ಬಿ.ಪಿ ಮಂಜೇಗೌಡ ರಾಜೀನಾಮೆಗೆ ಮುಂದಾಗಿರುವುದು ಅನುಮಾನಕ್ಕೆ ಎಡೆಮಾಡಿದೆ: ಹೆಚ್.ಡಿ. ರೇವಣ್ಣ

Update: 2018-04-07 17:26 GMT

ಹಾಸನ,ಎ.07: ಹಲವಾರು ಪ್ರಕರಣಗಳು ಇದ್ದರೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಳೆನರಸೀಪುರ ಕ್ಷೇತ್ರದಲ್ಲಿ ಚುನಾವಣೆಗೆ ಬಿ.ಪಿ. ಮಂಜೇಗೌಡರನ್ನು ನಿಲ್ಲಿಸಲು ಮುಂದಾಗಿ ಅವರ ರಾಜೀನಾಮೆ ಪಡೆಯಲು ಅಧಿಕಾರಿಗಳ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಆರ್.ಟಿ.ಓ ಅಧಿಕಾರಿ ಬಾಗೂರು ಮಂಜೇಗೌಡ ಅವರ ರಾಜೀನಾಮೆಯನ್ನು ಕಾನೂನು ಬಾಹಿರವಾಗಿ ಅಂಗೀಕರಿಸುವಂತೆ ರಾಜ್ಯ ಮುಖ್ಯಕಾರ್ಯದರ್ಶಿಗಳು ಸಾರಿಗೆ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದಾರೆಂದು ಮಾಜಿ ಸಚಿವ ರೇವಣ್ಣ ಆರೋಪಿಸಿದರು. ಮೋಟಾರು ವಾಹನ ನಿರೀಕ್ಷಕರಾದ ಬಿ.ಪಿ. ಮಂಜೇಗೌಡ ಮೇಲೆ ಕ್ರಿಮಿನಲ್ ಪ್ರಕರಣ, ಅಕ್ರಮ ಆಸ್ತಿಗಳಿಕೆ ಮತ್ತು ಬಳ್ಳಾರಿ ಗಣಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಪ್ರಕರಣಗಳಿದ್ದು, ಇನ್ನೂ ವಿಚಾರಣೆ ಹಂತದಲ್ಲಿರುವಾಗಲೇ ರಾಜೀನಾಮೆ ಪಡೆಯಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ ಎಂದು ಹೇಳಿದರು.

ಇದಕ್ಕಾಗಿ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತು ಮುಖ್ಯಮಂತ್ರಿಗಳು ಸರ್ಕಾರದ ಕಾನೂನು ತಜ್ಞರ ಸಲಹೆ ಪಡೆದಿದ್ದು ಅವರು ರಾಜೀನಾಮೆ ಅಂಗೀಕರಿಸಲು ಆಗುವುದಿಲ್ಲ ಎಂದು ವರದಿ ನೀಡಿದ್ದಾರೆ. ಆದರೂ ಕೂಡ ಮುಖ್ಯಮಂತ್ರಿಗಳು ಅವರ ಮೇಲೆ ಒತ್ತಡ ಹಾಕಿ ಮತ್ತೊಂದು ವರದಿ ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಗಂಭೀರವಾಗಿ ದೂರಿದರು. ಸಿ.ಎಸ್ ರತ್ನಪ್ರಭಾ ಅವರನ್ನು ಸೇರಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು. ಮಂಜೇಗೌಡ ಕಳ್ಳ ಎಂದು ಸಾಬೀತಾಗಿದೆ ಎಂದು ಕಿಡಿಕಾರಿದ ಅವರು ರಾಜೀನಾಮೆ ಅಂಗೀಕಾರವಾಗದೆ ಇದ್ದರೂ ತಮ್ಮ ಕ್ಷೇತ್ರದಲ್ಲಿ ಮತದಾರರಿಗೆ ಬಾಡೂಟ ಹಾಕುತ್ತಿರುವ ಮಂಜೇಗೌಡ ವಿರುದ್ಧ ಈವರೆಗೆ ಯಾವುದೇ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಲ್ಲ. ಕೂಡಲೇ ಕ್ರಿಮಿನಲ್ ಕೇಸು ದಾಖಲಿಸಿ ಅರೆಸ್ಟ್ ಮಾಡುವಂತೆ ಆಗ್ರಹಿಸಿದರು. ಜಿಲ್ಲಾ ಚುನಾವಣಾಧಿಕಾರಿಗಳನ್ನು ಕಾಂಗ್ರೆಸ್‍ನವರು ಕೆಲಸ ಮಾಡಲು ಬಿಡುತ್ತಿಲ್ಲವೆಂದು ಜಿಲ್ಲಾಧಿಕಾರಿಗಳನ್ನು ಸಮರ್ಥಿಸಿಕೊಂಡ ರೇವಣ್ಣ ತಮ್ಮ ಕ್ಷೇತ್ರದ ತಹಶೀಲ್ದಾರ್ ಅವರನ್ನು ಸಹ ವರ್ಗಾವಣೆ ಮಾಡಲಾಗಿದೆ ಎಂದು ದೂರಿದರು. ಜಿಲ್ಲಾಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಂತವರು ಕಾಂಗ್ರೆಸ್‍ಗೆ ಬೇಕಾಗಿಲ್ಲವೆಂದು ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಶಾಕ ಹೆಚ್.ಎಸ್. ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಪಟೇಲ್ ಶಿವರಾಂ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News