ಮುಜಾವರ್ ಗೆ ಅವಕಾಶ ನೀಡಿದಲ್ಲಿ ಅಯೋಧ್ಯೆ ಮಾದರಿ ಹೋರಾಟ: ವಿಹಿಂಪ

Update: 2018-04-10 13:34 GMT

ಚಿಕ್ಕಮಗಳೂರು. ಎ.10: ಬಾಬಾಬುಡಾನ್‍ಗಿರಿ ಹಾಗೂ ದತ್ತಪೀಠ ವಿವಾದ ಸಂಬಂಧ ಇತ್ತೀಚೆಗೆ ಸರಕಾರ ನ್ಯಾಯಾಲಕ್ಕೆ ಸಲ್ಲಿಸಿರುವ ನ್ಯಾ.ನಾಗಮೋಹನ್ ದಾಸ್ ವರದಿ ಏಕಪಕ್ಷೀಯ ನಿರ್ಣಯಗಳಿಂದ ಕೂಡಿದೆ. ಈ ವರದಿಯಿಂದ ಹಿಂದೂಗಳ ಭಾವನೆ, ಧಾರ್ಮಿಕ ನಂಬಿಕೆಗಳಿಗೆ ಘಾಸಿಯಾಗಿದೆ. ವರದಿಯನ್ವಯ ದತ್ತಪೀಠದ ಆಡಳಿತ ಉಸ್ತುವಾರಿಯನ್ನು ಶಾಖಾದ್ರಿಗೆ ಒಪ್ಪಿಸಿ ಮುಜಾವರ್ ಗೆ ಅವಕಾಶ ನೀಡಿದಲ್ಲಿ ದತ್ತಪೀಠ ಚಲೋಗೆ ಕರೆ ನೀಡಿ 1992ರ ಅಯೋಧ್ಯೆ ಮಾದರಿಯ ಹೋರಾಟವನ್ನು ರೂಪಿಸಲಾಗುವುದು ಎಂದು ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ರಾಜ್ಯ ಸಂಚಾಲಕ ಸಕಲೇಶಪುರ ರಘು ಎಚ್ಚರಿಸಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಬಾಬುಡಾನ್‍ಗಿರಿ ಹಾಗೂ ದತ್ತಪೀಠ ವಿವಾದ ಸಂಬಂಧ ಕೆಳ ಹಾಗೂ ಉಚ್ಚ ನ್ಯಾಯಾಲಯಗಳಲ್ಲಿ ಹಿಂದೂಗಳ ಪರವಾಗಿ ಆದೇಶವನ್ನು ಈ ಹಿಂದೆಯೇ ನೀಡಲಾಗಿದೆ. ಆದರೆ ಚಿಕ್ಕಮಗಳೂರಿನ ಶಾಖಾದ್ರಿ ಕುಟುಂಬದವರು ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ರಿಟ್ ಸಲ್ಲಿಸಿದ್ದರಿಂದ ನ್ಯಾಯಾಲಯ ವಿವಾದವನ್ನು ಬಗೆಹರಸಲು ಸರಕಾರಕ್ಕೆ ಸೂಚಿಸಿತ್ತು. ಅದರಂತೆ 2008ರಲ್ಲಿದ್ದ ಸರಕಾರ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಿಸಿ, ನಂದಾ ದೀಪ ಬೆಳಗಿಸಬೇಕು, ವಿಗ್ರಹ ಪ್ರತಿಷ್ಠಾಪನೆ ಮಾಡಬೇಕು ಹಾಗೂ ಹಿಂದೂ ಪದ್ಧತಿಯಂತೆ ಪೂಜಾ ವಿಧಾನಗಳು ನಡೆಯಬೇಕೆಂದು ನ್ಯಾಯಾಲಯಕ್ಕೆ ಅಪಿಡವಿಟ್ ಸಲ್ಲಿಸಿತ್ತು. ಆದರೆ 2017ರಲ್ಲಿ ಈಗಿನ ಕಾಂಗ್ರೆಸ್ ಸರಕಾರ ಮುಸ್ಲಿಮರ ಮತ ಬ್ಯಾಂಕ್ ದೃಷ್ಟಿಯಲ್ಲಿಟ್ಟುಕೊಂಡು ದತ್ತಪೀಠವನ್ನು ಬಾಬಾಬುಡಾನ್ ದರ್ಗಾವೆಂದು, ಶಾಖಾದ್ರಿ ನೇತೃತ್ವದಲ್ಲಿ ಮುಜಾವರ್ ಗೆ ಅವಕಾಶ ಮಾಡಿಕೊಡಬೇಕೆಂದು ನ್ಯಾಯಾಲಯಕ್ಕೆ ಅಪಿಡವಿಟ್ ಸಲ್ಲಿಸಿ, ಈ ಸಂಬಂಧ ನಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ಸಮಿತಿಯೊಂದನ್ನು ವರದಿ ತಯಾರಿಸಲು ನೇಮಿಸಿತ್ತು. ಈ ಸಮಿತಿಯ ಎಲ್ಲ ಸದಸ್ಯರು ನಾಸ್ತಿಕರಾದ ಹಿನ್ನೆಲೆಯಲ್ಲಿ ದತ್ತಪೀಠವನ್ನು ಬಾಬಾಬುಡಾನ್‍ಗಿರಿ ದರ್ಗಾ ಎಂದು ಉಲ್ಲೇಖಿಸಿ ಅಲ್ಲಿನ ಧಾಮಿಕ ಆಚರಣೆಗಳು ಮುಜಾವರ್ ಅವರಿಂದ ನಡೆಯಬೇಕೆಂದು ಸರಕಾರಕ್ಕೆ ವರದಿ ನೀಡಿದೆ. ಮುಸಲ್ಮಾನರ ಓಟಿಗಾಗಿ ಈ ವರದಿಯನ್ನು ಅಂಗೀಕರಿಸಿದ ಕಾಂಗ್ರೆಸ್ ಸರಕಾರ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರಿಂದ ನ್ಯಾಯಾಲಯ ಈ ವರದಿಯನ್ನು ಮಾನ್ಯ ಮಾಡಿದೆ. ಆದರೆ ಈ ವರದಿ ಕಾಂಗ್ರೆಸ್ ಸಿದ್ಧ ಪಡಿಸಿದ ವರಿಯಾಗಿದ್ದು, ಹಿಂದೂಗಳ ಭಾವನೆಗಳಿಗೆ ವಿರುದ್ಧವಾಗಿ ವರದಿ ತಯಾರಿಸಲಾಗಿದೆ ಎಂದ ಅವರು, ಯಾವುದೇ ಕಾರಣಕ್ಕೂ ದತ್ತಪೀಠದ ಆಡಳಿತವನ್ನು ಶಾಖಾದ್ರಿಗೆ ಒಪ್ಪಿಸಿ, ಮುಜಾವರ್ ಅವರಿಗೆ ಅವಕಾಶ ಮಾಡಿಕೊಡುವುದನ್ನು ನಾವು ಒಪ್ಪುವುದಿಲ್ಲ ಎಂದು ಅವರು ಹೇಳಿದರು.

