ಓಟ್ ಬ್ಯಾಂಕ್‍ಗಾಗಿ ಮೋದಿ ಕನ್ನಡದಲ್ಲಿ ಮಾತನಾಡಿದ್ದಾರೆ: ಶಾಸಕ ಮಧುಬಂಗಾರಪ್ಪ

Update: 2018-04-10 16:11 GMT

ಮೈಸೂರು, ಎ.10: ಕರ್ನಾಟಕಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಓಟ್ ಬ್ಯಾಂಕ್‍ಗಾಗಿ ಕನ್ನಡದಲ್ಲಿ ಮಾತನಾಡುತ್ತಾರೆ. ಮಹಾದಾಯಿ ಕಳಸಾ ಬಂಡೂರಿ ಬಗ್ಗೆ ಚಕಾರ ಕೂಡ ಎತ್ತುವುದಿಲ್ಲ ಎಂದು ಜೆಡಿಎಸ್ ಯುವಘಟಕದ ಅಧ್ಯಕ್ಷ ಹಾಗೂ ಶಾಸಕ ಮಧುಬಂಗಾರಪ್ಪ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಬಂದ ಪ್ರಧಾನಿ ಬಸವಣ್ಣ,ಕುವೆಂಪು, ವಿಶ್ವೇಶ್ವರಯ್ಯ ಅವರ ಕುರಿತು ಮಾತನಾಡುತ್ತಾರೆ. ರೈತರ ಉಸಿರಾಗಿರುವ ಹಲವಾರು ದಿನಗಳಿಂದ ಹೋರಾಟ ಮಾಡಿಕೊಂಡು ಬರುತ್ತಿರುವ ಮಹದಾಯಿ ನೀರಾವರಿ ಯೋಜನೆ ಬಗ್ಗೆ ಒಂದೇ ಒಂದು ಮಾತನಾಡುವುದಿಲ್ಲ, ಇಂತಹ ಪ್ರಧಾನಿಗೆ ನಾವು ಗೌರವ ಕೊಡಬೇಕೆ ಎಂದು ಪ್ರಶ್ನಿಸಿದರು.

ಕನ್ನಡಿಗರ ಮೇಲಿನ ಪ್ರೀತಿಯಿಂದ ಇವರು ಕನ್ನಡದಲ್ಲಿ ಮಾತನಾಡಿಲ್ಲ, ಕೇವಲ ಓಟ್ ಬ್ಯಾಂಕ್‍ಗಾಗಿ ಕನ್ನಡಿಗರನ್ನು ಓಲೈಸಿಕೊಳ್ಳುವ ನಾಟಕವಾಡಿದ್ದಾರೆ. ಕರ್ನಾಟಕದ ಅಭಿವೃದ್ದಿ ಬಗ್ಗೆ ಎಲ್ಲಿಯೂ ಮಾತನಾಡದ ಇವರು, ತಮ್ಮ ಭಾಷಣದುದ್ದಕ್ಕೂ ವಿರೋಧ ಪಕ್ಷಗಳನ್ನು ಟೀಕಿಸುವುದನ್ನೇ ಚಾಳಿ ಮಾಡಿಕೊಂಡರು ಎಂದು ಕಿಡಿಕಾರಿದರು.

