ಶಾಸಕ ಜಿ.ಟಿ.ದೇವೇಗೌಡ ಬಹಿರಂಗ ಕ್ಷಮೆಯಾಚಿಸಲು ಕೆಪಿಸಿಸಿ ಕಾರ್ಯದರ್ಶಿ ನಾರಾಯಣಸ್ವಾಮಿ ಆಗ್ರಹ

Update: 2018-04-09 17:36 GMT

ಮೈಸೂರು,ಎ.9: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಗರದ ರಂಗ ಸಮುದಾಯ ಭವನದಲ್ಲಿ ನಡೆದ ಒಕ್ಕಲಿಗ ಮುಖಂಡರು, ಕಾರ್ಯಕರ್ತರ ಸಭೆಯ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು, ಕೇವಲ ವೇದಿಕೆ ಮೇಲಿದ್ದವರು ಮಾತ್ರ ಒಕ್ಕಲಿಗರು, ಉಳಿದವರು ಸ್ಲಂನಿಂದ ಬಂದವರು ಎನ್ನುವ ಹೇಳಿಕೆಗೆ ಶಾಸಕರು ಕೂಡಲೇ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ನಾರಾಯಣಸ್ವಾಮಿ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಳಚೆ ಪ್ರದೇಶಗಳಲ್ಲಿ ಸಾಮಾನ್ಯವಾಗಿ ದಲಿತರು, ಶೋಷಿತರು, ಮುಸ್ಲಿಮರು ಸೇರಿದಂತೆ ಮೊದಲಾದವರು ವಾಸಿಸುತ್ತಿದ್ದು, ಇವರೆಲ್ಲ ಹಣ ನೀಡಿದರೆ ಯಾವುದಾದರೂ ಸಭೆ, ಸಮಾರಂಭಕ್ಕೆ ಹಾಜರಾಗುತ್ತಾರೆ ಎಂಬ ಅರ್ಥದ ರೀತಿಯಲ್ಲಿ ಶಾಸಕರು ಟೀಕೆ ಮಾಡಿದ್ದು, ಇದು ಈ ವರ್ಗಗಳನ್ನು ಅಪಮಾನಿಸುವ ರೀತಿಯ ಹೇಳಿಕೆ ಆಗಿದೆ. ಹೀಗಾಗಿ, ಜಿ.ಟಿ. ದೇವೇಗೌಡ ಈ ಕುರಿತಂತೆ ಸ್ಲಂ ನಿವಾಸಿಗಳಲ್ಲಿ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಕೊಳಚೆ ಪ್ರದೇಶ ಮೊದಲಾದ ಕಡೆ ಅವರು ಮತಯಾಚಿಸಲು ಹೋದಾಗಲೆಲ್ಲ ಅಲ್ಲಿನ ಜನರು ಚುನಾವಣಾ ಪ್ರಚಾರಕ್ಕೆ ಅಡ್ಡಿಯುಂಟು ಮಾಡುವರು. ಸೋಲಿನ ಭೀತಿಯಲ್ಲಿರುವ ಜಿ.ಟಿ.ಡಿಯವರು ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುತ್ತಾ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದರು.

ಚುನಾವಣೆಗೆ ಪ್ರಚಾರದ ವೇಳೆ ಜಾತಿ, ಧರ್ಮ, ಆಧಾರಿತ ಪದಗಳನ್ನು ಓಲೈಕೆ ಮಾಡುವುದು ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ, ಅಲ್ಲದೇ ಸ್ಲಂ ಪದ ಬಳಸಿ, ಪರೋಕ್ಷವಾಗಿ ಅಲ್ಲಿನ ಜನರನ್ನು ಅಪಮಾನಿಸಿರುವ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗೆ ದೂರು ನೀಡುವುದಾಗಿ ಸಹಾ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯರಾದ ಎನ್.ಭಾಸ್ಕರ್, ಹೆಡತಲೆ ಮಂಜುನಾಥ್,  ತಾ.ಪಂ.ಸದಸ್ಯ ಹಾರೋಹಳ್ಳಿ ಸುರೇಶ್, ಎಚ್.ಎಲ್. ಬಸವರಾಜ ನಾಯ್ಕ್, ಕೆ.ಎಸ್. ಸಿದ್ದರಾಜು, ಉದ್ಬೂರು ಕೃಷ್ಣ, ಶ್ರೀನಿವಾಸಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News