ಎ.12ರ ಕರ್ನಾಟಕ ಬಂದ್ ವಾಪಸ್

Update: 2018-04-09 14:43 GMT

ಬೆಂಗಳೂರು, ಎ.9: ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬಾರದು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಎ.12 ರ ಬಂದ್ ಅನ್ನು ಹಿಂಪಡೆದಿದ್ದು, ಅಂದು ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ.

ಈ ಕುರಿತು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಚಳವಳಿ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್, ನಾವು ಎಂದಿಗೂ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡಲು ಅವಕಾಶ ನೀಡುವುದಿಲ್ಲ. ಸುಪ್ರೀಂಕೊರ್ಟ್ ಮಂಡಳಿ ರಚನೆ ಮಾಡುವ ಪ್ರಸ್ತಾಪ ಮಾಡಿಲ್ಲ. ಆದರೆ, ತಮಿಳುನಾಡು ಅನಗತ್ಯ ಒತ್ತಡ ಹೇರುತ್ತಿರುವುದು ಸರಿಯಲ್ಲ. ಮೇ 3 ರ ನಂತರ ಮುಂದಿನ ಹೋರಾಟದ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದರು.

ತಮಿಳು ನಟರಾದ ಕಮಲ್ ಹಾಸನ್ ಹಾಗೂ ರಜನೀಕಾಂತ್ ಕಾವೇರಿ ವಿಚಾರದಲ್ಲಿ ಅನಗತ್ಯವಾಗಿ ತಲೆ ಹಾಕುತ್ತಿದ್ದಾರೆ. ಆ ಮೂಲಕ ರಾಜಕೀಯ ಮಾಡಲು ಮುಂದಾಗಿದ್ದಾರೆ. ಬಣ್ಣ ಹಚ್ಚಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಬೆಳೆದು ರಾಜ್ಯದ ವಿರುದ್ದವೆ ಹೋರಾಟ ಮಾಡುತ್ತಿದ್ದು, ಇವರ ಬಗ್ಗೆ ಎಚ್ಚರವಾಗಿರಬೇಕು ಎಂದ ಅವರು, ರಜನೀಕಾಂತ್ ಹಾಗೂ ಕಮಲ್ ಹಾಸನ್ ಚಿತ್ರಗಳನ್ನು ರಾಜ್ಯದಲ್ಲಿ ನಿಷೇಧ ಮಾಡಲಾಗಿದೆ. ಇವರ ಚಿತ್ರವನ್ನು ಯಾರೂ ಖರೀದಿ ಮಾಡುವಂತಿಲ್ಲ ಎಂದು ಅವರು ತಿಳಿಸಿದರು.

ರಾಜ್ಯದ ಸಂಸದರು ಕಾವೇರಿ ವಿಚಾರವಾಗಿ ಮೌನವಾಗಿರುವುದನ್ನು ಖಂಡಿಸಿ ಹಾಗೂ ರಜನೀಕಾಂತ್ ಮತ್ತು ಕಮಲ್ ಹಾಸನ್ ಸ್ವಾರ್ಥಕ್ಕೆ ಕಾವೇರಿಯನ್ನು ಬಳಕೆ ಮಾಡಿಕೊಳ್ಳಲು ಮುಂದಾಗಿರುವುದನ್ನು ವಿರೋಧಿ ರಾಜಭವನಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಲಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು.
ಕಾವೇರಿ ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನಿಂದ ಸ್ವಲ್ಪ ಮಟ್ಟಿಗೆ ನ್ಯಾಯ ದೊರಕಿದೆ. ಆದರೆ, ಈಗ ನೀರು ನಿರ್ವಹಣಾ ಮಂಡಳಿ ರಚನೆ ಮಾಡಿದರೆ ನಮ್ಮ ಎಲ್ಲ ಅಣೆಕಟ್ಟುಗಳ ಉಸ್ತುವಾರಿ ಕೇಂದ್ರದ ಪಾಲಾಗುತ್ತದೆ ಎಂದ ಅವರು, ಕೇಂದ್ರ ಸರಕಾರ ಮಂಡಳಿ ರಚನೆ ಮಾಡಿದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಮಿಳುನಾಡು ಸರಕಾರ ರಾಜಕೀಯ ಹೋರಾಟ ಮಾಡುತ್ತಿದೆ. ಸುಪ್ರೀಂಕೋರ್ಟ್‌ನ ತೀರ್ಪನ್ನು ಎಲ್ಲರೂ ಗೌರವಿಸಬೇಕು. ಈ ಹಿಂದೆ ನ್ಯಾಯಾಲಯದ ತೀರ್ಪನ್ನು ಗೌರವಿಸಿ ತಮಿಳುನಾಡಿಗೆ ನೀರನ್ನು ಹರಿಸಲಾಗಿದೆ. ಆದರೆ, ಈಗ ಯಾಕೆ ನಮ್ಮ ಪರವಾದ ತೀರ್ಪನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ ಎಂದು ಪ್ರಶ್ನಿಸಿದ ವಾಟಾಳ್ ನಾಗರಾಜ್, ನಟರಾದ ಕಮಲ ಹಾಸನ್, ರಜನಿಕಾಂತ್ ಕಾವೇರಿ ವಿಷಯದಲ್ಲಿ ಈವರೆಗೆ ದನಿ ಎತ್ತಿರಲಿಲ್ಲ. ಈಗ ನಾಟಕವಾಡುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News