×
Ad

ಮಡಿಕೇರಿ : ಮತದಾರರ ‘ಮಿಂಚಿನ ನೋಂದಣಿ’ ಅಭಿಯಾನಕ್ಕೆ ಜಿಲ್ಲಾಧಿಕಾರಿ ಚಾಲನೆ

Update: 2018-04-08 23:03 IST

ಮಡಿಕೇರಿ, ಎ.8 :ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಮತದಾರರ ‘ಮಿಂಚಿನ ನೋಂದಣಿ’ ಅಭಿಯಾನಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಚಾಲನೆ ನೀಡಿದರು.    

ನಗರದ ಸಂತ ಜೋಸೆಫರ ಕಾಲೇಜಿನಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡುವ ನಿಟ್ಟಿನಲ್ಲಿ 18 ವರ್ಷ ಪೂರ್ಣಗೊಂಡವರಿಗೆ ನಮೂನೆ-6 ಅರ್ಜಿಯನ್ನು ವಿತರಿಸಿ ಮತದಾರರ ಮಿಂಚಿನ ನೋಂದಣಿ ಅಭಿಯಾನಕ್ಕೆ ಪಿ.ಐ.ಶ್ರೀವಿದ್ಯಾ ಅವರು ಚಾಲನೆ ನೀಡಿದರು.     
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಅವರು ಚುನಾವಣಾ ಅಯೋಗದ ನಿರ್ದೇಶನದಂತೆ ಜಿಲ್ಲೆಯ 530 ಮತಗಟ್ಟೆಗಳಲ್ಲಿ ಮತದಾರರ ಮಿಂಚಿನ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಈ ಅವಕಾಶವನ್ನು ಅರ್ಹರು ಪಡೆದುಕೊಳ್ಳುವಂತೆ ಕೋರಿದರು. 

18 ವರ್ಷ ಪೂರ್ಣಗೊಂಡು ಇದುವರೆಗೆ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದಿದ್ದಲ್ಲಿ, ಮತದಾರರ ಪಟ್ಟಿಯಲ್ಲಿ ಹಲವು ಕಾರಣಗಳಿಂದ ಹೆಸರು ಬಿಟ್ಟು ಹೋಗಿರುವವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ, ಮತದಾನದ ಗುರುತಿನ ಚೀಟಿ ಪಡೆಯುವಂತೆ ಜಿಲ್ಲಾಧಿಕಾರಿ ಅವರು ಮನವಿ ಮಾಡಿದರು. 
ಹೆಸರು ನೋಂದಾಯಿಸಿದವರಿಗೆ ಶೀಘ್ರ ಮತದಾರರ ಗುರುತಿನ ಚೀಟಿ ನೀಡಲಾಗುವುದು, 18 ವರ್ಷ ಪೂರ್ಣಗೊಂಡವರು ಯಾರು ಸಹ ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎಂದರು.   

ಪ್ರಜಾಪ್ರಭುತ್ವವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಅರ್ಹರೆಲ್ಲರೂ ಮತದಾರರ ಗುರುತಿನ ಚೀಟಿ ಪಡೆದು, ಮತದಾನ ಮಾಡುವಂತರಾಗಬೇಕು ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಹೇಳಿದರು.   

ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ ಅವರು ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವ್ಯವಸ್ಥಿತ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ ವತಿಯಿಂದ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ನಿಟ್ಟಿನಲ್ಲಿಮತದಾರರ ಮಿಂಚಿನ ನೋಂದಣಿ ವಿಶೇಷ ಅಭಿಯಾನವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಅರ್ಹರಲ್ಲಿ ಮನವಿ ಮಾಡಿದರು.  

 ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ.ಸತೀಶ್ ಕುಮಾರ್ ಅವರು ಮಾತನಾಡಿ ಈ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತಾಗಲು 18 ವರ್ಷ ಪೂರ್ಣಗೊಂಡವರಿಗೆ ಮತದಾರರ ಗುರುತಿನ ಚೀಟಿ ಪಡೆಯುವಂತಾಗಲು ಮಿಂಚಿನ ನೋಂದಣಿ ಅಭಿಯಾನ ಆಯೋಜಿಸಲಾಗಿದೆ. ಆ ದಿಸೆಯಲ್ಲಿ ಅರ್ಹರು ಬೂತ್ ಮಟ್ಟದ ಅಧಿಕಾರಿಗಳನ್ನು ಭೇಟಿ ಮಾಡಿ ಹೆಸರು ನೋಂದಾಯಿಸಿ ಕೊಳ್ಳುವಂತಾಗಬೇಕು. ಈ ಅವಕಾಶವು ಇದೇ ಎಪ್ರಿಲ್ 14 ರ ವರೆಗೆ ಇದೆ ಎಂದು ಅವರು ತಿಳಿಸಿದರು.   

ಉಪ ವಿಭಾಗಾಧಿಕಾರಿ ರಮೇಶ್ ಕೊನರೆಡ್ಡಿ ಅವರು ಮಾತನಾಡಿ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಮತದಾನವು ಪರಿಣಾಮಕಾರಿ ಸಾಧನವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ತಹಸೀಲ್ದಾರ್ ಶಾರದಾಂಭ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಪೌರಾಯುಕ್ತರಾದ ಬಿ.ಶುಭ ಇತರರು ಇದ್ದರು. 

ಇನ್ನಷ್ಟು ಮಾಹಿತಿ:ಮತದಾರರ ಮಿಂಚಿನ ನೋಂದಣಿ ಅಭಿಯಾನ ಸಂದರ್ಭದಲ್ಲಿ ವಯಸ್ಸಿನ ಬಗ್ಗೆ ದಾಖಲೆಗಳು: ಶಾಲಾ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್ ಪೋರ್ಟ್, ಎಸ್.ಎಸ್.ಎಲ್.ಸಿ/ಪಿ.ಯು.ಸಿ ಅಂಕಪಟ್ಟಿ, ಪಾನ್ ಕಾರ್ಡ್ ಹಾಗೂ ವೈದ್ಯಕೀಯ ಪ್ರಮಾಣ ಪತ್ರ.   

ವಾಸಸ್ಥಳದ ಬಗ್ಗೆ ದಾಖಲೆಗಳು: ಪಡಿತರ ಚೀಟಿ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ, ಪಾಸ್‍ಪೋರ್ಟ್, ಗ್ಯಾಸ್ ಸಿಲಿಂಡರ್ ಸ್ವೀಕೃತಿ ರಶೀದಿ, ವಿದ್ಯುತ್ ಬಿಲ್ ಪಾವತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ, ಬಾಡಿಗೆ ಕರಾರು ಪತ್ರ, ಚಾಲನಾ ಪರವಾನಗಿ ಹಾಗೂ ಇನ್ನಿತರ ದಾಖಲೆಗಳು, ಒಂದು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ. 

ನಮೂನೆ 6: ಹದಿನೆಂಟು ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸಿದವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು. ನಮೂನೆ 6ಎ: ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು. ನಮೂನೆ 7: ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು, ನಮೂನೆ 8: ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದಲ್ಲಿ ಸರಿಪಡಿಸಿಕೊಳ್ಳಲು. ನಮೂನೆ 8ಎ: ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ಸಲ್ಲಿಸಬೇಕಿರುವ ಅರ್ಜಿ. ಮತದಾರರ ಪಟ್ಟಿಗೆ ಹೆಸರು ಸೇರಿಸಲು ಎಪ್ರಿಲ್ 14ರ ವರೆಗೆ ಅವಕಾಶವಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News