ಚುನಾವಣೆ ಬಳಿಕ ಪ್ರಧಾನಮಂತ್ರಿಗಳ ಸೂಚನೆಯಂತೆ ದಲಿತರ ಮನೆಗಳಲ್ಲಿ ವಾಸ್ತವ್ಯ: ಸಂಸದ ಜಿ.ಎಂ. ಸಿದ್ದೇಶ್ವರ್

Update: 2018-04-10 16:43 GMT

ದಾವಣಗೆರೆ,ಎ.10: ಚುನಾವಣೆ ಬಳಿಕ ಪ್ರಧಾನಮಂತ್ರಿಗಳ ಸೂಚನೆಯಂತೆ ದಲಿತರ ಮನೆಗಳಲ್ಲಿ ವಾಸ್ತವ್ಯ ಮಾಡುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ್ ತಿಳಿಸಿದರು.

ಮಂಗಳವಾರ ತಾಲೂಕಿನ ಕೈದಾಳೆ ಗ್ರಾಮದಲ್ಲಿ ಮುಷ್ಟಿಧಾನ್ಯ ಸಂಗ್ರಹ ಅಭಿಯಾನ ಸಮಾರೋಪ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪ್ರಧಾನಿ ಮೋದಿಯವರ ಸೂಚನೆಯಂತೆ ಐದು ಸಾವಿರ ಜನಸಂಖ್ಯೆ ಇರುವ ಗ್ರಾಮಗಳಲ್ಲಿ ಸಂಸದರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ದಲಿತರ ಮನೆಗಳಲ್ಲಿ ವಾಸ್ತವ್ಯ ಮಾಡಲಿದ್ದಾರೆ. ನಾನು ಕೂಡ ಜಿಲ್ಲೆಯಲ್ಲಿ ಕನಿಷ್ಟ ಐದು ಸಾವಿರ ಜನಸಂಖ್ಯೆ ಇರುವ ದಲಿತರ ಗ್ರಾಮಗಳಲ್ಲಿ ವಾಸ್ತವ್ಯ ಮಾಡಲು ತೀರ್ಮಾನಿಸಿದ್ದೇನೆ ಎಂದರು.

ಕಳೆದ ಫೆ. 27ರಂದು ಪ್ರಧಾನಿ ಮೋದಿ ದಾವಣಗೆರೆಯಲ್ಲಿ ಚಾಲನೆ ನೀಡಿದ್ದ ವೇಳೆ ಮುಷ್ಟಿ ಧಾನ್ಯ ಸಂಗ್ರಹ ಅಭಿಯಾನಕ್ಕೆ ರಾಜ್ಯಾದ್ಯಂತ ಅಭೂತ ಪೂರ್ವ ಬೆಂಬಲ ವ್ಯಕ್ತವಾಗಿದೆ. ವಿಶೇಷವಾಗಿ ರೈತರು ಈ ಅಭಿಯಾನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಅಭಿಯಾನದ ಉದ್ದಕ್ಕೂ ಸಹಕಾರ ನೀಡಿದ್ದಾರೆ ಎಂದರು.

ದೇಶದಲ್ಲಿಯೆ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯಗಳಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ರೈತರನ್ನು ಇಂಥಹ ಪರಿಸ್ಥಿತಿಯಿಂದ ಹೊರತರುವ ದೃಷ್ಟಿಯಿಂದ ಅವರ ಆದಾಯ ದ್ವಿಗುಣಗೊಳಿಸುವ ಹಲವಾರು ಕಾರ್ಯಕ್ರಮ ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಮ್ಮಿಕೊಳ್ಳಲಾಗಿದೆ. ರೈತರೊಂದಿಗೆ ಕೇಂದ್ರ ಸರ್ಕಾರ ಸದಾ ಇರುತ್ತದೆ. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ. ಈ ಸಂದರ್ಭ ಮತ್ತಷ್ಟು ರೈತ ಪರವಾದ ಕಾರ್ಯಕ್ರಮ ಜಾರಿಗೆ ತರಲಾಗುವುದು ಎಂದ ಅವರು ಹೇಳಿದರು.

ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್ ಮಾತನಾಡಿ, ಜಿಲ್ಲೆಯಲ್ಲಿ ಹತ್ತಾರು ರೈತರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡರೂ ಶಾಸಕರು, ಸಚಿವರು ಅವರ ಮನೆಗೆ ಹೋಗಿ ಸಾಂತ್ವನ ಹೇಳುವ ಕೆಲಸ ಮಾಡಲಿಲ್ಲ ಎಂದು ಅವರು ಆರೋಪಿಸಿದರು.

