ಚಿಕ್ಕಮಗಳೂರು: ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಗತ್ಯ ಕ್ರಮವಹಿಸಲು ಅಧಿಕಾರಿಗಳಿಗೆ ಡಿಸಿ ಸೂಚನೆ

Update: 2018-04-10 16:38 GMT

ಚಿಕ್ಕಮಗಳೂರು, ಎ.10: ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗದಂತೆ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರಿಗೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬೇಸಿಗೆ ಆರಂಭವಾಗಿದ್ದು, ಈಗಾಗಲೇ ಕಡೂರು, ತರೀಕೆರೆ ತಾಲೂಕಿನಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ ಎಂದು ದೂರುಗಳು ಬರುತ್ತಿವೆ. ದೂರುಗಳಿಗೆ ಆಸ್ಪದ ನೀಡದೆ ಕ್ರಮಕೈಗೊಳ್ಳಬೇಕು. ಚುನಾವಣಾ ನೀತಿ ಸಂಹಿತೆ ಕುಡಿಯುವ ನೀರಿಗೆ ಅಡ್ಡಿಯಾಗುವುದಿಲ್ಲ ಎಂದ ಅವರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ತಾತ್ಕಾಲಿಕವಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮವಹಿಸಬೇಕು ಎಂದ ಅವರು ಈಗಾಗಲೇ ಜಿಲ್ಲೆಯ ಹಲವು ಕಡೆ ಮಳೆಯಾಗಿದ್ದು, ಸಮಸ್ಯೆ ಕಂಡುಬರುತ್ತಿಲ್ಲ, ಕುಡಿಯುವ ನೀರಿಗೆ ಸಮಸ್ಯೆ ಉದ್ಬವಿಸಿರುವ ಕಡೆ ಕೊಳವೆ ಬಾವಿ ಕೊರೆಯುವುದರ ಮೂಲಕ ಶಾಶ್ವತ ಪರಿಹಾರ ಕಲ್ಪಿಸುವಂತೆ ಹೇಳಿದರು.

ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಪಕ್ಷದ ಬ್ಯಾನರ್ ಅಳವಡಿಸಿಕೊಂಡು ಟ್ಯಾಂಕರ್ ಗಳಲ್ಲಿ ಇದುವರೆಗೆ ನೀರು ಸರಬರಾಜು ಮಾಡುತ್ತಿದ್ದರು, ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಬ್ಯಾನರ್ ತೆಗೆದು ನೀರು ಸರಬರಾಜು ಮಾಡುತ್ತಿರುವ ದೂರುಗಳು ಬರುತ್ತಿವೆ. ಈ ರೀತಿ ನೀರು ಸರಬರಾಜು ಮಾಡುತ್ತಿರುವುದು ಕಂಡುಬಂದರೆ ಕ್ರಮ ಕೈಗೊಳ್ಳಬೇಕು. ಅಲ್ಲದೇ ಈ ಅಕ್ರಮ ತಡೆಗೆ ನೀರು ಪೂರೈಸುವ ಟ್ಯಾಂಕರ್ ಗಳಿಗೆ ಜಿಪಿಎಸ್ ಅಳವಡಿಸಿ ನೀರಿನ ದುರ್ಬಳಕೆಗೆ ಕ್ರಮ ವಹಿಸಿ ಎಂದು ತಿಳಿಸಿದರು.

ಅಧಿಕಾರಿಗಳು ಜವಬ್ದಾರಿಯಿಂದ ಕೆಲಸ ನಿರ್ವಹಿಸಿದರೆ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ  ಈಗಾಗಲೇ ನೀತಿ ಸಂಹಿತೆಗೆ ಮುಂಚೆ ಟೆಂಡರ್ ಪ್ರಕ್ರಿಯೆಗಳು ಮುಗಿದು ಕಾಮಗಾರಿಗಳು ಪ್ರಾರಂಭವಾಗಿದ್ದರೆ ಶೀಘ್ರವಾಗಿ ಕಾಮಗಾರಿ ಮುಗಿಸುವಂತೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ, ಅಪರ ಜಿಲ್ಲಾಧಿಕಾರಿ ಕುಮಾರ, ನಗರಸಭೆ ಆಯುಕ್ತೆ ತುಷಾರಾಮಣಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News