ದಾವಣಗೆರೆ: ಮದ್ಯ ಸೇವಿಸಲು ಹಣ ಕೊಡುವಂತೆ ಪೀಡಿಸುತ್ತಿದ್ದ ಪತಿಯ ಕತ್ತು ಸೀಳಿ ಕೊಲೆಗೈದ ಪತ್ನಿ
ದಾವಣಗೆರೆ,ಎ.10: ಮದ್ಯ ಸೇವಿಸಲು ಹಣ ಕೊಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ ಪತಿಯನ್ನು ಕುಡುಗೋಲಿನಿಂದ ಕತ್ತು ಸೀಳಿ ಕೊಲೆ ಮಾಡಿ ತಿಪ್ಪೆ ಗುಂಡಿಯಲ್ಲಿ ಮುಚ್ಚಿದ್ದ ದಾರುಣ ಘಟನೆ ಹೊನ್ನಾಳಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಎ. 8ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮದ್ಯವ್ಯಸನಿ ನರಸಿಂಹಪ್ಪ (45) ಕೊಲೆಯಾದ ವ್ಯಕ್ತಿ. ಈತನ ಪತ್ನಿ ರೇಣುಕಮ್ಮ (27) ಎಂಬಾಕೆಗೆ ನಿತ್ಯವೂ ಮದ್ಯ ಸೇವಿಸಲು ಹಣ ನೀಡುವಂತೆ ನರಸಿಂಹಪ್ಪ ಪ್ರತಿದಿನ ಕಾಟ ನೀಡುತ್ತಿದ್ದ. ಇದರಿಂದ ರೋಸಿ ಹೋಗಿದ್ದ ಪತ್ನಿ ರೇಣುಕಮ್ಮ ಕೊಲೆ ಮಾಡಿರುವುದಾಗಿ ಪೊಲೀಸರ ಮುಂದೆ ತಿಳಿಸಿದ್ದಾಳೆ.
ರೇಣುಕಮ್ಮ ನರಸಿಂಹಪ್ಪನ ಮೂರನೇ ಪತ್ನಿ ಎನ್ನಲಾಗಿದ್ದು, ಎಂದಿನಂತೆ ಮದ್ಯ ಸೇವಿಸಲು ಹಣ ಕೊಡುವಂತೆ ಎ. 8 ರಂದು ಹೆಂಡತಿಗೆ ನರಸಿಂಹಪ್ಪ ಪೀಡಿಸಿದ್ದಾನೆ. ಇದರಿಂದ ಬೇಸತ್ತ ಪತ್ನಿ ರೇಣುಕಮ್ಮ ಕುಡುಗೋಲಿನಿಂದ ನರಸಿಂಹಪ್ಪನ ಶಿರವನ್ನು ಸೀಳಿ ಹತ್ಯೆ ಮಾಡಿದ್ದಾಳೆ ಎನ್ನಲಾಗಿದೆ.
ನಂತರ ಯಾರಿಗೂ ಅನುಮಾನ ಬಾರದಂತೆ ತಿಪ್ಪೆಗುಂಡಿಯಲ್ಲಿ ಮುಚ್ಚಿಟ್ಟು, ಪತಿ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರನ್ನು ನಂಬಿಸಿದ್ದಾಳೆ.
ಇಂದು ಸ್ಥಳೀಯರು ತಿಪ್ಪೇಗುಂಡಿಯನ್ನು ಮುಚ್ಚಲು ಹೋದಾಗ ನರಸಿಂಹಪ್ಪನ ಮೃತ ದೇಹ ಪತ್ತೆಯಾಗಿದೆ. ರೇಣುಕಮ್ಮಳನ್ನು ಪೊಲೀಸರು ಬಂಧಿಸಿದ್ದು, ಈ ಕುರಿತು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.