×
Ad

ತುಮಕೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ; 36 ಲಕ್ಷ ನಗದು, 2886 ಲೀ ಮದ್ಯ ವಶ

Update: 2018-04-10 22:55 IST

ತುಮಕೂರು,ಏ.10: ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ಮಾರ್ಚ್ 27 ರಿಂದ ಇಂದಿನವರೆಗೂ 2886 ಲೀಟರ್ ಮದ್ಯ, 35,76,410 ರೂ.ನಗದು ವಶಪಡಿಸಿಕೊಂಡು ಒಟ್ಟು 81 ಪ್ರಕರಣಗಳಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ. ಮೋಹನ್ ರಾಜ್ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದು, ಮಾರ್ಚ್ 27ರಿಂದ ಇಲ್ಲಿಯವರೆಗೂ ಜಿಲ್ಲಾದ್ಯಂತ ಒಟ್ಟು ರೂ.35,76,410 ರೂ.ಗಳ ನಗದನ್ನು ವಶಪಡಿಸಕೊಂಡಿದ್ದು, ಅಗತ್ಯ ದಾಖಲೆಗಳ ಪರಿಶೀಲನೆಯ ನಂತರ ರೂ.10,35,790 ರೂ.ಗಳನ್ನು ಸಂಬಂಧಿಸಿದವರಿಗೆ ಮರು ಪಾವತಿಸಲಾಗಿದೆ ಎಂದರು. 

ಜಿಲ್ಲೆಯಲ್ಲಿ 2886 ಲೀ. ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಅಲ್ಲದೆ ಜಿಲ್ಲೆಯಲ್ಲಿ ಅಕ್ರಮ ಮದ್ಯ ಸಾಗಾಣಿಕೆಯನ್ನು ನಿಯಂತ್ರಿಸಲಾಗುತ್ತಿದೆ. ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು 45 ಚೆಕ್‍ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ದಿನದ 24 ಗಂಟೆಯಲ್ಲಿ ತಪಾಸಣೆ ನಡೆಯಲಿದೆ ಎಂದು ಅವರು ತಿಳಿಸಿದರು. 

ಸಾರ್ವಜನಿಕರಿಂದ ಮತದಾರರ ಪಟ್ಟಿ, ಎಪಿಕ್‍ಕಾರ್ಡ್, ನೀತಿ ಸಂಹಿತೆ ಉಲ್ಲಂಘನೆ, ಇತ್ಯಾದಿ ವಿಷಯಗಳ ಬಗ್ಗೆ ದೂರು, ಅಹವಾಲು ಸ್ವೀಕರಿಸಲು ಮತ್ತು ಮಾಹಿತಿ ಒದಗಿಸಲು ಜಿಲ್ಲಾ ಕೇಂದ್ರ ಹಾಗೂ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಮ್ ತೆರೆಯಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲೂ 18004252744 ಟೋಲ್ ಪ್ರೀ ಕಂಟ್ರೋಲ್ ರೂಮ್ ತೆರೆಯಲಾಗಿದೆ ಎಂದು ಅವರು ಹೇಳಿದರು. 

ಸಾರ್ವಜನಿಕರ, ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ಅನುಕೂಲಕ್ಕಾಗಿ ಸುವಿಧಾ, ಸಮಾಧಾನ್ ಮತ್ತು ಸುಗಮ್ ಎಂಬ ತಂತ್ರಾಂಶಗಳನ್ನು ಸಿದ್ಧಪಡಿಸಿದ್ದು, ಇದೊಂದು ಏಕಗವಾಕ್ಷಿ ಕಾರ್ಯಕ್ರಮವಾಗಿದೆ. ಅಲ್ಲದೆ ಜಿಲ್ಲಾಡಳಿತದ ವೆಬ್‍ಸೈಟ್ tumkur.nic.in ನಲ್ಲಿ ವಿಧಾನಸಭಾ ಚುನಾವಣೆ -2018ರ ಪ್ರತ್ಯೇಕ ಲಿಂಕ್ ತಯಾರಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು. 

ಕಳೆದ ೆ.8ರಂದು ಹಮ್ಮಿಕೊಂಡಿದ್ದ 'ಮಿಂಚಿನ ನೋಂದಣಿ' ಕಾರ್ಯಕ್ರಮದಡಿ ಒಟ್ಟು 18,691 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ ನಮೂನೆ-6-14818, ನಮೂನೆ-7ರ 1884, ನಮೂನೆ-8 ರ 1606,ನಮೂನೆ 8ಎ-383 ಅರ್ಜಿಗಳಾಗಿವೆ ಎಂದು ತಿಳಿಸಿದರು. 

ಮಧುಗಿರಿಯಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಸಾಲ ವಿತರಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಮಧುಗಿರಿ ಚುನಾವಣಾಧಿಕಾರಿಗಳು ಸಾಲ ನೀಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಈ ದೂರುಗಳ ಬಗ್ಗೆ 2-3 ದಿನಗಳಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ ಎಂದರು. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ.ಪಂ. ಸಿಇಓ ಹಾಗೂ ಎಂಸಿಸಿ ನೋಡೆಲ್ ಅಧಿಕಾರಿ ಅನೀಸ್ ಕಣ್ಮಣಿ ಜಾಯ್, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನಲೆಯಲ್ಲಿ 42 ಸಿಲಿಂಡರ್ ಗಳು,13 ಸ್ಟೌವ್‍ಗಳು, 56 ನ್ಯೂ ಇಂಡಿಯನ್ ಅಸೂರೇನ್ಸ್ ಮೆಡಿಕಲ್ ಇನ್ಸುರೆನ್ಸ್ ಪಾಲಿಸಿ ಬಾಂಡ್, 62 ಸೀರೆ, 297 ಚಿಕ್ಕ ಹಾಟ್ ಬಾಕ್ಸ್, ಸೇರಿದಂತೆ ರೂ. 39,31,350 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಗಿರಿ ಅವರು ಮಾತನಾಡಿ, ಅಬಕಾರಿ ಅಕ್ರಮಗಳನ್ನು ತಡೆಯಲು ಮುಂಜಾಗೃತಾ ಕ್ರಮವಾಗಿ ಜಿಲ್ಲೆಯಲ್ಲಿ 4 ಪ್ಲೈಯಿಂಗ್ ಸ್ಕ್ವಾಡ್ ಹಾಗೂ ರಾತ್ರಿ ವೇಳೆಯ 03 ಗಸ್ತು ತಂಡ ರಚಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಜಿಲ್ಲೆಯಲ್ಲಿ 420 ದಾಳಿಗಳನ್ನು ನಡೆಸಿ 72 ಪ್ರಕರಣಗಳನ್ನು ದಾಖಲಿಸಲಾಗಿದೆ. 289.950 ಲೀ. ಮದ್ಯ, 2467.380 ಲೀ. ಬಿಯರ್, 82 ಲೀ. ಸೇಂದಿ, 01 ಲಾರಿ, 3 ಕಾರು, 12 ದ್ವಿಚಕ್ರ ವಾಹನ ಸೇರಿ ಒಟ್ಟು 28,16,858 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಕೊಳ್ಳಲಾಗಿದೆ ಅಲ್ಲದೆ 60 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ ಎಂದರು. 

ಲೈಸನ್ಸ್ ಪಡೆದಿರುವ ಸಿಎಲ್ -2 ಅಂಗಡಿಗಳು ಬೆಳಿಗ್ಗೆ 10 ಗಂಟೆಗೆ ತೆರೆದು ರಾತ್ರಿ 10.30 ಗಂಟೆಗೆ ಮುಚ್ಚುವುದು. ಅದೇ ರೀತಿ ಸಿಎಲ್-4 ಹಾಗೂ ಸಿಎಲ್-7ನ್ನು ಬೆಳಗ್ಗೆ 9 ಗಂಟೆಯಿಂದ ರಾತ್ರಿ 12 ಗಂಟೆ, ಸಿಎಲ್-9 ಹಾಗೂ ಪಬ್ (ಆರ್‍ವಿಬಿ) ಬೆಳಗ್ಗೆ 10 ಗಂಟೆಯಿಂದ ರಾತ್ರಿ 11.30 ಗಂಟೆ ಹಾಗೂ ಸಿಎಲ್(11)(ಸಿ) ಅಂಗಡಿಯ ಬೆಳಗ್ಗೆ 11 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವ್ಯವಹಾರ ನಡೆಸಬಹುದು. ಅವಧಿ ಹಾಗೂ ನಿಯಮ ಮೀರಿ ವ್ಯವಹಾರ ನಡೆಸುವ ಅಂಗಡಿಗಳ ಬಗ್ಗೆ ಟೂಲ್ ಪ್ರೀ 1800-4252160 ಹಾಗೂ ತಾಲೂಕು ಕೇಂದ್ರ ಹಾಗೂ ಉಪ ವಿಭಾಗಗಳಲ್ಲಿ ತೆರೆಯಲಾಗಿರುವ ಕಂಟ್ರೋಲ್ ರೂಂಗಳಲ್ಲಿ ದೂರು/ಮಾಹಿತಿ ಸಲ್ಲಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು. 

ನಿಗದಿತ ಸಮಯ ಮೀರಿ ಮದ್ಯ ಮಾರಾಟ ಮಾಡುತ್ತಿದ್ದ ತುಮಕೂರಿನಲ್ಲಿರುವ ಚಾಮುಂಡೇಶ್ವರಿ ವೈನ್ಸ್ (ಸಿಎಲ್2) ಹಾಗೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಪಾವಗಡ ತಾಲೂಕಿನ ರೇಣುಕಾ ಮಾತಾ ಬಾರ್ ಮತ್ತು ರೆಸ್ಟೋರೆಂಟ್ (ಸಿಎಲ್-9) 5 ಸನ್ನದನ್ನು ಜಿಲ್ಲಾಧಿಕಾರಿಗಳು ಅಮಾನತ್ತು ಮಾಡಿದ್ದಾರೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಶೇಖರ್,ಸೇರಿದಂತೆ ನೋಡೆಲ್ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News