ಈ ವರದಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ಉಚ್ಚ ನ್ಯಾಯಾಲಯದ ತೀರ್ಪುನ್ನು ಪುನರ್ ಪರಿಶೀಲಿಸಬೇಕೆಂದು ಶೀಘ್ರ ಹೈಕೋರ್ಟಿಗೆ ಅರ್ಜಿ ಸಲ್ಲಿಸಲಾಗುವುದು. ಸ.ನಂ. 195ರಲ್ಲಿರುವ ಧಾರ್ಮಿಕ ಕೇಂದ್ರ ಹಿಂದೂಗಳ ಸೊತ್ತೆಂದು ಘೋಷಿಸಬೇಕೆಂದು ಜಿಲ್ಲಾ ನ್ಯಾಯಾಲಯದಲ್ಲೂ ಅರ್ಜಿ ಸಲ್ಲಿಸಲು ಸಿದ್ಧತೆ ನಡೆದಿದೆ ಎಂದ ಅವರು, ನಮ್ಮ ವಿರೋಧ ಲೆಕ್ಕಿಸದೇ ಶಾಖಾದ್ರಿ ಕುಟುಂಬಕ್ಕೆ ಧಾರ್ಮಿಕ ಕೇಂದ್ರದ ಆಡಳಿತ ಜವಾಬ್ದಾರಿ ನೀಡಿ ಮುಜಾವರ್ ಅವರಿಗೆ ಅವಕಾಶ ಮಾಡಿಕೊಟ್ಟಲ್ಲಿ ಸಂಘದ ವತಿಯಿಂದ ಎ.20 ರೊಳಗೆ ದತ್ತಪೀಠ ಚಲೋ ಚಳವಳಿಗೆ ಕರೆ ನೀಡಲಾಗುವುದು. ಅಲ್ಲದೇ ಈ ಹೋರಾಟವನ್ನು 1992ರ ಅಯೋಧ್ಯೆ ಹೋರಾಟದ ಮಾದರಿಯಲ್ಲಿ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಬಜರಂಗದಳದ ತುಡುಕೂರು ಮಂಜು, ಯೋಗಿಶ್ ರಾಜ್ ಅರಸ್, ವಕೀಲ ರವೀಂದ್ರ ಮತ್ತಿತರರು ಉಪಸ್ಥಿತರಿದ್ದರು.

ಗೋ ಮಾಂಸ ಭಕ್ಷಣೆ ಮಾಡುವ ವ್ಯಕ್ತಿಗಳಿಂದ ದತ್ತ ಪಾದುಕೆಗಳಿಗೆ ಪೂಜೆ ಮಾಡುವುದನ್ನು ಹಿಂದೂಗಳು ಸಹಿಸಿಕೊಳ್ಳುವುದಿಲ್ಲ. ಇಂತವರು ನೀಡುವ ತೀರ್ಥ ಪ್ರಸಾದ ಸ್ವೀಕರಿಸಲು ಹಿಂದೂಗಳು ಸಿದ್ಧರಿಲ್ಲ. ಕಾಂಗ್ರೆಸ್ ಪಕ್ಷ ಮುಸಲ್ಮಾನರ ಓಟಿನ ಮೇಲೆ ಕಣ್ಣಿಟ್ಟು ನಾಸ್ತಿಕರನ್ನೊಳಗೊಂಡ ಸಮಿತಿಯಿಂದ ಇಂತಹ ವರದಿ ಸಿದ್ಧಪಡಿಸಿರುವುದು ಹಿಂದೂಗಳಿಗೆ ಬಗೆದ ದ್ರೋಹವಾಗಿದೆ. ಈ ಸಮಿತಿ ಕಾಂಗ್ರೆಸ್ ಪಕ್ಷದ ಕೃಪಾಪೋಶಿತ ನಾಟಕ ಮಂಡಳಿಯಾಗಿದೆ. ಈ ವರದಿ, ತೀರ್ಪನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

-ರಘು ಸಕಲೇಶಪುರ, ವಿಹಿಂಪ ರಾಜ್ಯ ಸಂಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News