ಭದ್ರಾ ಜಲಾಶಯದಲ್ಲಿ ನೀರು ಇದ್ದರೂ ನಾಲ್ಕು ಬೆಳೆಗೆ ನೀರು ಕೊಡಲಿಲ್ಲ. ಮೈಮರೆತು ಇಂಥಹ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಜನರು ಮತ್ತೊಮ್ಮೆ ಸಂಕಷ್ಟಕ್ಕೆ ಗುರಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಮುಖಂಡ ಎಚ್.ಎಸ್. ನಾಗರಾಜ್ ಮಾತನಾಡಿ, ಕಳೆದ ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರದ ಶೋಷಣೆಗೆ ಗುರಿಯಾಗಿರುವ ರೈತರು ಬದಲಾವಣೆ ಬಯಸಿದ್ದಾರೆ. ಇದು ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸೂಕ್ತ ಸಂದರ್ಭ ಎಂದರು.

ರೈತ ಮುಖಂಡ ಕೊಳೆನಹಳ್ಳಿ ಸತೀಶ್ ಮಾತನಾಡಿ, ಭದ್ರಾ ಜಲಾಶಯದಲ್ಲಿ ಇನ್ನು ಕೇವಲ 15 ದಿನಗಳಿಗೆ ಆಗುವಷ್ಟು ನೀರು ಮಾತ್ರ ಉಳಿದಿದೆ. ಆದರೆ, ಕೆಳಭಾಗದ ಬತ್ತದ ಬೆಳೆಗಾರರಿಗೆ ಇನ್ನೂ 30 ರಿಂದ 40 ದಿನಗಳ ಕಾಲ ನೀರು ಬೇಕಾಗಿದೆ. ಕೆಳಭಾಗದ ಬತ್ತ ಬೆಳೆಗಾರರಿಗೆ ನೀರು ಬಿಡಿ ಎಂದು ಅನೇಕ ಹೋರಾಟ ಮಾಡಿದರೂ ಆಡಳಿತ ಪಕ್ಷದ ಯಾರೂ ಸರಿಯಾಗಿ ಸ್ಪಂದಿಸಲಿಲ್ಲ. ಮುಂದಿನ 15 ದಿನಗಳಲ್ಲಿ ರೈತರು ಮತ್ತೆ ಬೀದಿಗೆ ಇಳಿಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಉಸ್ತುವಾರಿ ಶ್ರೀಪಾದ್ ಹೆಗಡೆ, ಮುಖಂಡರಾದ ಚನ್ನಬಸವಣ್ಣ, ರುದ್ರೇಗೌಡ, ಎ.ಬಿ. ಹನುಮಂತಪ್ಪ, ವೀರಭದ್ರಪ್ಪ, ಹೂವಿನಮಡು ಹಾಲಪ್ಪ, ಎಲ್.ಡಿ. ಗೋಣೆಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಮ್ಮ ಇದ್ದರು.

ಬಿಜೆಪಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ?
ದಾವಣಗೆರೆ ತಾಲೂಕಿನ ಕೈದಾಳೆ ಗ್ರಾಮದಲ್ಲಿ ಮಂಗಳವಾರ ನಡೆದ ಮುಷ್ಠಿಧಾನ್ಯ ಸಂಗ್ರಹ ಅಭಿಯಾನ ಸಮಾರೋಪದಲ್ಲಿ ಗ್ರಾಮಸ್ಥರಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಬಿಜೆಪಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದೆ ಎನ್ನಲಾಗಿದೆ.

ಕಾರ್ಯಕ್ರಮಕ್ಕೆ ಮಾತ್ರ ಪರವಾನಗಿ ಪಡೆಯಲಾಗಿದ್ದು, ಆದರೆ, ಪರವಾನಗಿ ಇಲ್ಲದೆ ಊಟದ ವ್ಯವಸ್ಥೆ ಮಾಡಿದ್ದು, ಸ್ವತ ಸಂಸದ ಜಿ.ಎಂ. ಸಿದ್ದೇಶ್ವರ್ ಹಾಗೂ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಗ್ರಾಮಸ್ಥರಿಗೆ ಊಟ ಬಡಿಸಿದ್ದಾರೆ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಆನಂದ ಗುತ್ತಪ್ಪಲ್ಲಿ ತಿಳಿಸಿದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News