ದಾಖಲೆ ಇಲ್ಲದೆ 5.50 ಲಕ್ಷ ರೂ. ಸಾಗಣೆ: ಕಾರು ಸಹಿತ ದಂಪತಿ ವಶಕ್ಕೆ
ಮೂಡಿಗೆರೆ, ಎ.8: ಯಾವುದೇ ದಾಖಲೆ, ರಶೀದಿಗಳಿಲ್ಲದೆ 5.50 ಲಕ್ಷ ರೂ. ಹಣವನ್ನು ಕೊಂಡೊಯ್ಯುತ್ತಿದ್ದ ಕಾರೊಂದು ಕಿರುಗುಂದ ಚೆಕ್‍ಪೋಸ್ಟ್ ನಲ್ಲಿ ರವಿವಾರ ತಪಾಸಣೆ ವೇಳೆ ಸಿಕ್ಕಿಬಿದ್ದಿದ್ದು, ಹಣವನ್ನು ತನಿಖಾ ತಂಡದವರು ವಶಕ್ಕೆ ಪಡೆದಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಯಮಾನುಸಾರ ದಾಖಲೆಗಳಿಲ್ಲದೆ 50 ಸಾವಿರ ಮೀರಿ ಹಣ ಸಾಗಿಸುವಂತಿಲ್ಲ. ಹೀಗಿದ್ದರೂ ಬೆಂಗಳೂರಿನಿಂದ ಮಂಗಳೂರಿಗೆ ಕಾರ್ ನಲ್ಲಿ ಹೋಗುತ್ತಿದ್ದ ದಂಪತಿ ಪ್ರಜ್ವಲ್ ಮತ್ತು ಸ್ವರೂಪರಾಣಿ ಎಂಬುವವರ ಬ್ಯಾಗ್‍ವೊಂದರಲ್ಲಿ 5.50 ಲಕ್ಷ ರೂ. ಹಣವನ್ನು ಸಾಗಣೆ ಮಾಡುತ್ತಿದ್ದಾಗ ಕಿರುಗುಂದ ಚೆಕ್‍ಪೋಸ್ಟ್ ನಲ್ಲಿ ತನಿಖಾ ತಂಡದವರು ಪತ್ತೆ ಹಚ್ಚಿದ್ದಾರೆ.
ಸೂಟ್‍ಕೇಸ್ ಮತ್ತು ಬ್ಯಾಗ್‍ಗಳು ತುಂಬಿದ್ದ ಕಾರ್ ನಲ್ಲಿ ಸಣ್ಣ ಚೀಲವೊಂದರಲ್ಲಿ ರೂ.2000 ಹಾಗೂ ರೂ.500 ಮುಖಬೆಲೆಯ ಒಟ್ಟು 5.50 ಲಕ್ಷ ಹಣವುಳ್ಳ ನೋಟಿನ ಕಂತೆಗಳು ಪತ್ತೆಯಾದವು. ತಕ್ಷಣ ವಿಡಿಯೋಗ್ರಾಫರ್ ಚಿತ್ರೀಕರಣ ಮಾಡುವುದರೊಂದಿಗೆ ಹಣದ ಚೀಲವನ್ನು ತನಿಖಾಧಿಕಾರಿಗಳು ವಶಕ್ಕೆ ಪಡೆದರು.
ಇಷ್ಟೊಂದು ಹಣ ಯಾವ ಉದ್ದೇಶಕ್ಕೆ ಕೊಂಡೊಯ್ಯುತ್ತಿದ್ದೀರಿ ಎಂದು ವಿಚಾರಿಸಿದಾಗ ತನ್ನ ತಾಯಿ ಗಿಫ್ಟ್ ಐಟಂ ತೆಗೆದುಕೊಳ್ಳಲು ಕೊಟ್ಟಿರುವ ಹಣವೆಂದು ಸ್ವರೂಪ್‍ರಾಣಿ ಹೇಳಿಕೆ ನೀಡಿದ್ದಾರೆ. ಆದರೆ ಬ್ಯಾಂಕ್‍ನಲ್ಲಿ ಡ್ರಾ ಮಾಡಿರುವುದಾಗಲೀ, ಎಟಿಎಂ ರಶೀದಿಯಾಗಲೀ ಇರಲಿಲ್ಲ. ಹಣ ಸಾಗಣೆಗೆ ಯಾವುದೇ ದಾಖಲೆಗಳಿಲ್ಲದ ಕಾರಣ ತನಿಖಾ ತಂಡದವರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಸೂಕ್ತ ದಾಖಲೆಗಳನ್ನು ಪೊಲೀಸ್ ಇಲಾಖೆಗೆ ಒಪ್ಪಿಸಿದ ನಂತರ ಸಂಬಂಧಿಸಿದವರು ಹಣವನ್ನು ಹಿಂಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೃತ್ತ ನಿರೀಕ್ಷಕ ಜಗದೀಶ್, ಗೋಣಿಬೀಡು ಪಿಎಸ್‍ಐ ರಘುನಾಥ್, ಹೆಡ್ ಕಾನ್ಸ್ ಟೇಬಲ್, ವೀಡಿಯೋಗ್ರಾಫರ್ ರಫೀಕ್, ವಾಸುದೇವ್, ಸಿಬ್ಬಂದಿಗಳಾದ ಪೂರ್ಣೇಶ್, ಪ್ರಶಾಂತ್, ಸಚಿನ್, ಮಂಜುನಾಥ್, ಇದ್ದರು.