರ್ ವಿರುದ್ದ ದಾಖಲಾಗಿದ್ದ ಎಲ್ಲಾ ಕೇಸುಗಳು ಆಧಾರ ರಹಿತ ಎಂದು ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದ್ದು, ಪ್ರಕರಣಗಳೆಲ್ಲವೂ ವಜಾಗೊಂಡಿವೆ. ಆದರೂ ಸಹ ವಿರೋಧ ಪಕ್ಷದವರು ಹಾಗೂ ಸೋಮಶೇಖರ್ ಏಳಿಗೆ ಸಹಿಸದವರು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸಲು ಅವರ ವಿರುದ್ದ ಪಿತೂರಿ ನಡೆಸುತ್ತಿದ್ದಾರೆ. ನಾರ್ವೆ ಸೋಮಶೇಖರ್ ವಿರುದ್ದ ಕೇಸುಗಳಿರುವುದು ಸಾಬೀತಾದರೆ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಅಭ್ಯರ್ಥಿಯಾಗಲಿರುವ ಸೋಮಶೇಖರ್ ಹಣ, ಹೆಂಡ ಹಂಚಿ ಆಮಿಷಗಳನ್ನು ಒಡ್ಡುತ್ತಿದ್ದಾರೆ ಎಂದು ಕಳೆದೆರೆಡು ದಿನಗಳ ಹಿಂದೆ ಶಾಸಕ ಎಚ್. ಕೆ. ಕುಮಾರಸ್ವಾಮಿ ಹಾಗೂ ಇತರೆ ಜೆಡಿಎಸ್ ಮುಖಂಡರು ಆರೋಪಿಸಿರುವುದು ಸರಿಯಲ್ಲ. ಎಪಿಎಂಸಿ ಚುನಾವಣೆಯಲ್ಲಿ ಶಾಸಕರೇ ಹಣ ಕೊಟ್ಟು  ಸದಸ್ಯರೊಬ್ಬರನ್ನು ಖರೀದಿಸಿದಾಗ ಅವರ ನೈತಿಕತೆ ಎಲ್ಲಿತ್ತು? ಜಿ.ಪ ಚುನಾವಣೆಲ್ಲಿ ಶಾಸಕರು ತಮ್ಮ ಪತ್ನಿಯನ್ನೇ ಅಭ್ಯರ್ಥಿಯನ್ನಾಗಿ ಮಾಡಿದರು. ಏಕೆ ? ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳಿರಲಿಲ್ಲವೇ ಎಂದು  ಪ್ರಶ್ನಿಸಿದರು. ಸೋಮಶೇಖರವರವರ ಸೇವಾ ಮನೋಭಾವ ಹಾಗೂ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಬೇಕೆಂಬ ಹಂಬಲವನ್ನು ಜನ ಒಪ್ಪಿಕೊಳ್ಳಲಿದ್ದಾರೆ. ಈ ನಡುವೆ ಯಾರ ಪಿತೂರಿಯೂ ನಡೆಯದು ಎಂದರು.

ಹಿರಿಯ ಬಿಜೆಪಿ ಮುಖಂಡ ಬಾಳ್ಳು ಮಲ್ಲಿಕಾರ್ಜುನ್ ಮಾತನಾಡಿ, ಸೋಮಶೇಖರ್ ಅವರ ವಿರುದ್ದ ಯಾವುದಾದರೂ ಪ್ರಕರಣಗಳಿರುವುದು ಸಾಬೀತಾದರೆ ತಮ್ಮನ್ನು ಒಳಗೊಂಡಂತೆ ಅವರ ಹಿತೈಷಿಗಲೆಲ್ಲರೂ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಟ್ಟು ರಾಜಕಿಯ ನಿವೃತ್ತಿ ಪಡೆಯುವುದಾಗಿ ಹೇಳಿದರು. ಕ್ಷೇತ್ರದ ಪ್ರತಿಯೊಬ್ಬರ ಮನಸಲ್ಲಿ ನೆಲೆಸಿರುವ ನಾರ್ವೆ ಸೋಮಶೇಖರ್ ಈ ಚುನಾವಣೆಯಲ್ಲಿ ಕನಿಷ್ಟ 40 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿ ತಾವು ಅಂದುಕೊಂಡಿರುವ ಎಲ್ಲಾ ಅಭಿವೃದ್ದಿ ಕೆಲಸಗಳನ್ನು ಮಾಡಿ ಕ್ಷೇತ್ರದ ಜನರ ವಿಶ್ವಾಸ ಉಳಿಸಿಕೊಳ್ಳಲಿದ್ದಾರೆ. ಸೋಮಶೇಖರ್ ಅವರ ಹಣದ ಹಿಂದೆ ಹೋಗುವವರು ಯಾರೂ ಸಹ ಅವರ ಜೊತೆಯಲ್ಲಿಲ್ಲ. ಕ್ಷೇತ್ರದಲ್ಲಿ ಬದಲಾವಣೆ ತಂದು ರಾಜ್ಯಕ್ಕೆ ಮಾದರಿ ಮಾಡಬೇಕು ಎಂಬ ಉದ್ದೇಶಕ್ಕೆ ಪ್ರೋತ್ಸಾಹ ನೀಡಿ ಸೋಮಶೇಖರ್ ಅವರನ್ನು ಬೆಂಬಲಿಸುತ್ತಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ವಡೂರು ಶೇಖರ್, ಗೋಪಾಲ್ ಹಾಗೂ ಮೀಸೆ ಮಂಜಯ್ಯ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News