ಮಂಗಳೂರು ಸೇರಿದಂತೆ ಹಲವು ಕಡೆ ಕೋಮು ಗಲಭೆಯಲ್ಲಿ ಅಮಾಯಕರು ಸಾವನ್ನಪ್ಪಿದರು. ಕೇವಲ ಹಿಂದೂಗಳ ಕುಟುಂಬದವರನ್ನು ಇವರು ಭೇಟಿ ಮಾಡಿ ಸಂತೈಸಿದರು. ಮುಸ್ಲಿಮರು ಸಾವೀಗೀಡಾದ ಮನೆಗಳಿಗೆ ಭೇಟಿ ನೀಡುವುದಿರಲಿ ಸೌಜನ್ಯಕ್ಕೂ ಅವರ ಬಗ್ಗೆ ಮಾತನಾಡುವುದಿಲ್ಲ, ಹಾಗಿದ್ದರೆ ಹಿಂದೂಗಳಿಗೆ ಮಾತ್ರ ಪ್ರಧಾನಿಯೇ? ಬೇರೆ ಯಾರಿಗೂ ಇವರು ಪ್ರಧಾನಿಗಳಲ್ಲವೇ ಎಂದು ಪ್ರಶ್ನಿಸಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕರ್ನಾಟಕವನ್ನು ಕೊಂಡುಕೊಂಡವರಂತೆ ಮಾತನಾಡುತ್ತಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ ನಂತರ ಮಹಾದಾಯಿ ಸಮಸ್ಯೆ ಬಗೆಹರಿಸುವುದಾಗಿ ಹೇಳುತ್ತಾರೆ. ಹಾಗೆ ಹೇಳಲು ಇವರಿಗೆ ನಾಚಿಕೆಯಾಗಬೇಕು ಎಂದು ಹರಿಹಾಯ್ದರು.

ಕಾಂಗ್ರೆಸ್ ಟಿಕೆಟ್ ಘೋಷಣೆ ನಂತರ ಪತನ: ಕಾಂಗ್ರೆಸ್ ಪಕ್ಷದಲ್ಲಿ ಒಳ ಬೇಗುದಿ ಹೆಚ್ಚಾಗಿದೆ. ಪಕ್ಷದ ಟಿಕೆಟ್ ಘೋಷಣೆಯಾಗುತಿದ್ದಂತೆ ಕಾಂಗ್ರೆಸ್ ಸರ್ವನಾಶವಾಗಲಿದೆ. ಕಾಂಗ್ರೆಸ್ ಮುಗಿಸಲು ಹೊರಗಿನ ವಿರೋಧಿಗಳು ಬೇಕಿಲ್ಲ. ಅವರ ಒಳಗೆಯೇ ಆಕ್ರೋಶದ ಜ್ವಾಲೆ ಕುದಿಯುತ್ತಿದೆ. ಸ್ವಲ್ಪ ದಿನಗಳಲ್ಲೇ ಹೊತ್ತಿ ಹುರಿಯಲಿದೆ ಎಂದು ಹೇಳಿದರು.

ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ಗೆಲುವು: ನಾವು ಇನ್ನೊಬ್ಬರನ್ನು ಸೋಲಿಸಲು ಪ್ರಯತ್ನಿಸುವುದಿಲ್ಲ, ನಮ್ಮ ಪಕ್ಷದ ಅಭ್ಯರ್ಥಿ ಗೆಲವಷ್ಟೇ ನಮಗೆ ಮುಖ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದು ನಮ್ಮ ಉದ್ದೇಶ ಅಲ್ಲ, ನಮ್ಮ ಪಕ್ಷದ ಅಭ್ಯರ್ಥಿ ಜಿ.ಟಿ.ದೇವೇಗೌಡರನ್ನು ಗೆಲ್ಲಿಸಲಷ್ಟೇ ನಾವು ಕೆಲಸ ಮಾಡುತಿದ್ದೇವೆ. ಹಾಗೆ ಜಿಲ್ಲೆಯಲ್ಲಿ ಜೆಡಿಎಸ್ ಹೆಚ್ಚು ಸ್ಥಾನವನ್ನು ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿರೋಧ ಪಕ್ಷದಲ್ಲಿ ಕೂರುತ್ತೇವೆ: ಈಗಾಗಲೇ 126 ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಇನ್ನು ಮೂರು ಅಥವಾ ನಾಲ್ಕು ದಿನಗಳಲ್ಲಿ ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಡಳಿತವನ್ನು ಜನ ಮೆಚ್ಚಿದ್ದು, ಹೋದ ಕಡೆಯಲೆಲ್ಲ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ಜನ ತಿರಸ್ಕರಿಸಲು ಚಿಂತಿಸಿದ್ದಾರೆ. ಪ್ರಾದೇಶಿಕ ಪಕ್ಷವನ್ನು ಬಯಸುತ್ತಿದ್ದಾರೆ. ಮೊದಲ ಪಟ್ಟಿ ಬಿಡುಗೆ ಮಾಡಿರುವ 126 ಕ್ಷೇತ್ರಗಳ ಪೈಕಿ 85 ರಿಂದ 90 ಕಡೆ ನಾವು ಜಯಗಳಿಸಲಿದ್ದೇವೆ. ಒಂದು ವೇಳೆ ನಮಗೆ ಸರಕಾರ ರಚಿಸಲು ಅವಕಾಶ ದೊರಕದಿದ್ದರೆ ವಿರೋಧ ಪಕ್ಷದಲ್ಲಿ ಕೂರುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿಯವರು ವಿರೋಧ ಪಕ್ಷದಲ್ಲಿ ಕೂರಲು ಸಿದ್ದರಿದ್ದಾರಾ ಎಂದು ಹೇಳಿದರು.

