ಶಿವಮೊಗ್ಗ: ಪ್ರತ್ಯೇಕ ರಸ್ತೆ ಅಪಘಾತ; ಮೂವರು ಮೃತ್ಯು
ಶಿವಮೊಗ್ಗ, ಏ. 10: ಜಿಲ್ಲೆಯ ಶಿವಮೊಗ್ಗ, ಭದ್ರಾವತಿ ಹಾಗೂ ತೀರ್ಥಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಶಿವಮೊಗ್ಗ ವರದಿ: ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಸೂಡಿ ಗ್ರಾಮದಲ್ಲಿ ಹಾಲು ಸಾಗಾಣೆ ಮಾಡುವ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮುನಿಯಪ್ಪ (50) ಎಂಬುವರು ಮೃತಪಟ್ಟಿದ್ದಾರೆ. ವಾಹನ ಚಾಲಕನ ಅಜಾಗರೂಕ, ವೇಗದ ಚಾಲನೆಯೇ ಅವಘಡಕ್ಕೆ ಕಾರಣವಾಗಿದ್ದು ಚಾಲಕನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೈದೊಳಲು ಗ್ರಾಮದ ಸಂತೆ ಮೈದಾನದ ಕಡೆಯಿಂದ ಮಲ್ಲೇಶ್ವರ ಪ್ರೌಢಶಾಲೆಯ ರಸ್ತೆಯೆಡೆಗೆ ತೆರಳುತ್ತಿದ್ದ ಟ್ರ್ಯಾಕ್ಟರೊಂದು ಪಲ್ಟಿಯಾಗಿ ಬಿದ್ದ ಪರಿಣಾಮ ಅದರ ಚಾಲಕ ಭುವನೇಂದ್ರ ಎಂಬುವರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೀರ್ಥಹಳ್ಳಿ ವರದಿ: ತಾಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಕುಂದ ಕ್ರಾಸ್ ಬಳಿ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ ಎಂಬುವರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮಂಜುನಾಥ್‍ರವರು ಆಟೋದಿಂದ ತಲೆ ಹೊರಹಾಕಿದ ವೇಳೆ, ಎದುರಿನಿಂದ ಆಗಮಿಸಿದ ವಾಹನ ಇವರ ತಲೆಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.