ಮಡಿಕೇರಿ: ಕಾರ್ಯಪ್ಪ ಕಾಲೇಜ್‍ನಲ್ಲಿ ಹಳೆ ವಿದ್ಯಾರ್ಥಿ ಸಂಘದಿಂದ ಸಂತೋಷ ಕೂಟ
ಮಡಿಕೇರಿ, ಏ.9 : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆಯ ವಿದ್ಯಾರ್ಥಿ ಸಂಘದ ವತಿಯಿಂದ ವಾರ್ಷಿಕ ಸಂತೋಷ ಕೂಟ ಕಾಲೇಜಿನ ಸಭಾಂಗಣದಲ್ಲಿ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬ್ರಿಗೇಡಿಯರ್ ಪಟ್ರಪಂಡ ಮೊಣ್ಣಪ್ಪ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದರು. ರಾಷ್ಟ್ರದ ಹಿತದೃಷ್ಟಿಯಿಂದ ನೆರೆಯ ರಾಷ್ಟ್ರಗಳೊಂದಿಗೆ ಸೌಹಾರ್ದತೆಯನ್ನು ಕಾಯ್ದುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಂಗೀತ ವಿದೂಷಿ ಕಂಬೇಯಂಡ ಸೀತಾಲಕ್ಷ್ಮಿ ಮಾತನಾಡಿ, ಓಂಕಾರದಿಂದ ಆರಂಭಗೊಂಡ ಸಪ್ತಸ್ವರಗಳು ವಿದ್ಯಾರ್ಜನೆ, ಕೃಷಿ ಹಾಗೂ ಪ್ರಾಣಿಗಳ ಜೀವನ ಕ್ರಮಕ್ಕೂ ಸಹಕಾರಿಯಾಗಿದೆ ಎಂದರು. ಇದೇ ಸಂದರ್ಭ ಅವರು ಹಲವು ಸುಶ್ರಾವ್ಯ ಗೀತೆಗಳನ್ನು ಹಾಡಿದರು.
ಕಾರ್ಯಪ್ಪ ಕಾಲೇಜ್‍ನ ಪ್ರಾಂಶುಪಾಲರಾದ ಡಾ.ಪಾರ್ವತಿಅಪ್ಪಯ್ಯ ಮಾತನಾಡಿ ಹಳೆಯ ವಿದ್ಯಾರ್ಥಿಗಳಿಂದ ಕಾಲೇಜ್‍ಗೆ ಸಿಗುತ್ತಿರುವ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸ್ತುತ ವಿದ್ಯಾರ್ಥಿಗಳು ಕಾಲೇಜ್‍ನ ಕೀರ್ತಿಗೆ ಪೂರಕವಾಗಿ ವಿದ್ಯಾರ್ಜನೆಯಲ್ಲಿ ತೊಡಗಿರುವ ಕುರಿತು ತಿಳಿಸಿದರು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊಣ್ಣಂಡ ಶೋಭಾ ಸುಬ್ಬಯ್ಯ ಮಾತನಾಡಿ ಸಂಘ ನಡೆದು ಬಂದ ಹಾದಿ ಹಾಗೂ ಸದಸ್ಯರ ಸಹಕಾರದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
ಇದೇ ಸಂದರ್ಭ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿಯ ಉತ್ತಮ ಶಿಬಿರಾರ್ಥಿಗಳನ್ನು ಶೋಭಾ ಸುಬ್ಬಯ್ಯ ಅವರ ಹೆಸರಿನಲ್ಲಿ ಬಹುಮಾನ ನೀಡಿ ಗೌರವಿಸಲಾಯಿತು. ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಕಾಲೇಜು ವಿದ್ಯಾರ್ಥಿಗಳು ಮೈಮ್ ಶೋದ ಮೂಲಕ ಗಮನ ಸೆಳೆದರು. ಆಗಲಿದ ಸಂಘದ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರಾದ ಎನ್.ಎ.ಅಪ್ಪಯ್ಯ, ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರಾದ ಶೋಭಾ ಸುಬ್ಬಯ್ಯ ಸ್ವಾಗತಿಸಿ, ಆಲೆಮಾಡ ಚಿತ್ರಾ ನಂಜಪ್ಪ ನಿರೂಪಿಸಿ, ನೀಲಮ್ಮ ಪ್ರಾರ್ಥಿಸಿದರು, ಬೊಪ್ಪಂಡ ಶ್ಯಾಂ ಪೂಣಚ್ಚ ವಂದಿಸಿದರು.