×
Ad

ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚ ವೆಂಕಟ್ ಕಣಕ್ಕೆ

Update: 2018-04-08 17:30 IST

ಮಡಿಕೇರಿ,ಎ.8 :ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಪಕ್ಷೇತರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ನಟ ಹುಚ್ಚ ವೆಂಕಟ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಕಳಕಳಿಯ ಚಿತ್ರಗಳನ್ನು ನಿರ್ಮಿಸುತ್ತಾ ಜನರ ಸೇವೆಯನ್ನು ಮಾಡುತ್ತಿರುವ ನಾನು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚತವೆಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಮನೆಯಲ್ಲಿ ತಂದೆ ತಾಯಿಗೆ ಮಾಡಿದ ಸೇವೆಗಿಂತ ಹೆಚ್ಚಿನ ಸೇವೆಯನ್ನು ಸಮಾಜಕ್ಕಾಗಿ ಮಾಡಿದ್ದೇನೆ. ಇದೀಗ ರಾಜಕೀಯವಾಗಿ ಜನರ ಸೇವೆ ಮಾಡಲು ಮುಂದಾಗಿದ್ದೇನೆ. ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಹೇಳಿದರು. 

ನನ್ನ ತತ್ವ ಸಿದ್ಧಾಂತಗಳಿಗೆ ಒಪ್ಪಿಕೊಂಡು ರಾಜಕೀಯ ಪಕ್ಷಗಳು ಆಹ್ವಾನ ನೀಡಿದರೆ ಪಕ್ಷದ ಮೂಲಕ ಚುನಾವಣೆ ಎದುರಿಸುತ್ತೇನೆ. ಇಲ್ಲವಾದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಕಣಕ್ಕಿಳಿಯುತ್ತೇನೆ. ನಾನು ಯಾರಿಗೂ ಸೀರೆ, ಹೆಂಡ, ಹಣ ನೀಡಿ ಮತಯಾಚನೆ ಮಾಡುವುದಿಲ್ಲ. ಎಲ್ಲಿಯೂ ಚುನಾವಣಾ ಪ್ರಚಾರ ಮಾಡುವುದಿಲ್ಲ, ಜನರಿಗೆ ಕೈ ಮುಗಿಯುವುದಿಲ್ಲ, ಜನರೇ ನನಗೆ ಕೆಲಸ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು. 

ನನ್ನನ್ನು ಸೋಲಿಸಿದರೆ ನೀವು ನಿಮ್ಮನ್ನು ಮಾರಿಕೊಂಡಿದ್ದೀರ ಎಂದು ಅರ್ಥ ಎಂದ ಹುಚ್ಚ ವೆಂಕಟ್, ನನ್ನನ್ನು ಸೋಲಿಸಿದರೂ ನಾನು ಬೇಸರ ಪಡದೆ ಜನರ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿ ಇದ್ದು ಜನರ ಕೆಲಸ ಮಾಡಬೇಕೆಂದಿಲ್ಲ ಎಂದು ಹುಚ್ಚ ವೆಂಕಟ್ ಸ್ಪಷ್ಟಪಡಿಸಿದರು.

ಶಾಸಕನಾಗಿ ಮುಂದೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲಿದ್ದು, ನಂತರ ಪ್ರಧಾನಿ ಕೂಡ ಆಗಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಹುಚ್ಚ ವೆಂಕಟ್, ದೇಶವನ್ನು ಬದಲಾಯಿಸುತ್ತೇನೆ, ಭಾರತವನ್ನು ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ತರುತ್ತೇನೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News