×
Ad

ದೇವೇಗೌಡರ ಕುಟುಂಬ ಒಕ್ಕಲಿಗ ನಾಯಕರಿಗೆ ಅನ್ಯಾಯ ಮಾಡಿದೆ: ಶಾಸಕ ಚಲುವರಾಯಸ್ವಾಮಿ

Update: 2018-04-10 23:31 IST

ಮಂಡ್ಯ, ಎ.10: ಗೌಡರ ನಾಯಕ ಅನ್ನೋ ದೇವೇಗೌಡರ ಕುಟುಂಬ ಒಕ್ಕಲಿಗ ನಾಯಕರಿಗೆ ಅನ್ಯಾಯ ಮಾಡಿದೆ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದ್ದಾರೆ.

ಮಂಗಳವಾರ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇವೇಗೌಡರ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದರು.

ಎರಡನೇ ಬಾರಿ ಎಸ್.ಎಂ.ಕೃಷ್ಣ ಸಿಎಂ ಆಗೋದು ಹಾಗೂ ಸಮ್ಮಿಶ್ರ ಸರಕಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಮಂತ್ರಿ ಸ್ಥಾನ ತಪ್ಪಿಸಿದ್ದು ದೇವೇಗೌಡರು. ಬಚ್ಚೇಗೌಡರ ಸೋಲಿಗೆ ಕುಮಾರಸ್ವಾಮಿ ಕಾರಣ ಎಂದು ಅವರು ದೂರಿದರು. ಚುಂಚನಗಿರಿ ಮಠದ ಬಗ್ಗೆಯೂ ಸರಿಯಾಗಿ ನಡೆದುಕೊಳ್ಳಲಿಲ್ಲ. ದೇವೇಗೌಡರಿಗೆ ಜಿಲ್ಲೆಯ ವ್ಯಕ್ತಿಗಳು ನಾಯಕರಾಗಬಾರದು ಎಂಬ ಭಾವನೆ ಇದೆ. ಈ ಬಗ್ಗೆ ಜಿಲ್ಲೆಯ ಜನರು ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಚುಂಚನಗಿರಿ ಮಠದ ಬಗ್ಗೆ ನಾನು ಅಗೌರವವಾಗಿ ನಡೆದುಕೊಂಡಿಲ್ಲ. ಶ್ರೀಗಳ ಜತೆ ರಾಜಕಾರಣ ಮಾತಾಡಿಲ್ಲ. ಆದರೆ, ಕೆಲವು ಚಾನಲ್‍ಗಳು ಹೇಳಿಕೆ ತಿರುಚಿವೆ ಎಂದು ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿರು. 

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರೈತರ, ಜನಸಾಮಾನ್ಯರ ಪರವಾದ ಯೋಜನೆಗಳನ್ನು ಜಾರಿಗೊಳಿಸಿಲ್ಲವೆಂದು ಟೀಕಿಸಿದ ಅವರು, ಪ್ರಸಕ್ತ ರಾಜ್ಯದ ಚುನಾವಣಾ ಫಲಿತಾಂಶ ದೇಶದ ರಾಜಕೀಯ ಭವಿಷ್ಯ ನಿರ್ಧರಿಸಲಿದೆ ಎಂದರು. ಸಿದ್ದರಾಮಯ್ಯ ಸರಕಾರ ನುಡಿದಂತೆ ನಡೆದಿದೆ. ನೀಡಿದ್ದ ಭರವಸೆಗಳನ್ನು ಈಡೇರಿಸಿದೆ. ಜನಪರ ಯೋಜನೆಗಳು ಮನೆ ಮಾತಾಗಿವೆ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಬಗ್ಗೆ ಸಮೀಕ್ಷೆಗಳೂ ಹೇಳಿವೆ. ಹಾಗಾಗಿ ಜಿಲ್ಲೆಯ ಜನರು ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಮಾಜಿ ಶಾಸಕರಾದ ಜಮೀರ್ ಅಹಮದ್, ರಮೇಶ್‍ಬಾಬು, ಎಚ್.ಬಿ.ರಾಮು, ಜಿಪಂ ಸದಸ್ಯ ರಾಮಲಿಂಗಯ್ಯ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಚಿಜನಾ ಶ್ರೀಕಾಂತ್, ತಾಪಂ ಮಾಜಿ ಅಧ್ಯಕ್ಷ ಟಿ.ಕೆ.ತ್ಯಾಗರಾಜು, ರಾಮೇಗೌಡ, ಹೆಮ್ಮಿಗೆ ಸಿದ್ದಪ್ಪ, ಜಯರಾಂ, ಗುಣವಂತ, ಇತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News