×
Ad

ಚಿಕ್ಕಮಗಳೂರು: ಸರ್ವೇ ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ; ಆರೋಪ

Update: 2018-04-10 22:03 IST

ಚಿಕ್ಕಮಗಳೂರು, ಎ.10: ನಗರದ ತಹಶೀಲ್ದಾರ್ ಕಚೇರಿಯಲ್ಲಿರುವ ಸರ್ವೇ ವಿಭಾಗದ ಅಧಿಕಾರಿಗಳು ಹಾಗೂ ಸರ್ವೇಯರ್ ಜಮೀನಿನ ಸರ್ವೇ ಮಾಡಿ ನಕ್ಷೆ ತಯಾರಿಸಿದ್ದರೂ ಸರ್ವೇ ರಿಪೋರ್ಟ್ ನೀಡಲು ಲಂಚಕ್ಕಾಗಿ ಸತಾಯಿಸುತ್ತಿದ್ದಾರೆಂದು ಆರೋಪಿಸಿ ತಾಲೂಕಿನ ಮಲ್ಲೇನಹಳ್ಳಿ ನಿವಾಸಿ ಜಬ್ಬಾರ್ ಸಾಬ್ ಎಂಬವರು ಸರ್ವೇ ವಿಭಾಗದ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದು ಬೆವರಿಳಿಸಿದ ಘಟನೆ ಮಂಗಳವಾರ ತಾಲೂಕು ಕಚೇರಿಯಲ್ಲಿ ನಡೆಯಿತು.

ತಾಲೂಕಿನ ಮಲ್ಲೇನಹಳ್ಳಿ ಸಮೀಪದ ದಿಂಡಿಗ ಗ್ರಾಮದ ನಿವಾಸಿ ಝಬ್ಬಾರ್ ಸಾಬ್ ಸರ್ವೇ ನಂಬರ್ 200ರಲ್ಲಿ 5 ಎಕರೆ ಜಮೀನು ಹೊಂದಿದ್ದು, ಇದರಲ್ಲಿ 2 ಎಕರೆ ಜಾಗವನ್ನು ಬೆಂಗಳೂರು ಮೂಲದ ದೀಪಕ್ ಎಂಬವರಿಗೆ ಮಾರಾಟ  ಮಾಡಲು ಉದ್ದೇಶಿಸಿದ್ದರು. ಇದಕ್ಕಾಗಿ ಜಾಗವನ್ನು ಸರ್ವೇ ಮಾಡಿಸಲು ಚಿಕ್ಕಮಗಳೂರು ತಾಲೂಕು ಕಚೇರಿಯ ಸರ್ವೇ ವಿಭಾಗದ ಅಧಿಕಾರಿಗಳಿಗೆ ಜಬ್ಬಾರ್ ಸಾಬ್ ಅರ್ಜಿ ಸಲ್ಲಿಸಿದ್ದರು. ಕಳೆದ ಆರು ತಿಂಗಳ ಹಿಂದೆ ಸರ್ವೇಯರ್ ರಮೇಶ್ ಎಂಬವರು ಮಲ್ಲೇನಹಳ್ಳಿ ಗ್ರಾಮದ ಸರ್ವೇ ನಂಬರ್ 200ರಲ್ಲಿರುವ ಜಾಗವನ್ನು ಸರ್ವೇ ಮಾಡಿ ಶೀಘ್ರ ಸರ್ವೇ ರಿಪೋರ್ಟ್ ಹಾಗೂ ನಕ್ಷೆಯನ್ನು ಕೊಡುವುದಾಗಿ ಹೇಳಿದ್ದರೆಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಮಂಗಳವಾರ ತಾಲೂಕು ಕಚೇರಿಗೆ ಆಗಮಿಸಿದ್ದ ಜಬ್ಬಾರ್ ಸಾಬ್, ಸರ್ವೇ ರಿಪೋರ್ಟ್ ಕೇಳಿದಾಗ ಸಿಬ್ಬಂದಿ ಸರ್ವೇ ರಿಪೋಟ್ ಅಪ್‍ಲೋಡ್ ಆಗಿಲ್ಲ ಎಂದು ಉತ್ತರ ನೀಡಿದ್ದಾರೆ. ಇದರಿಂದ ಕುಪಿತರಾದ ಅವರು, ಅಧಿಕಾರಿ ಹಾಗೂ ಸಿಬ್ಬಂದಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ವೇ ದಾಖಲಾತಿಗಳನ್ನು ಕೊಡಲು ಆಗುವುದಿಲ್ಲ ಎಂದಾದರೆ ಲಿಖಿತ ರೂಪದಲ್ಲಿ ಬರೆದುಕೊಡಿ, ಇಲ್ಲವೇ ಹಣ ಹಿಂದಿರುಗಿಸಿ ಎಂದು ಪಟ್ಟು ಹಿಡಿದಿದ್ದರು. ಸರ್ವೇ ಸಂದರ್ಭದಲ್ಲಿ ಸರ್ವೇಯರ್ ರಮೇಶ್ ಸರ್ವೇ ಮಾಡಲು 1 ಗುಂಟೆಗೆ 1 ಸಾವಿರ ರೂ. ನೀಡಬೇಕೆಂದು ಕೇಳಿದ್ದು, ಸರಕಾರ ನಿಗದಿ ಪಡಿಸಿದ ಸರ್ವೇ ಶುಲ್ಕಕ್ಕಿಂತ ಹೆಚ್ಚು ಹಣ ಪಾವತಿಸಿದ್ದೇನೆ. ಅಲ್ಲದೇ ರಮೇಶ್ ಅವರಿಗೆ 17 ಸಾವಿರ ರೂ. ಲಂಚವನ್ನೂ ನೀಡಿದ್ದೇನೆ. ಆದರೆ 6 ತಿಂಗಳಾದರೂ ಸರ್ವೇ ರಿಪೋರ್ಟ್ ಅನ್ನು ಆನ್‍ಲೈನ್‍ಗೆ ಅಪಲೋಡ್ ಮಾಡಿಲ್ಲ ಎಂದು ಪ್ರತಿದಿನವೂ ತಾಲೂಕು ಕಚೇರಿಗೆ ಅಲೆದಾಡಸುತ್ತಿದ್ದಾರೆಂದು ಜಬ್ಬಾರ್ ಸಾಬ್ ಸರ್ವೇ ವಿಭಾಗದ ಕಚೇರಿಯಲ್ಲಿ ರಮೇಶ್ ಹಾಗೂ ಸ್ವಾಮಿ ಎಂಬವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಕಚೇರಿಯಲ್ಲಿದ್ದ ಸರ್ವೇಯರ್ ಮೌನಕ್ಕೆ ಶರಣಾಗಿದ್ದರೆ, ಸಿಬ್ಬಂದಿ ಸ್ವಾಮಿ, ಸರ್ವೇ ದಾಖಲೆಗಳನ್ನು ಅಪ್‍ಲೋಡ್ ಮಾಡಲು ವಿಳಂಬವಾಗಿದೆ, ಶೀಘ್ರ ಮಾಡುವುದಾಗಿ ಸಮಜಾಯಿಸಿ ನೀಡುತ್ತಿದ್ದ ದೃಶ್ಯ ಕಂಡುಬಂತು.

