ಜೆಡಿಎಸ್ ಮುಗಿಸಲು ಕಾಂಗ್ರೆಸ್, ಬಿಜೆಪಿ ಕೋಟ್ಯಾಂತರ ಹಣ ಖರ್ಚು ಮಾಡುತ್ತಿದೆ: ಎಚ್.ಡಿ ದೇವೆಗೌಡ
ಸಕಲೇಶಪುರ,ಎ.10: ನಮ್ಮ ಪಕ್ಷ ಆರ್ಥಿಕವಾಗಿ ಸದೃಡವಾಗಿಲ್ಲ ಎಂಬ ವಾಸ್ತವವನ್ನು ಅರಿತು ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿ ಕೋಟ್ಯಾಂತರ ಹಣ ಖರ್ಚು ಮಾಡಿ ಜೆಡಿಎಸ್‍ನ್ನು ಸೋಲಿಸಲು ಹೊರಟಿದೆ. ಹೀಗಾಗಿ ನಮಗೆ ನೀವೇ ಶ್ರೀರಕ್ಷೆ ಎಂದು ಜೆಡಿಎಸ್ ವರೀಷ್ಠ ಎಚ್.ಡಿ ದೇವೆಗೌಡ ಹೇಳಿದರು.
ಪಟ್ಟಣದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಮಹಿಳೆಯರಿಗೆ ಹಾಗೂ ಸಣ್ಣ ಸಮುದಾಯದವರಿಗೆ ಅಧಿಕಾರ ಕಲ್ಪಿಸಿದ ಹೆಗ್ಗಳಿಕೆ ಜೆಡಿಎಸ್‍ಗೆ ಸಲ್ಲುತ್ತದೆ ಎಂದರು. ದೇವೇಗೌಡ ಹಾಗೂ ಕುಮಾರಸ್ವಾಮಿ ಅವಕಾಶವಾದಿಗಳೆಂದು ದೂರುವವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಅಧಿಕಾರದಲ್ಲಿ ಮೆರೆಯುತ್ತಿರುವ ವ್ಯಕ್ತಿಯನ್ನು ಅಂದು ಉಪಮುಖ್ಯಮಂತ್ರಿಯನ್ನಾಗಿ ಮಾಡಿದ್ದವರು ಯಾರು? ಬೆಂಗಳೂರು ಬಿಬಿಎಂಪಿ ಚುನಾವಣೆಯಲ್ಲಿ ಅಧಿಕಾರಕ್ಕಾಗಿ ಜೆಡಿಎಸ್ ಬಾಗಿಲು ತಟ್ಟಿದ್ದು ಯಾರು ? ರಾಜ್ಯದ ಎರಡು ಸರ್ಕಾರಗಳು ನಮ್ಮನ್ನು ಬಳಸಿಕೊಂಡು ನಮಗೆ ಕೈಕೊಟ್ಟಿರುವುದೆ ಹೆಚ್ಚು. ಆದರೆ ಇಂದು ನಮ್ಮನ್ನೆ ಅವಕಾಶವಾದಿಗಳು ಎಂದು ದೂರುತ್ತಾರೆ ಎಂದರು.
ನಾನು ಕೇವಲ 10 ತಿಂಗಳು ಪ್ರಧಾನಿಯಾಗಿದ್ದರೂ ದೇಶದ ಎಲ್ಲಾ ಮುಸ್ಲಿಂ ಹಾಗೂ ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬಿದ್ದೇನೆ. ಜಿಲ್ಲೆಯಲ್ಲಿ ಶಾಂತಿ ನೆಲಸಲು ಜೆಡಿಎಸ್ ಬೆಂಬಲಿಸುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಆಡಳಿತವಿರುವ ಜಿಲ್ಲೆಗಳಲ್ಲಿ ಯಾವ ರೀತಿ ಕೋಮು ಸೌಹರ್ದತೆ ಕದಡಿದೆ ಎಂಬುದನ್ನು ನೀವೆ ಮನಗಾಣಬೇಕು ಎಂದರು.
