ಮೈಸೂರು: ಸಂಪ್ರದಾಯಗಳಿಲ್ಲದೆ ನಡೆದ ಹಿರಿಯ ವಿದ್ವಾಂಸ ಡಾ.ಪ್ರಭುಶಂಕರ ಅಂತ್ಯಕ್ರಿಯೆ

Update: 2018-04-09 17:30 GMT

ಮೈಸೂರು,ಎ.9: ಕನ್ನಡದ ಹಿರಿಯ ವಿದ್ವಾಂಸ, ರಾಷ್ಟ್ರಕವಿ ಕುವೆಂಪು ಅವರ ಆತ್ಮೀಯ ಶಿಷ್ಯವರ್ಗದಲ್ಲಿ ಒಬ್ಬರಾಗಿದ್ದ ಡಾ.ಪ್ರಭುಶಂಕರ ಅವರ ಅಂತ್ಯ ಕ್ರಿಯೆಯಾವುದೇ ವಿದಿ ವಿಧಾನಗಳಿಲ್ಲದೆ ಗೋಕುಲಂನ ಚಿರಶಾಂತಿ ಧಾಮದಲ್ಲಿ ನಡೆಯಿತು.

ಕುವೆಂಪು ಅವರ ಶಿಷ್ಯಕೊಂಡಿಯಲ್ಲಿ ಒಬ್ಬರಾಗಿದ್ದ ಲೇಖಕ ಡಾ.ಪ್ರಭುಶಂಕರ ನೀರವ ಮೌನದೊಂದಿಗೆ ಸೋಮವಾರ ಯಾವುದೇ ಸಂಪ್ರದಾಯಗಳಿಲ್ಲದೆ ಅಂತ್ಯಕ್ರಿಯೆ ನಡೆಯಿತು. 89 ವರ್ಷಗಳ ಸುದೀರ್ಘ ಬದುಕು ನಡೆಸಿದ್ದ ಪ್ರಭುಶಂಕರ ಅವರು ಒಂಟಿಕೊಪ್ಪಲಿನ ನಿವಾಸದಲ್ಲಿ ವಯೋಸಹಜ ಅನಾರೋಗ್ಯಕ್ಕೀಡಾಗಿ ರವಿವಾರ ರಾತ್ರಿ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ನಿವಾಸದಲ್ಲಿ ಶೋಕ ಮಡುಗಟ್ಟಿತ್ತು. ಹಲವು ಹಿರಿಯ ವಿದ್ವಾಂಸರು, ಸಾಹಿತಿಗಳು, ಹೋರಾಟಗಾರರು ಹಾಗೂ ಸಮಾವಾದಿ ಚಿಂತಕರು ಅವರ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು. ಇದೇ ವೇಳೆ ಸಾಹಿತ್ಯಾಸಕ್ತರು ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದರು. 

ಬೆಳಿಗ್ಗೆ 11.30 ರವರೆಗೂ ಸಾವಿರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು. ಬಳಿಕ ಗೋಕುಲಂನ ಚಿರಶಾಂತಿ ಧಾಮದಲ್ಲಿ ಮೃತದೇಹಕ್ಕೆ ಅಗ್ನಿ ಸ್ಪರ್ಶಿಸಲಾಯಿತು. ಆ ಮೂಲಕ ಡಾ.ಪ್ರಭುಶಂಕರ ಅವರು ಸಹ ಕುವೆಂಪು ಹಾದಿಯಲ್ಲೇ ಸಾಗಿದರು.

ಆರ್ಥಿಕ ತಜ್ಞ ಪ್ರೊ.ಸಿ.ಕೆ.ರೇಣುಕಾಚಾರ್ಯ ಸೇರಿದಂತೆ ಇಬ್ಬರು ಸಹೋದರರು, ಒಬ್ಬರು ಸಹೋದರಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಗಣ್ಯರ ಕಂಬನಿ: ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ರಾಮಕೃಷ್ಣ ಆಶ್ರಮದ ಆತ್ಮನಾನಂದ ಸ್ವಾಮೀಜಿ, ವಿದ್ವಾಂಸ ಡಾ.ಟಿ.ವಿ. ವೆಂಕಟಾಚಲಶಾಸ್ತ್ರಿ, ಹಿರಿಯ ಸಾಹಿತಿಗಳಾದ ಡಾ.ಎಸ್.ಎಲ್. ಬೈರಪ್ಪ, ಡಾ. ಶಿವರಾಂ ಕಾಡನಕುಪ್ಪೆ, ಜಿ.ಎಚ್. ನಾಯಕ್, ಮೀರಾನಾಯಕ್, ಹಾಸ್ಯಸಾಹಿತಿ ಅ.ರಾ. ಮಿತ್ರ, ಡಾ. ಸಿಪಿಕೆ, ವಿಶ್ರಾಂತ ಕುಲಪತಿಗಳಾದ ಡಾ.ಜೆ. ಶಶಿಧರ್ ಪ್ರಸಾದ್, ಪ್ರೊ. ಕೆ.ಎಸ್. ರಂಗಪ್ಪ, ಸಮಾಜವಾದಿ ಪ.ಮಲ್ಲೇಶ್, ಪ್ರೊ.ಕೆ.ಎಸ್. ಭಗವಾನ್, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ವಿದ್ಯಾವರ್ದಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ, ಪ್ರಧಾನ ಕಾರ್ಯದರ್ಶಿ ಪಿ. ವಿಶ್ವನಾಥ್, ಮಹಾಜನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ, ರಂಗಕರ್ಮಿ ಕೆ. ಮುದ್ಧುಕೃಷ್ಣ ಸೇರಿದಂತೆ ಹಲವು ಗಣ್ಯರು ಅಗಲಿದ ಸಾಹಿತಿಗೆ ಗೌರವ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News