ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋದ ನವ ವಿವಾಹಿತ ದಂಪತಿ ಸೇರಿ ನಾಲ್ವರು ಮೃತ್ಯು

Update: 2018-04-08 14:56 GMT
ಸಾಂದರ್ಭಿಕ ಚಿತ್ರ

ರಾಮನಗರ, ಎ. 8: ಕೆರೆಯಲ್ಲಿ ಈಜಲು ತೆರಳಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋದ ನವವಿವಾಹಿತ ದಂಪತಿ ಸೇರಿದಂತೆ ನಾಲ್ವರು ಸ್ಥಳದಲ್ಲೆ ಅಸುನೀಗಿದ ಘಟನೆ ತಾಲೂಕಿನ ಚಿಕ್ಕೇನಹಳ್ಳಿ ಗ್ರಾಮದಲ್ಲಿ ರವಿವಾರ ಸಂಜೆ ಸಂಭವಿಸಿದೆ.

ಮೃತ ನವವಿವಾಹಿತ ದಂಪತಿಯನ್ನು ಚನ್ನಪಟ್ಟಣದ ಹನುಮಂತನಗರದ ನಿವಾಸಿ ಶೇಖರ್(39) ಆತನ ಪತ್ನಿ ಸುಮಾ ಮತ್ತವರ ಹತ್ತಿರದ ಸಂಬಂಧಿಕರ ಮಕ್ಕಳಾದ ಧನುಷ್(8) ಹಾಗೂ ಹಂಸವೇಣಿ ಎಂದು ಪೊಲೀಸರು ಗುರುತಿಸಿದ್ದಾರೆ.

ಒಂದು ತಿಂಗಳ ಹಿಂದೆಯೆಷ್ಟೇ ವಿವಾಹವಾಗಿದ್ದ ನವಜೋಡಿ ತನ್ನ ಚಿಕ್ಕಮ್ಮನ ಮಗಳ ಮನೆಗೆ ಸುಮಾ ಹಾಗೂ ಆಕೆಯ ಪತಿ ಶೇಖರ್ ನಿನ್ನೆ ಆಗಮಿಸಿದ್ದರು. ರವಿವಾರ ಮಧ್ಯಾಹ್ನ ರಾಜು ಹಾಗೂ ಶಕುಂತಲ ದಂಪತಿಯ ಮಕ್ಕಳಾದ ಧನುಷ್ ಹಾಗೂ ಹಂಸ ಜೊತೆ ಶೇಖರ್ ಹಾಗೂ ಸುಮಾ ಕೆರೆಯ ಬಳಿಗೆ ತೆರಳಿದ್ದರು ಎಂದು ಹೇಳಲಾಗಿದೆ.

ತೀವ್ರ ಬಿಸಿಲಿದ್ದ ಕಾರಣ ಮಕ್ಕಳು ಕೆರೆಯ ನೀರಿನಲ್ಲಿ ಈಜಲು ಇಳಿದ್ದರು. ಈ ಸಂದರ್ಭದಲ್ಲಿ ಧನುಷ್ ಹಾಗೂ ಹಂಸ ಆಳದ ನೀರಿನಲ್ಲಿ ಮುಳುಗುತ್ತಿದ್ದರು. ಕೂಡಲೇ ಅವರನ್ನು ರಕ್ಷಿಸಲು ಶೇಖರ್ ಮತ್ತು ಸುಮಾ ಇಬ್ಬರು ತೆರಳಿದ್ದು, ನಾಲ್ವರು ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ನವ ದಂಪತಿ ಹಾಗೂ ಮಕ್ಕಳಿಬ್ಬರು ಎಷ್ಟು ಹೊತ್ತಾದರೂ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಕೆರೆ ಬಳಿ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ರಾಮನಗರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News