'ಕಳೆದ ಬಾರಿ ಮುಖ ತೋರಿಸಿ ಹೋದವರು ಈಗ ಬಂದಿದ್ದೀರಿ': ಸಿ.ಟಿ.ರವಿಗೆ ಅಲ್ಲಂಪುರ ಗ್ರಾಮಸ್ಥರಿಂದ ತರಾಟೆ

Update: 2018-04-10 15:14 GMT

ಚಿಕ್ಕಮಗಳೂರು, ಎ.10: ಕ್ಷೇತ್ರದ ಶಾಸಕ ಸಿ.ಟಿ.ರವಿ ಅವರು ಸೋಮವಾರ ರಾತ್ರಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಗ್ರಾಮವೊಂದರಲ್ಲಿ ಮತದಾರರು ಕುಡಿಯುವ ನೀರಿನ ವಿಚಾರವಾಗಿ ಶಾಸಕರನ್ನು ತರಾಟೆಗೆ ತೆಗೆದುಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮಸ್ಥರು ಶಾಸಕರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಇದೀಗ ವೈರಲ್ ಆಗಿದೆ.

ಶಾಸಕ ರವಿ ಸೋಮವಾರ ತಮ್ಮ ಬೆಂಬಲಿಗರೊಂದಿಗೆ ಚಿಕ್ಕಮಗಳೂರು ಸಮೀಪದ ಅಲ್ಲಂಪುರ ಗ್ರಾಮಕ್ಕೆ ಮತಯಾಚನೆಗೆ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರ ಪೈಕಿ ಕೆಲ ಯುವಕರು, 'ಗ್ರಾಮದಲ್ಲಿ ವಾರಕ್ಕೊಮ್ಮೆ ನೀರು ಬರುತ್ತಿದೆ. ನೀರು ಪೂರೈಕೆಗೆ ಅಳವಡಿಸಲಾಗಿರುವ ಪೈಪ್‍ಗಳು ಒಡೆದು ಹೋಗಿದ್ದರೂ ದುರಸ್ತಿಗೆ ಕ್ರಮಕೈಗೊಂಡಿಲ್ಲ. ಇದರಿಂದಾಗಿ ನೀರು ಪೋಲಾಗಿ ನಿವಾಸಿಗಳಿಗೆ ಕುಡಿಯಲೂ ನೀರಿಲ್ಲದಂತಾಗಿದೆ. ಗ್ರಾಮದಲ್ಲಿ ಬಡವರು ಜೋಪಡಿಗಳಲ್ಲಿ ವಾಸಿಸುತ್ತಿದ್ದಾರೆ. ಆಶ್ರಯ ಮನೆಗಳನ್ನು ಉಳ್ಳವರಿಗೆ ನೀಡಲಾಗುತ್ತಿದೆ. ಕಳೆದ ಬಾರಿ ಮುಖ ತೋರಿಸಿ ಹೋದವರು ಈಗ ಚುನಾವಣೆ ಸಂದರ್ಭದಲ್ಲಿ ಓಟು ಕೇಳಲು ಬಂದಿದ್ದೀರಿ' ಎಂದು ಶಾಸಕರ ವಿರುದ್ಧ ಹರಿಹಾಯ್ದರು ಎನ್ನಲಾಗಿದೆ.

ಈ ವೇಳೆ ಶಾಸಕ ರವಿ ಕಕ್ಕಾಬಿಕ್ಕಿಯಾಗಿ, ಗ್ರಾಮಸ್ಥರ ತರಾಟೆಗೆ ಸಮಾಜಾಯಿಸಿ ಕೊಡಲು ಮುಂದಾದರಾದರೂ ಪ್ರಯೋಜನವಾಗಲಿಲ್ಲ. ಈ ವೇಳೆ ಶಾಸಕರು ತಮಾಷೆಗೆನ್ನುವಂತೆ ಪಕ್ಕದಲ್ಲಿದ್ದ ಓರ್ವ ಯುವಕನಿಗೆ ಹೊಡೆದರು. ಮತ್ತೊಬ್ಬನಿಗೆ ಹೊಡೆಯಲು ಕೈ ಎತ್ತಿ, ಯುವಕರಿಂದ ತಪ್ಪಿಸಿಕೊಂಡು ಹೋಗಲು ಅವರು ಪ್ರಯತ್ನಿಸಿದರಾದರೂ ಬೆನ್ನು ಬಿಡದ ಗ್ರಾಮಸ್ಥರು ಶಾಸಕರಿಗೆ ನೀರಿನ ಸಮಸ್ಯೆ ವಿವರಿಸಿ, ನೀರು ಪೋಲಾಗುತ್ತಿರುವುದನ್ನೂ ತೋರಿಸಿದರೆನ್ನಲಾಗಿದೆ. ಘಟನೆಯಿಂದ ವಿಚಲಿತರಾದ ರವಿ ಸ್ಪಲ್ಪ ಹೊತ್ತಿನ ಬಳಿಕ ಅಲ್ಲಂಪುರದಿಂದ ಕಾಲ್ಕಿತ್ತರು ಎಂದು ತಿಳಿದು ಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News