×
Ad

ಸೋಮವಾರಪೇಟೆ: ಜಲಪಾತಕ್ಕೆ ಈಜಲು ತೆರಳಿದ ಯುವಕ ನೀರಿನಲ್ಲಿ ಮುಳುಗಿ ಮೃತ್ಯು

Update: 2018-04-09 22:34 IST

ಸೋಮವಾರಪೇಟೆ,ಎ.09: ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಈಜಲು ತೆರಳಿದ ಯುವಕನೋರ್ವ ಮೃತಪಟ್ಟ ಘಟನೆ ಸೋಮವಾರ ಸಂಜೆ ಸಂಭವಿಸಿದೆ.

ಸಮೀಪದ ಕೂಗೇಕೋಡಿ ಸಬ್ಬನಕೊಪ್ಪ ಗ್ರಾಮದ ಮಂಜುನಾಥ್ ಎಂಬವರ ಪುತ್ರ ಅಭಿಷೇಕ್(22) ಮೃತಪಟ್ಟವರು. 

ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ನೌಕರಿಯಲ್ಲಿದ್ದ ಅಭಿಷೇಕ್ ಗ್ರಾಮದ ದೇವರ ಪೂಜೆಗೆ ಶನಿವಾರ ಆಗಮಿಸಿದ್ದರು. ಗ್ರಾಮದ ಸ್ನೇಹಿತರು ಮತ್ತು ಕುಟುಂಬದ ಕೆಲ ಸದಸ್ಯರೊಂದಿಗೆ ಸೋಮವಾರ ಮಲ್ಲಳ್ಳಿ ಜಲಪಾತ ವಿಕ್ಷಣೆಗೆ ತೆರಳಿದ್ದರು. ಜಲಪಾತದ ತಳಭಾಗದಲ್ಲಿರುವ ಹೊಂಡದ ಸಮೀಪದ ಕಲ್ಲಿನ ಮೇಲೆ ಎಲ್ಲರೂ ಕುಳಿತಿದ್ದ ಸಂದರ್ಭದಲ್ಲಿ ಅಭಿಷೇಕ್, 'ಮರಣಬಾವಿ' ಎಂದೇ ಕರೆಸಿಕೊಳ್ಳುವ ಹೊಂಡದಲ್ಲಿ ಈಜಲು ತೆರಳಿದ್ದಾನೆ. ಸ್ನೇಹಿತರು ಹಾಗು ಕುಟುಂಬ ಸದಸ್ಯರು ನೋಡುತ್ತಿದ್ದಂತೆ ನೀರಿನಲ್ಲಿ ಮುಳುಗಿದ್ದಾನೆ. 

ಸೋಮವಾರಪೇಟೆ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಕುಮಾರಳ್ಳಿ ಗ್ರಾಮದ ಈಜುಗಾರ ಪ್ರಸನ್ನ ನೀರಿನ ಹೊಂಡದಲ್ಲಿ ಶೋಧ ನಡೆಸಿದ್ದು, 20 ಅಡಿ ಆಳದಲ್ಲಿ ಮೃತದೇಹ ಸಿಲುಕಿರುವ ಬಗ್ಗೆ ಖಾತ್ರಿ ಪಡಿಸಿದ್ದಾರೆ. ಕತ್ತಲೆಯಾದ ಕಾರಣ ಕಾರ್ಯಾಚರಣೆಗೆ ತೊಡಕಾಗಿದ್ದು, ಮಂಗಳವಾರ ಮೃತದೇಹ ತೆಗೆಯಲಾಗುವುದು ಎಂದು ಠಾಣಾಧಿಕಾರಿ ಶಿವಣ್ಣ ತಿಳಿಸಿದ್ದಾರೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News