ಹುಳಿಯಾರು: ಬಸ್-ಬೈಕ್ ಮುಖಾಮುಖಿ ಢಿಕ್ಕಿ; ಓರ್ವ ಮೃತ್ಯು
ಹುಳಿಯಾರು,ಏ.09: ಖಾಸಗಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಬೈಕ್ ಚಾಲಕ ಸ್ಥಳದಲ್ಲೇ ಮೃತಪಟ್ಟು ಬೈಕ್ ಭಸ್ಮವಾದ ಘಟನೆ ಹುಳಿಯಾರು ಸಮೀಪದ ಬರಕನಹಾಲ್ ತಿರುವಿನ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ.
ಹುಳಿಯಾರು ಸಮೀಪದ ಚೌಳಕಟ್ಟೆ ಗ್ರಾಮದ ಸಿ.ಬಿ.ರಂಗಸ್ವಾಮಿ (20) ಮೃತ ಬೈಕ್ ಸವಾರನಾಗಿದ್ದಾನೆ. ಇವರು ತಮ್ಮ ಅಪಾಚಿ ಬೈಕ್‍ನಲ್ಲಿ ಬೆಂಗಳೂರಿನಿಂದ ಹುಟ್ಟೂರಿನ ಚೌಳಕಟ್ಟೆಗೆ ಗ್ರಾಮದ ಅಂತರಘಟ್ಟೆ ಅಮ್ಮನ ಜಾತ್ರಾ ಮಹೋತ್ಸವಕ್ಕೆ ಬರುವಾಗ ಹುಳಿಯಾರು ಕಡೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ನಡುವೆ ಬರಕನಹಾಲ್ ತಿರುವಿನ ಬಳಿ ಮುಖಾಮುಖಿ ಢಿಕ್ಕಿ ಸಂಭವಿಸಿದೆ. ಪರಿಣಾಮ ಬೈಕ್ ಚಾಲಕನ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಬಸ್ ಹಾಗೂ ಬೈಕ್ ಮುಖಾಮುಖಿ ಢಿಕ್ಕಿಯ ರಭಸಕ್ಕೆ ಬೈಕ್‍ನ ಪೆಟ್ರೋಲ್ ಟ್ಯಾಂಕ್ ತೂತು ಬಿದ್ದು ಪೆಟ್ರೋಲ್ ಚೆಲ್ಲಿದೆ. ಅಲ್ಲದೆ ಸ್ವಲ್ಪ ದೂರ ಬಸ್‍ಗೆ ಬೈಕ್ ಸಿಲುಗಿ ರಸ್ತೆಗೆ ಉಜ್ಜಿಕೊಂಡು ಹೋಗಿದೆ. ಪರಿಣಾಮ ಬೆಂಕಿಯ ಕಿಡಿ ಪೆಟ್ರೋಲ್ ಗೆ ತಗುಲಿ ಹೊತ್ತಿ ಉರಿದಿದೆ. ತಕ್ಷಣ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ನಂದಿಸಲಾಯಿತಾದರೂ ಅಷ್ಟರಲ್ಲಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.