ಸೋಮವಾರಪೇಟೆ: ಜಲಪಾತದಲ್ಲಿ ಈಜಲು ತೆರಳಿ ನೀರು ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

Update: 2018-04-10 14:46 GMT

ಸೋಮವಾರಪೇಟೆ,ಎ.10: ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಈಜಲು ತೆರಳಿ ಸೋಮವಾರ ನೀರು ಪಾಲಾಗಿದ್ದ ಯುವಕನ ಮೃತದೇಹ ಮಂಗಳವಾರ ಪತ್ತೆಯಾಗಿದೆ.

ಸಮೀಪದ ಕೂಗೇಕೋಡಿ ಸಬ್ಬನಕೊಪ್ಪ ಗ್ರಾಮದ ಮಂಜುನಾಥ್ ಎಂಬವರ ಪುತ್ರ ಅಭಿಷೇಕ್(19), ಸೋಮವಾರ ಮಧ್ಯಾಹ್ನ ಜಲಪಾತದ ತಳ ಭಾಗದಲ್ಲಿ  ಈಜುವಾಗ ನೀರು ಪಾಲಾಗಿದ್ದು, ಸೋಮವಾರ ಸಂಜೆ ಸ್ಥಳೀಯ ಈಜುಗಾರರು ಮೃತದೇಹವನ್ನು ಹೊರತೆಗೆಯಲು ಪ್ರಯತ್ನಪಟ್ಟರು ಸಾಧ್ಯವಾಗಿರಲಿಲ್ಲ. ಮಂಗಳವಾರ ಬೆಳಿಗ್ಗೆ ಗುಂಡ್ಯದ ಪವರ್ ಪ್ರಾಜೆಕ್ಟ್‍ನ ಮುಳುಗು ತಜ್ಞ ದಯಾನಂದ್ ಶೋಧ ನಡೆಸಿ 30 ಅಡಿ ಆಳದಲ್ಲಿ ಕಲ್ಲುಗಳ ನಡುವೆ ಸಿಕ್ಕಿಕೊಂಡಿದ್ದ ಮೃತದೇಹವನ್ನು ತೆಗೆದಿದ್ದಾರೆ.

ಪಟ್ಟಣದ ಶವಾಗಾರದಲ್ಲಿ ಶವ ಪರೀಕ್ಷೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಬೆಂಗಳೂರಿನ ಕಾಫಿ ಕೆಫೆಯಲ್ಲಿ ನೌಕರಿಯಲ್ಲಿದ್ದ ಅಭಿಷೇಕ್, ಕಳೆದ ಗುರುವಾರ ಸಬ್ಬನಕೊಪ್ಪ ಗ್ರಾಮಕ್ಕೆ ದೇವರ ಪೂಜೆಗಾಗಿ ಆಗಮಿಸಿದ್ದ. ಎಪ್ರಿಲ್ 6 ಮತ್ತು 7ರಂದು ಪೂಜೆಯಲ್ಲಿ ಪಾಲ್ಗೊಂಡು, ತನ್ನ ಬಾಲ್ಯ ಸ್ನೇಹಿತರಾದ ಕಿರಣ್, ಸಂತೋಷ್, ಪುನೀತ್, ಸಂದರ್ಶ್, ಅವಿನಾಶ್ ಅವರೊಂದಿಗೆ ಸೋಮವಾರ ಮಲ್ಲಳ್ಳಿ ಜಲಪಾತ ವೀಕ್ಷಣೆಗೆ ತೆರಳಿದ್ದ. ಮಧ್ಯಾಹ್ನದ ಸುಮಾರಿಗೆ ಜಲಪಾತದ ತಳಭಾಗದಲ್ಲಿ ತೆರಳಿದ ತಂಡ, ಕಲ್ಲಿನ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾಗ, ಅಲ್ಪಸ್ವಲ್ಪ ಈಜು ಗೊತ್ತಿದ್ದ ಅಭಿಷೇಕ್ ಹೊಂಡಕ್ಕೆ ಇಳಿದ್ದಾನೆ. ಇದ್ದಕ್ಕಿದ್ದಂತೆ ನೀರಿನಲ್ಲಿ ಮುಳುಗಿದ್ದಾನೆ. ಈಜು ಬಾರದ ಸ್ನೇಹಿತರು ಪ್ಯಾಂಟನ್ನು ಕೊಟ್ಟು ಮೇಲೆಳೆಯುವ ಪ್ರಯತ್ನ ನಡೆಸಿದರೂ ವಿಫಲವಾಗಿತ್ತು ಎನ್ನಲಾಗಿದೆ. 

ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತ ಅಭಿಶೇಕ್ ತಂದೆ ತಾಯಿ, ತಂಗಿಯನ್ನು ಅಗಲಿದ್ದಾನೆ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News