ವರಿಷ್ಠರು ತೀರ್ಮಾನಿಸಿದರೆ ಮಾತ್ರ ವರುಣಾದಿಂದ ಸ್ಪರ್ಧೆ: ಬಿ.ವೈ.ವಿಜಯೇಂದ್ರ

Update: 2018-04-08 14:23 GMT

ಮೈಸೂರು,ಎ.8: ಪಕ್ಷದ ವರಿಷ್ಠರು ತೀರ್ಮಾನಿಸಿದರೆ ಮಾತ್ರ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಹೇಳಿದರು.

ನಿವೃತ್ತ ಪೊಲೀಸ್ ಆಧಿಕಾರಿ ರೇವಣ್ಣ ಸಿದ್ದಯ್ಯ ಅವರನ್ನು ರವಿವಾರ ಅವರ ನಿವಾಸದಲ್ಲಿ ಭೇಟಿ ಮಾಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಹಿರಿಯರು ಅವರ ಆಶೀರ್ವಾದ ಪಡೆಯಲು ಬಂದಿದ್ದೆ. ಅವರು ಎರಡು ಬಾರಿ ಬಿಜೆಪಿಯಿಂದ ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಹಾಗಾಗಿ ಅವರ ಆಶೀರ್ವಾದದ ಜತೆಗೆ ಕೆಲವು ಸಲಹೆ ಪಡೆಯಲು ಬಂದಿದ್ದೆ.  ಆದರೂ ನಾನೊಬ್ಬ ಪಕ್ಷದ ಕಾರ್ಯಕರ್ತನಾಗಿ ಬಿಜೆಪಿಗಾಗಿ ಕೆಲಸ ಮಾಡುತ್ತೇನೆ. ಚುನಾವಣೆ ಮುಗಿಯುವವರೆಗೂ ಮೈಸೂರು, ಚಾಮರಾಜನಗರದಲ್ಲಿ ಇರುತ್ತೇನೆ. ಕೇವಲ ಇಂದು ನಾಳೆಯಷ್ಟೇ ಮಾತ್ರ ಕ್ಷೇತ್ರದಲ್ಲಿ ಪ್ರಚಾರ ಮಾಡೋಲ್ಲ. ಬದಲಾಗಿ ಇಲ್ಲೆ ಇರುತ್ತೇನೆ ಎಂದು ತಿಳಿಸಿದರು.

ಇವತ್ತು ವರುಣ ಕ್ಷೇತ್ರದ ಪಕ್ಷದ ಕಾರ್ಯಕರ್ತರ ಜತೆ ಸಮಾಲೋಚನೆ ಮಾಡುತ್ತೇನೆ. ನಾನು ಅಭ್ಯರ್ಥಿಯಾಗಿರೋದಕ್ಕಿಂತ ಕ್ಷೇತ್ರದ ಜನ ನನಗೆ ಬೆಂಬಲ ನೀಡಿದ್ದಾರೆ. ನಮ್ಮ ಪಕ್ಷ ಈ ಭಾಗದಲ್ಲಿ ಅತ್ಯಂತ ಪ್ರಬಲವಾಗಿದೆ ಪಕ್ಷವನ್ನು ಗೆಲ್ಲಿಸಲು ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ನಿವೃತ್ತ ಪೊಲೀಸ್ ಅಧಿಕಾರಿ ರೇವಣ್ಣ ಸಿದ್ದಯ್ಯರನ್ನು ಭೇಟಿಯಾಗಿ ಗೌಪ್ಯವಾಗಿ ರಾಜಕೀಯ ಚರ್ಚೆ ನಡೆಸಿದರು. ರೇವಣ್ಣ ಸಿದ್ದಯ್ಯ ಚಾಮುಂಡೇಶ್ವರಿ ಮತ್ತು ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಸ್ಪರ್ಧಿಸಿ ಸಿದ್ದರಾಮಯ್ಯ ವಿರುದ್ಧ ಸೋತು ಕಾಂಗ್ರೆಸ್ ಸೇರಿಕೊಂಡಿದ್ದರು. ಪ್ರಸ್ತುತ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳದೆ ತಟಸ್ಥರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News