ಶ್ರೀನಿವಾಸಪ್ರಸಾದ್ ಜೊತೆ ಸೌಜನ್ಯಯುತ ಭೇಟಿ: ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಮತ್ತು ನನ್ನ ಭೇಟಿ ಸೌಜನ್ಯಯುತವಾದುದು. ಅವರು ಹಿರಿಯರು ಅವರ ಬಗ್ಗೆ ನನಗೆ ಅಪಾರ ಗೌರವಿದೆ. ಅವರು ಸಚಿವರಾಗಿದ್ದ ವೇಳೆ ನನ್ನ ಕ್ಷೇತ್ರದಲ್ಲಿ ಬಗರ್ ಹುಕುಂ ಸಂಬಂಧ ಸಹಕಾರ ನೀಡಿದ್ದಾರೆ. ಜೊತೆಗೆ ನನಗೆ ಮಾರ್ಗದರ್ಶನವನ್ನು ನೀಡಿದ್ದಾರೆ. ಅವರು ಯಾವ ಪಕ್ಷದಲ್ಲಿದ್ದರೂ ಅವರ ಬಗ್ಗೆ ಗೌರವ ಹೊಂದಿದ್ದೇನೆ. ಹಾಗಾಗಿ ಅವರನ್ನು ಭೇಟಿ ಮಾಡಿದ್ದೇನೆ ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ ಎಂದು ಮಧುಬಂಗಾರಪ್ಪ ತಿಳಿಸಿದರು.

ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ನಗರಪಾಲಿಕೆ ಸದಸ್ಯ ದೇವರಾಜು ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಗರಾಧ್ಯಕ್ಷ ಕೆ.ಟಿ.ಚಲುವೇಗೌಡ, ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಜೀಜ್ ಅಬ್ದುಲ್ಲಾ, ಕೆ.ಆರ್.ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕೆ.ವಿ.ಮಲ್ಲೇಶ್, ಜೆಡಿಎಸ್ ಮುಖಂಡರಾದ ಚಂದ್ರಶೇಖರ್, ಲೋಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾಂಗ್ರೆಸ್ ನವರಿಗೆ ತಾಕತ್ತಿದ್ದರೆ ದಲಿತ, ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಲಿ

ಜೆಡಿಎಸ್ ನವರು ದಲಿತರನ್ನು ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಲಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದ ಮಧುಬಂಗಾರಪ್ಪ, ಈಗಾಗಲೇ ಜೆಡಿಎಸ್ ಅಧಿಕಾರಕ್ಕೆ ಬಂದರೆ ದಲಿತರು ಹಾಗು ಮುಸ್ಲಿಮರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿದೆ. ಇವರಿಗೆ ತಾಕತ್ತಿದ್ದರೆ ದಲಿತರನ್ನು ಅಥವಾ ಮುಸ್ಲಿಮರನ್ನು ಮುಖ್ಯಮಂತ್ರಿ ಮಾಡುತ್ತೇವೆ ಎಂದು ಘೋಷಿಸಿಲಿ ನಂತರ ಜೆಡಿಎಸ್ ಪಕ್ಷದ ಬಗ್ಗೆ ಮಾತನಾಡಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News