ಜೆಡಿಎಸ್ ಮುಖಂಡ ಎಚ್.ಡಿ ರೇವಣ್ಣ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಿದೆ. ಆದರೆ ಇದನ್ನು ತಡೆಗಟ್ಟುವಲ್ಲಿ ಎರಡು ಸರ್ಕಾರಗಳು ವಿಫಲವಾಗಿದೆ. ಹಾಸನಕ್ಕೆ ನೀಡಬೇಕಾಗಿದ್ದ ಐಐಟಿಯನ್ನು ಧಾರವಾಡಕ್ಕೆ ನೀಡಲಾಗಿದ್ದು, ಜಿಲ್ಲೆಯ ಜನತೆಗೆ ವಂಚನೆ ಮಾಡಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯಾವ ಮುಖವಿಟ್ಟು ಓಟು ಕೇಳಲು ಬರುತ್ತಿದ್ದಾರೆ. ಸರ್ಕಾರ ಎತ್ತಿನಹೊಳೆ ಯೋಜನೆ ಹೆಸರಿನಲ್ಲಿ ಈ ಭಾಗದಲ್ಲಿ ಲೂಟಿ ನಡೆಸುತ್ತಿದ್ದು, ನಿರೀಕ್ಷಿತ ಪ್ರಗತಿ ಸಾಧಿಸಲಾಗಿಲ್ಲ. ಜಿಲ್ಲೆಯಲ್ಲಿ ಕಳೆದ 3 ವರ್ಷಗಳಿಂದ ಬರಗಾಲವಿದೆ. 25 ಸಾವಿರ ತೆಂಗಿನ ಗಿಡಗಳು ನಾಶವಾಗಿದ್ದರೂ ಬಿಡಿಗಾಸನ್ನು ಸರ್ಕಾರ ನೀಡದೆ ಜಿಲ್ಲೆಯ ಜನರನ್ನು ವಂಚಿಸಿದೆ. ಅಲ್ಲದೆ ಭಾಗ್ಯಗಳ ಬಾರದಿಂದ ಸರ್ಕಾರದ ಖಜಾನೆ ಖಾಲಿಯಾಗಿರುವ ಕಾರಣ ಲೋಕೋಪಯೋಗಿ ಇಲಾಖೆಯಲ್ಲಿ ಸಾವಿರಾರರು ಕೋಟಿಗೂ ಹೆಚ್ಚಿನ ಬಿಲ್ ಬಾಕಿ ಇದ್ದು, ಗುತ್ತಿಗೆದಾರರು ಬಾಯಿ ಬಿಡುವಂತಾಗಿದೆ. ಆದ್ದರಿಂದ ಸಂಕಷ್ಟದಲ್ಲಿ ಇರುವ ರೈತರ ಸಾಲಮನ್ನ ಮಾಡುವುದಾಗಿ ಘೋಷಿಸಿರುವ ಕುಮಾರಸ್ವಾಮಿ ನೇತೃತ್ವದ ಸರ್ಕಾರವನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಲು ಕಾರ್ಯಕರ್ತರು ಹಗಲಿರುಳು ಶ್ರಮಿಸ ಬೇಕು ಎಂದರು.
ಶಾಸಕ ಎಚ್.ಕೆ ಕುಮಾರಸ್ವಾಮಿ ಮಾತನಾಡಿ, ರೈತರು ಹಾಗೂ ರೈತ ವಿರೋಧಿಗಳ ಚುನಾವಣೆ ಇದಾಗಿದೆ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿದೆ. ದೇಶದಲ್ಲಿ ಲಕ್ಷಾಂತರ ಮಂದಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಸಹ ಕೇಂದ್ರ ಕ್ರಮ ಕೈಗೊಳ್ಳಲು ವಿಫಲವಾಗಿದೆ. ರಾಜ್ಯದಲ್ಲಿ ಭ್ರಷ್ಟಚಾರ ವಿಪರೀತವಾಗಿದ್ದು ಇದರಿಂದ ಜನಸಾಮಾನ್ಯರಿಗೆ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿಧ ಭಾಗ್ಯಗಳನ್ನು ಕಾಂಗ್ರೆಸ್ ಸರ್ಕಾರ ನೀಡುವುದರ ಮುಖಾಂತರ ರಾಜ್ಯದ ಖಜಾನೆ ಖಾಲಿಯಾಗಿದ್ದು ಸಾಲದ ಪ್ರಮಾಣ ಹೆಚ್ಚಿದ್ದು ಇದರ ಹೊರೆಯನ್ನು ಮುಂಬರುವ ಸರ್ಕಾರ ಹೊರಬೇಕಾಗಿದೆ. ಮುಂದೆ ರಾಜ್ಯದಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವುದು ಖಚಿತವಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ರೀತಿಯ ಕುತಂತ್ರ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರ ಕುತಂತ್ರದಿಂದ ದಲಿತರಿಗೆ ಕನಿಷ್ಟ ಉಪಮುಖ್ಯಮಂತ್ರಿ ಸ್ಥಾನವು ದೊರಕದಂತಾಗಿದೆ. ರಾಜ್ಯದ ಎಲ್ಲಾ ವರ್ಗಗಳ ಬಡವರು ಹಾಗೂ ರೈತರು ನೆಮ್ಮದಿಯಿಂದ ಇರಲು ಜೆಡಿಎಸ್ ಅಧಿಕಾರಕ್ಕೇರಬೇಕಾಗಿದ್ದು, ಈ ನಿಟ್ಟಿನಲ್ಲಿ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನ ಜೆಡಿಎಸ್‍ನ್ನು ಕೈಹಿಡಿಯಬೇಕಾಗಿದೆ ಎಂದರು.
ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಂಗಾಧರ್ ಮಾತನಾಡಿ, ಮಾಯಾವತಿ ಹಾಗೂ ದೇವೆಗೌಡರು ದೇಶ ಹಾಗೂ ರಾಜ್ಯದ ಚಿತ್ರಣ ಬದಲಾವಣೆ ಮಾಡಲು ಹೊರಟಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಜನಸಾಮಾನ್ಯರಲ್ಲಿ ಕೋಮು ದ್ವೇಷವನ್ನು ಬಿತ್ತಿ ಧರ್ಮ, ಜಾತಿ, ಭಾಷೆ, ಲಿಂಗದ ಆಧಾರದಲ್ಲಿ ಜನಸಾಮಾನ್ಯರನ್ನು ಒಡೆದು ಆಳಲು ಯತ್ನಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಶಾಂತಿ ಹಾಗೂ ಅಭಿವೃದ್ದಿ ನೆಲೆಸಲು ಪ್ರಾದೇಶಿಕ ಪಕ್ಷದ ಅವಶ್ಯವಿದೆ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್‍ನ್ನು ಬೆಂಬಲಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪ ಸದಸ್ಯರಾದ ಚಂಚಲ ಕುಮಾರಸ್ವಾಮಿ, ಉಜ್ಮಾರಿಜ್ವಿ, ಸುಪ್ರದೀಪ್ತ ಯಜಮಾನ್, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಲ್ ಸೋಮಶೇಖರ್, ಜೆಡಿಎಸ್ ಮುಖಂಡರುಗಳಾದ ಸಚ್ಚಿನ್ ಪ್ರಸಾದ್, ಸ.ಭಾ ಭಾಸ್ಕರ್, ಬೆಕ್ಕನಹಳ್ಳಿ ನಾಗರಾಜ್,ಜೈಬೀಮ್ ಮಂಜು. ಜಾತಹಳ್ಳಿ ಪುಟ್ಟಸ್ವಾಮಿ, ಪ್ರಜ್ವಲ್ ಗೌಡ, ಯಾದ್‍ಗಾರ್ ಇಬ್ರಾಹಿಂ, ಬೇಲೂರು ತಾಲೂಕು ಜೆಡಿಎಸ್ ಅಧ್ಯಕ್ಷ ತೋಚ ಅನಂತಸುಬ್ಬರಾಯ, ಪುರಸಭಾ ಅಧ್ಯಕ್ಷೆ ಪುಷ್ಪಾವತಿ ರಮೇಶ್, ಬಿಎಸ್‍ಪಿ ಜಿಲ್ಲಾಧ್ಯಕ್ಷ ಹರೀಶ್, ಬಿಎಸ್‍ಪಿ ಮುಖಂಡರುಗಳಾದ ಸ್ಟೀವನ್ ಪ್ರಕಾಶ್, ಲಕ್ಷ್ಮಣ್ ಕೀರ್ತಿ ಸೇರಿದಂತೆ ಇನ್ನಿತರರು ಹಾಜರಿದ್ದರು.
ಸಕಲೇಶಪುರದ ಜನ ಹೆಂಡ ಮತ್ತು ಹಣಕ್ಕೆ ಆಸೆ ಪಡುವುದಿಲ್ಲ:
ಹಣ ಮತ್ತು ಹೆಂಡಕ್ಕೆ ಮತದಾರ ತನ್ನ ಮತವನ್ನು ಮಾರಾಟಕ್ಕೆ ಇಟ್ಟಿಲ್ಲ ಎಂದು ಮಾಜಿ ಪ್ರದಾನಿ ಹೆಚ್‍ಡಿ ದೇವೆಗೌಡ ಹೇಳಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು. ಮತದಾರ ಪ್ರಜ್ಞಾವಂತನಾಗಿದ್ದಾನೆ ಚುನಾವಣಾ ಸಂದರ್ಭದಲ್ಲಿ ಇತರೆ ಪಕ್ಷದವರು ನೀಡುವ ಹೆಂಡ ಮತ್ತು ಹಣಕ್ಕೆ ಆಸೆ ಪಡುವುದಿಲ್ಲ. ಕ್ಷೇತ್ರದ ಅಭಿವೃದ್ದಿ ದೃಷ್ಟಿಯಿಂದ ಮತ ಚಲಾಯಿಸುತ್ತಾನೆ ಎಂದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಹಲವಾರು ಅತೃಪ್ತರು ಪಕ್ಷಕ್ಕೆ ಸೇರಲು ಕಾತುರರಾಗಿದ್ದಾರೆ. ಪಕ್ಷದ ಕಾರ್ಯಕರ್ತರಾಗಿ ಬರುವವರಿಗೆ ಸ್ವಾಗತಿಸುತ್ತೇವೆ ಹೊರತು, ಆಸೆ ಭರವಸೆ ನೀಡುವುದಿಲ್ಲ ಎಂದರು