​ಹಿರಿಯ ರಂಗಕರ್ಮಿ ಟಿ.ಎಸ್.ರಂಗಾ ವಿಧಿವಶ

Update: 2018-04-08 14:36 GMT

ಬೆಂಗಳೂರು, ಎ.8: ಕನ್ನಡದ ಹಿರಿಯ ನಿರ್ದೇಶಕ, ರಂಗಕರ್ಮಿ ಟಿ.ಎಸ್.ರಂಗಾ (69) ಅವರು ರವಿವಾರ ಬೆಂಗಳೂರು ನಗರದ ಎನ್.ಆರ್.ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಹಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಂಗಾ ಅವರು ರವಿವಾರ ಬೆಳಿಗ್ಗೆ ನಿಧನರಾಗಿದ್ದು, ಪತ್ನಿ ಅಶ್ವಿನಿ, ಮಗಳು ತನ್ವಿತಾ, ಅಳಿಯ ಹಾಗು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ರಂಗಭೂಮಿಯ ಮೂಲಕ ರಂಗಾ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ಬಿ.ವಿ.ಕಾರಂತ್ ಗರಡಿಯಲ್ಲಿ ಪಳಗಿದ್ದ ಇವರು, ಹಯವದನ, ಸತ್ತವರ ನೆರಳು ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಪ್ರಯೋಗ ಎಂಬ ತಮ್ಮದೇ ತಂಡ ಕಟ್ಟಿಕೊಂಡು ಹಲವು ನಾಟಕಗಳನ್ನೂ ಮಾಡಿದ್ದಾರೆ.

ರಂಗಭೂಮಿ ಜೊತೆಗೆ ಸಿನಿಮಾ ರಂಗದ ನಂಟೂ ಹೊಂದಿದ್ದ ಇವರು, ಗೀಜಗನ ಗೂಡು ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಪ್ರವೇಶ ಮಾಡಿದರು. ಇದು ಇವರ ಚೊಚ್ಚಲು ನಿರ್ದೇಶನದ ಸಿನಿಮಾ. ಈ ಸಿನಿಮಾ ಭಾರತೀಯ ಪನೋರಮಾ ಚಿತ್ರೊತ್ಸವದಲ್ಲಿ ಪ್ರದರ್ಶನ ಕಂಡ ಮೊದಲ ಚಿತ್ರ. ಉತ್ತರ ಕರ್ನಾಟಕದ ಬಗ್ಗೆ ಅಪಾರ ಒಲವು ಹೊಂದಿದ್ದ ಇವರು, ಸಾವಿತ್ರಿ ಚಿತ್ರದ ಮೂಲಕ ಅಲ್ಲಿನ ಜನರ ಸ್ಥಿತಿಗತಿ ಹಿಡಿದಿಟ್ಟಿದ್ದರು.

ಕನ್ನಡದಲ್ಲಿ ಮಾತ್ರವಲ್ಲ, ಬಾಲಿವುಡ್‌ನಲ್ಲೂ ಒಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗಿಧ್ (ರಣಹದ್ದುಗಳು) ಹೆಸರಿನಲ್ಲಿ ಮೂಡಿ ಬಂದ ಚಿತ್ರದಲ್ಲಿ ಓಂ ಪುರಿ, ನಾನಾ ಪಾಟೇಕರ್, ಸ್ಮಿತಾ ಸೇರಿದಂತೆ ಖ್ಯಾತ ಕಲಾವಿದರು ನಟಿಸಿದ್ದಾರೆ. ಟಿ.ಎಸ್.ನಾಗಾಭರಣ ನಿರ್ದೇಶನದ, 1978ರಲ್ಲಿ ತೆರೆಕಂಡ ಗ್ರಹಣ ಸಿನಿಮಾದ ಚಿತ್ರಕಥೆಗಾಗಿ ರಂಗಾ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಅಲ್ಲದೇ, ಹಲವು ಸಾಕ್ಷ ಚಿತ್ರಗಳ ನಿರ್ಮಾಣದ ಜತೆಗೆ ನಿರ್ದೇಶನ ಕೂಡ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಹಿರಿಯ ನಟ ಸುಂದರ್‌ರಾಜ್, ನಿರ್ದೇಶಕ ಟಿ.ಎಸ್.ನಾಗಾಭರಣ ಸೇರಿದಂತೆ ಸಿನಿಮಾ ರಂಗದಲ್ಲಿ ಹಲವು ಗಣ್ಯರು ಅಂತಿಮ ದರ್ಶನ ಪಡೆದರು. ರವಿವಾರ ಸಂಜೆ ಮೃತರ ಅಂತ್ಯಕ್ರಿಯೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News