ಜಾಗದ ಸರ್ವೇ ಮಾಡಿ 6 ತಿಂಗಳು ಕಳೆದಿದೆ. 17 ಸಾವಿರ ಹಣವನ್ನೂ ನೀಡಿದ್ದೇನೆ. ಆದರೆ ಸರ್ವೇ ವಿಭಾಗದ ಉಪನಿರ್ಧೇಶಕ ಸಂತೋಷ್ ಹಾಗೂ ಸರ್ವೇಯರ್ ರಮೇಶ್, ಸಿಬ್ಬಂದಿ ಸ್ವಾಮಿ ಎಂಬವರು ವಿನಾಕಾರಣ ಸರ್ವೇ ದಾಖಲೆಗಳನ್ನು ಆನ್‍ಲೈನ್‍ಗೆ ಅಪ್‍ಲೋಡ್ ಮಾಡಲು ವಿಳಂಬ ಮಾಡುತ್ತಿದ್ದಾರೆ. ವಿಚಾರಿಸಿದರೆ ನಾಳೆ, ನಾಡಿದ್ದು ಬನ್ನಿ ಎನ್ನುತ್ತಿದ್ದಾರೆ. ಇನ್ನೂ ಹೆಚ್ಚು ಲಂಚ ಪಡೆಯುವ ಸಲುವಾಗಿ ಈ ರೀತಿ ವಿಳಂಬ ಮಾಡುತ್ತಿದ್ದಾರೆ. ಇನ್ನು 10 ದಿನಗಳ ಒಳಗೆ ತನಗೆ ಈ ದಾಖಲೆಗಳು ಬೇಕು. ಮಾರಾಟ ಮಾಡಿದ ಜಮೀನಿನ ಖಾತೆ ಮಾಡಿಸಲಿ ಸರ್ವೇ ದಾಖಲೆಗಳ ಅಗತ್ಯವಿದೆ. ತಾನು ಹೃದಯ ಸಂಬಂಧಿ ಕಾಯಿಲೆ ಇದ್ದು, ಹೆಚ್ಚು ನಡೆದಾಡಲು ಸಾಧ್ಯವಿಲ್ಲ. ಅಧಿಕಾರಿಗಳು 10 ದಿನಗಳ ಒಳಗೆ ದಾಖಲೆ ನೀಡದಿದ್ದಲ್ಲಿ ಸರ್ವೇ ಸಿಬ್ಬಂದಿ ಲಂಚಕ್ಕೆ ಬೇಡಿಕೆ ಇಟ್ಟಿರುವ ವಾಯ್ಸ್ ರೆಕಾರ್ಡ್‍ನೊಂದಿಗೆ ಲೋಕಾಯುಕ್ತರಿಗೆ ದೂರ ನೀಡುವುದಾಗಿ ಜಬ್ಬಾರ್ ಸಾಬ್ ಈ ವೇಳೆ ವಾರ್ತಾಭಾರತಿ ಬಳಿ ಅಳಲು ತೋಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News