×
Ad

ಮುಖ್ಯಮಂತ್ರಿ ಸಿದ್ದರಾಮಯ್ಯ ‘ಪೆಗ್’ ಹಾಕಿದವರಂತೆ ಮಾತನಾಡುತ್ತಾರೆ: ಕುಮಾರಸ್ವಾಮಿ

Update: 2018-04-08 18:43 IST

ವಿಜಯಪುರ, ಎ. 8: ಮುಖ್ಯಮಂತ್ರಿ ಸಿದ್ದರಾಮಯ್ಯ ಬಾರ್‌ನಲ್ಲಿ ಕುಳಿತು ಎರಡು ಪೆಗ್ ಹಾಕಿದವರಂತೆ ಮಾತನಾಡುತ್ತಿದ್ದಾರೆ. ಪದೇ ಪದೇ ಅವರಪ್ಪ ಆಣೆ ಕುಮಾರಸ್ವಾಮಿ ಗೆಲ್ಲುವುದಿಲ್ಲ ಎಂದು ಆಣೆ ಮಾಡುವುದೇಕೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾಷೆ ನೋಡಿದರೆ ಮದ್ಯ ಸೇವಿಸಿದವರಂತೆ ಕಾಣುತ್ತದೆ. ಹೀಗಾಗಿ ಸಿಎಂ ಮೊದಲು ತನ್ನ ಸ್ಥಾನದ ಘನತೆ ಅರಿತು ಮಾತನಾಡಬೇಕು ಎಂದು ಸಲಹೆ ಮಾಡಿದರು.

ನನ್ನ ಮನೆ ಬಾಗಿಲು ತೆರೆದಿದೆ: ನನ್ನ ಮನೆಯ ಬಾಗಿಲು ಇಪ್ಪತ್ತ್ನಾಲ್ಕು ಗಂಟೆಯೂ ತೆಗೆದಿರುತ್ತದೆ. ನನ್ನ ಮೇಲೆ ಆದಾಯ ತೆರಿಗೆ(ಐಟಿ) ಹಾಗೂ ಜಾರಿ ನಿರ್ದೇಶನಾಯಲ(ಇಡಿ) ದಾಳಿ ಮಾಡಬಹುದು. ನಾನು ಎಲ್ಲವನ್ನು ಎದುರಿಸಲು ಸಿದ್ಧ. ನಾನು ಯಾವುದೇ ಒಂದು ಅಕ್ರಮ ಮಾಡಿಲ್ಲ. ಹೀಗಾಗಿ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವೇ ನನಗಿಲ್ಲ ಎಂದ ಅವರು, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ನಿವಾಸದ ಮೇಲೆ ಐಟಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಬಗ್ಗೆ ಎಚ್‌ಡಿಕೆ ಪ್ರತಿಕ್ರಿಯೆ ನೀಡಿದರು.

ಒಂದೇ ಕ್ಷೇತ್ರದಲ್ಲಿ ಅಭ್ಯರ್ಥಿ ಸ್ಪರ್ಧೆ ವಿಚಾರದಲ್ಲಿ ಹೊಸದಾಗಿ ಚರ್ಚೆ ಆರಂಭ ಆಗಿದೆ. ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಅವಕಾಶ ಕಾನೂನಿನಲ್ಲಿದೆ. ಆ ಕಾನೂನು ಬದಲಾವಣೆ ಮಾಡಿ ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಎಂಬ ಬಗ್ಗೆ ತೀರ್ಪು ಬಂದರೆ ಸ್ವಾಗತಿಸುತ್ತೇನೆ ಎಂದು ಕುಮಾರಸ್ವಾಮಿ ಸ್ಪಷ್ಟಣೆ ನೀಡಿದರು.

ಮಠಾಧೀಶರ ಹೇಳಿಕೆ ಸಲ್ಲ: ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಬೇಕೆಂಬ ಮಾತೆ ಮಹಾದೇವಿ ಹೇಳಿಕೆ ಅವರ ವೈಯಕ್ತಿಕ. ಯಾವುದೇ ಮಠಾಧೀಶರು ಆ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಸ್ವಾರ್ಥಕ್ಕಾಗಿ ಹೋರಾಟವಲ್ಲ ಎಂದು ಮೇಲ್ಮನೆ ಸದಸ್ಯ ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News